ಬಿಜಿನೆಸ್ ನಡೆಸುವುದು ಹಾಗೂ ಅದನ್ನು ಯಶಸ್ವಿ ಆಗುವಂತೆ ಮಾಡುವುದು ಸುಲಭವಲ್ಲ. ಅಂಥದ್ದರಲ್ಲಿ ಭಾರತದಲ್ಲಿನ ಈ ಜನಾಂಗವೇ ವ್ಯಾಪಾರದಲ್ಲಿ ಎತ್ತಿದ ಕೈ ಎನಿಸಿಕೊಂಡಿದೆ. ಜನಸ್ನೇಹಿ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. ಅಂದ ಹಾಗೆ ಈಗ ಹೇಳಲು ಹೊರಟಿರುವುದು 'ಮಾರವಾಡಿ' ಸಮುದಾಯದ ಬಿಜಿನೆಸ್ ಮೂಲ ಮಂತ್ರದ ಬಗ್ಗೆ.
ಆದಾಯ ಗಳಿಕೆಗೆ ಆ ಸಮುದಾಯದ ಹಿರಿಯರು ಹಾಕಿಕೊಂಡು ಬಂದಿರುವ ಐದು ಅಲಿಖಿತ ನಿಯಮಗಳು. ಅವುಗಳನ್ನು ಇಲ್ಲಿ ನೀಡಲಾಗುತ್ತಿದೆ. ವ್ಯಾಪಾರ ಶುರು ಮಾಡಬಯಸುವ ಹಾಗೂ ಈಗಾಗಲೇ ವ್ಯಾಪಾರ ಮಾಡುತ್ತಿರುವವರು ಈ ನಿಯಮವನ್ನು ಅಳೆದು- ತೂಗಿ ನೋಡಿದರೆ ಇದೆಂಥ ಅದ್ಭುತವಾದ ಚಿಂತನೆ ಎಂಬುದು ಗಮನಕ್ಕೆ ಬರುತ್ತದೆ.
ನಿತ್ಯ ಗಮನಿಸುವ ಅಗತ್ಯ ಇರಬಾರದು
ಮೊದಲನೆಯ ಆದಾಯ ಮೂಲವು ನೇರ ಪಾಲ್ಗೊಳ್ಳುವಂಥದ್ದಾಗಿರ ಬಾರದು. ವ್ಯಾಪಾರದ ಮೂಲಕ ಬರುವ ಆದಾಯದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ಅಗತ್ಯ ಇರಬಾರದು. ಆದರೆ ದೀರ್ಘಾವಧಿ ಲೆಕ್ಕ ಹಾಕಿದಾಗ ಯಾವುದೇ ತಪ್ಪಾಗಬಾರದು. ಒಂದು ವ್ಯವಸ್ಥೆ ಅಂತಾದ ಮೇಲೆ ತನ್ನಷ್ಟಕ್ಕೆ ತಾನು ಆ ವ್ಯವಹಾರ ನಡೆದುಕೊಂಡು ಹೋಗಬೇಕು. ಅದರ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳಬಾರದು. ವಿತರಣೆ ವ್ಯವಹಾರ, ಉತ್ಪಾದನಾ ಘಟಕ ಉತ್ತಮ ಉದಾಹರಣೆಗಳು.
ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ
ಮೊದಲನೇ ಮೂಲದಿಂದ ಬರುವ ಆದಾಯವನ್ನು ಶೀಘ್ರವಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಬೇಕು. ಆ ಮೂಲಕ ತಿಂಗಳು- ತಿಂಗಳೂ ಬಾಡಿಗೆ ಆದಾಯ ಬರಬೇಕು. ಜತೆಗೆ ವಯಸ್ಸಾದ ಕಾಲಕ್ಕೆ ಆ ಆಸ್ತಿಯ ಬೆಲೆ ಏರಿಕೆಯಿಂದ ಭದ್ರತೆಯ ವ್ಯವಸ್ಥೆ ಆಗಬೇಕು.
ಇಷ್ಟಪಡುವಂಥ ಕೆಲಸವನ್ನೇ ನಿತ್ಯ ಮಾಡಬೇಕು
ನಿತ್ಯವು ಇಷ್ಟ ಪಡುವಂಥ ಕೆಲಸ ಮಾತ್ರ ಮಾಡಬೇಕು. ಇದರಿಂದ ಮಾನಸಿಕ- ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಅದರಿಂದ ತುಂಬ ದೊಡ್ಡ ಲಾಭ ಬರಲೇಬೇಕು ಅಂತಿಲ್ಲ. ಆದರೆ ಅದು ಆಸಕ್ತಿಕರವಾಗಿರಬೇಕು. ಪುಸ್ತಕ ಬರೆಯುವುದರಿಂದ ಹಿಡಿದು ಕೇಕ್ ಮಾರುವ ತನಕ... ಇಷ್ಟದ, ನಷ್ಟವಾಗದ ರೀತಿಯ ಕೆಲಸ ಅದಾಗಿರಬೇಕು. ಮೊದಲನೇ ಆದಾಯ ಮೂಲವು ಒಂದು ಹಂತಕ್ಕೆ ಬಂದ ಕೂಡಲೇ ಈ ರೀತಿ ಇಷ್ಟದ ವ್ಯವಹಾರ ಶುರು ಮಾಡಬೇಕು.
ಸ್ನೇಹ- ಸಂಬಂಧ ಗಳಿಕೆಗೆ ಪ್ರಯತ್ನಿಸಬೇಕು
ನಿತ್ಯದ ಖರ್ಚಿಗೆ ವ್ಯವಸ್ಥೆ ಹಾಗೂ ಭವಿಷ್ಯದ ಭದ್ರತೆಗೆ ದಾರಿಯಾದ ಮೇಲೆ ಸಾಮಾಜಿಕವಾಗಿ ಸಂಬಂಧ, ಸ್ನೇಹ ಉತ್ತಮವಾಗಿ ಇರಿಸಿಕೊಳ್ಳಬೇಕು. ಎಷ್ಟೇ ಹಣವಿದ್ದರೂ ಜನರನ್ನು ಸಂಪಾದಿಸದ ಮನುಷ್ಯ ಅನಾಥನಾಗುತ್ತಾನೆ. ಆದ್ದರಿಂದ ಸಮಾಜ ಸೇವೆಗಾಗಿ ಒಂದಿಷ್ಟು ಸಮಯ, ಹಣವನ್ನು ಮೀಸಲಿಡಬೇಕು. ಇದು ಕೂಡ ಆದಾಯವಾಗಿ ಪರಿವರ್ತನೆ ಆಗುತ್ತದೆ.
ದುಡ್ಡಿನ ಪ್ರತಿಫಲದ ಜತೆಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ
ಐದನೇ ಆದಾಯದ ಮೂಲವು ಈ ಮೇಲಿನ ನಾಲ್ಕೂ ಮೂಲದಿಂದ ಹುಟ್ಟಿಕೊಳ್ಳುವ ದಾರಿ ಆಗಿರುತ್ತದೆ. ಸ್ನೇಹಿತರು- ಸಂಬಂಧಿಗಳ ವ್ಯವಹಾರದಲ್ಲಿ ಹಣ ತೊಡಗಿಸಬೇಕು. ಇದೊಂದು ಬಗೆಯಲ್ಲಿ ಅಸಂಘಟಿತ ಬಂಡವಾಳ ಹೂಡಿಕೆ ವಿಧಾನ. ತಮ್ಮದೇ ಸಮುದಾಯದಲ್ಲಿ ಶ್ರಮಿಸುವವರ ಬೆನ್ನಿಗೆ ನಿಂತು, ಜತೆಗೆ ಅದರಲ್ಲಿ ಹಾಕುವ ದುಡ್ಡಿಗೆ ಒಂದಿಷ್ಟು ಪ್ರತಿಫಲ ಪಡೆಯುವ ವಿಧಾನ. ಇದರಿಂದ ಹಣದಿಂದ ಮತ್ತಷ್ಟು ಹಣವೂ ಸಂಪಾದನೆ ಆಗುತ್ತದೆ. ಜತೆಗೆ ಹೆಸರು, ಕೀರ್ತಿ, ಸಮಾಜದವರಿಗೆ ಸಹಾಯ ಮಾಡಿದ ತೃಪ್ತಿ ಸಹ ಸಿಗುತ್ತದೆ.


Click it and Unblock the Notifications