ಅರುಣ್ ಮಿಶ್ರಾ ಅವರು ವೇದಾಂತ ಲಿಮಿಟೆಡ್‌ನ ಅಂಗಸಂಸ್ಥೆಯಾದ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ (HZL) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ಪೂರ್ಣಾವಧಿಯ ನಿರ್ದೇಶಕರಾಗಿದ್ದಾರೆ.
ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ದೇಶದ ಪ್ರಾಥಮಿಕ ಸತು ಉದ್ಯಮದಲ್ಲಿ ಶೇಕಡ 78 ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಸೀಸ ಮತ್ತು ಸತು ಮೈನರ್ಸ್ ಆಗಿದೆ. ಅರುಣ್ ಅವರು 2020 ಆಗಸ್ಟ್ ನಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ಮೊದಲೇ ತಿಳಿಸಿದಂತೆ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಭಾರತೀಯ ಬಿಲಿಯನೇರ್ ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ವೇದಾಂತ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ವೇದಾಂತ ಲಿಮಿಟೆಡ್ ಕಂಪನಿಯಲ್ಲಿ ಶೇಕಡ 64.9 ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ ಪಾಲನ್ನು ಅಂದರೆ ಶೇಕಡ 29.5 ರಷ್ಟು ಪಾಲನ್ನು ಸರ್ಕಾರವು ಹೊಂದಿದೆ.
ಮಿಶ್ರಾ ಅವರು 2019 ರ ನವೆಂಬರ್‌ನಲ್ಲಿ HZL ನ ಡೆಪ್ಯೂಟಿ ಸಿಇಒ ಆಗಿ ನೇಮಕಗೊಂಡರು. ಇದಾದ ಬಳಿಕ 2020 ರ ಆಗಸ್ಟ್ 1 ರಂದು ಅವರಿಗೆ ಸಿಇಒ ಸ್ಥಾನಕ್ಕೆ ಭಡ್ತಿ ನೀಡಲಾಯಿತು. ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸೆಪ್ಟೆಂಬರ್ 29ರ ಮಾಹಿತಿಯಂತೆ 1,30,000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಶುಕ್ರವಾರದಂದು ಕಂಪನಿಯ ಷೇರು ದರ 308.40 ರೂಪಾಯಿ ಆಗಿತ್ತು.
ಅರುಣ್ ಮಿಶ್ರಾ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ನೋಡುವುದಾದರೆ, ಖರಗ್‌ಪುರದ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ನ್ಯೂ ಸೌತ್ ವೇಲ್ಸ್ ಸಿಡ್ನಿ ವಿಶ್ವವಿದ್ಯಾನಿಲಯದಿಂದ ಮೈನಿಂಗ್ ಅಂಡ್ ಬೆನೆಫಿಸಿಯೇಷನ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡರು. ಇದಾದ ಬಳಿಕ ಫ್ರಾನ್ಸ್‌ನ CEDEP ಯಿಂದ ಜನರಲ್ ಮ್ಯಾನೇಜ್‌ಮೆಂಟ್‌ನಲ್ಲಿ ಮತ್ತೊಂದು ಡಿಪ್ಲೊಮಾ ಪಡೆದರು.
ಮಿಶ್ರಾ ಅವರು ಟಾಟಾ ಸ್ಟೀಲ್‌ನ ಮಾಜಿ ಉದ್ಯೋಗಿಯಾಗಿದ್ದಾರೆ. ಅವರ ವೃತ್ತಿ ಜೀವನವನ್ನು 1988 ರ ಜುಲೈನಲ್ಲಿ ವೆಸ್ಟ್ ಬೊಕಾರೊ ಕೋಲ್ ವಾಷರಿ ಯ (ಎಲೆಕ್ಟ್ರಿಕಲ್) ಕಂಪನಿಯಲ್ಲಿ ಮೈಂಟೆನನ್ಸ್ ಹೆಡ್ ಆಗಿ ಪ್ರಾರಂಭಿಸಿದರು. ಅರುಣ್ ಅವರು 33 ವರ್ಷಗಳ ಶ್ರೀಮಂತ ವೃಜೀವನದ ಅನುಭವವನ್ನು ಹೊಂದಿದ್ದಾರೆ.
ಅರುಣ್ ಅವರು ಮಮಿತಾ ಮಿಶ್ರಾ ಅವರನ್ನು ವಿವಾಹವಾಗಿದ್ದು ಈ ದಂಪತಿಗಳಿಗೆ ಸ್ತುತಿ ಮತ್ತು ಶ್ರೇಷ್ಠಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಗಾಯನ, ಗಾಲ್ಫ್ ಮತ್ತು ಫುಟ್‌ಬಾಲ್ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಆಗಸ್ಟ್ 1, 2023 ರಿಂದ, ಮಿಶ್ರಾ ಅವರನ್ನು ವೇದಾಂತ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.


Click it and Unblock the Notifications