ಯಾವುದೇ ರೀತಿಯ ಯಶಸ್ಸು ಕೂಡ ಸುಲಭವಾಗಿ ಬರುವುದಿಲ್ಲ. ಬದುಕಿನಲ್ಲಿ ಏನನ್ನಾದರೂ ಮಾಡಬೇಕೆಂಬ ದೃಢ ನಿರ್ಧಾರ ಮಾಡಿದರೆ ಆ ಗುರಿಯನ್ನು ಮುಟ್ಟುವಲ್ಲಿ ಎದುರಾಗುವ ಯಾವುದೇ ಅಡ್ಡಿ ಕೂಡ ನಿಮ್ಮನ್ನು ಅದರಿಂದ ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ರೀತಿ ಚಿನು ಕಾಲಾ ಎಂಬ ಯುವತಿ ಬಾಳಲ್ಲಿಯೂ ನಡೆದಿದೆ.
ಚಿನು ಕಲಾ ಅವರು ಪ್ರಸ್ತುತ ಭಾರತದ ಅತ್ಯಂತ ಸ್ಫೂರ್ತಿದಾಯಕ ಉದ್ಯಮಿಯಾಗಿದ್ದಾರೆ. ಅತ್ಯಂತ ಕಷ್ಟಕರವಾದ ಬಾಲ್ಯವನ್ನು ಕಳೆದಿರುವ ಅವರು 100 ಕೋಟಿಯ ಜ್ಯುವೆಲ್ಲರಿ ಬ್ರಾಂಡ್‌ನೊಂದಿಗೆ ಬಿಎಂಡಬ್ಲ್ಯು ಕಾರಿನಲ್ಲಿ ಓಡಾಡುತ್ತಿದ್ದಾರೆ. ಚಿನು ಅವರು ಜನಪ್ರಿಯ ಫ್ಯಾಷನ್ ಜ್ಯುವೆಲ್ಲರಿ ಬ್ರಾಂಡ್ ಆದ ರುಬಾನ್ಸ್ ಆಕ್ಸೆಸರೀಸ್‌ನ ನಿರ್ದೇಶಕರಾಗಿದ್ದಾರೆ. ಚಿನು ಕಲಾ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಚಿನು ಕಲಾ ಅವರ ಬಾಲ್ಯ ಜೀವನ
ಚಿನು ಅವರ ಬಾಲ್ಯ ಜೀವನವು ಬಹಳ ಕಷ್ಟದಿಂದ ಕೂಡಿದ್ದು, ಕೇವಲ 15 ವರ್ಷ ವಯಸ್ಸಿರಬೇಕಾದರೆ, ಕೈಯಲ್ಲಿ 300 ರೂ. ಹಾಗೂ ಒಂದಷ್ಟು ಬಟ್ಟೆ ಹಿಡಿದುಕೊಂಡು ಮನೆಬಿಟ್ಟು ಹೊರಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ರೀತಿ ಮನೆಬಿಟ್ಟು ಬಂದ ಆಕೆಯು ಎರಡು ದಿನ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದು, ಯಾರೊಬ್ಬರೂ ಸಹಾಯಕ್ಕೆ ಇರಲಿಲ್ಲ. ಹೊಟ್ಟೆಪಾಡಿಗಾಗಿ ದಿನಕ್ಕೆ 20 ರೂ. ಸಂಬಳಕ್ಕೆ ಸೇಲ್ಸ್ ಹುಡುಗಿಯಾಗಿ ದುಡಿಯತೊಡಗಿದ್ದಳು.
ಪ್ರಸ್ತುತ ಚಿನು ಅವರು ಬೆಂಗಳೂರಿನಲ್ಲಿ 5000 ಚದರ ಅಡಿಯ ದೊಡ್ಡ ಮನೆಯಲ್ಲಿ ವಾಸವಾಗಿದ್ದು, ಬಿಎಂಡಬ್ಲ್ಯು-5 ಸೀರಿಸ್ ಐಷಾರಾಮಿ ಕಾರು ಹೊಂದಿದ್ದಾರೆ. ಇಷ್ಟೊಂದು ಸಾಧನೆ- ಯಶಸ್ವಿನ ನಡುವೆಯೂ ಚಿನು ಈಗಲೂ ದಿನಕ್ಕೆ 15 ಗಂಟೆ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರುಬಾನ್ಸ್‌ನ್ನು ಭಾರತದ ಅತಿದೊಡ್ಡ ಜ್ಯುವೆಲ್ಲರಿ ಬ್ರಾಂಡ್ ಮಾಡುವ ಕನಸು ಹೊಂದಿದ್ದಾರೆ.
ಚಿನುಗೆ ಹೆಚ್ಚಿನ ಶಿಕ್ಷಣ ಪಡೆಯುವುದು ಅಸಾಧ್ಯವಾಗಿತ್ತು. ಏಕೆಂದರೆ 15ನೇ ವಯಸ್ಸಿಗೆ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದ್ದ ಕಾರಣ 10ನೇ ತರಗತಿವರೆಗೆ ಮಾತ್ರ ಓದಲು ಸಾಧ್ಯವಾಗಿತ್ತು. ಚಿನು ಚಾಕು ಹಾಗೂ ಕೋಸ್ಟರ್ ಅನ್ನು ಮಾರಾಟ ಮಾಡುವ ಮೂಲಕ ತಮ್ಮ ಮೊದಲ ವೃತ್ತಿಯನ್ನು ಪ್ರಾರಂಭಿಸಿದ್ದರು. ಆ ದಿನಗಳಲ್ಲಿ ಶೌಚಾಲಯ ಅಥವಾ ಕಿಚನ್ ಇಲ್ಲದಂಥಹ ಹಾಲ್‌ನಲ್ಲಿ ಜೀವನ ಸಾಗಿಸುತ್ತಿದ್ದರು.
ಮಿಸ್ ಇಂಡಿಯಾ ಸ್ಪರ್ಧಿ
ಜೀವನದಲ್ಲಿನ ಚಿನು ಅವರ ಕಠಿಣ ಪರಿಶ್ರಮ ಹಾಗೂ ಬದ್ಧತೆಯು ನಿಧಾನಕ್ಕೆ ಫಲವನ್ನು ನೀಡಲು ಪ್ರಾರಂಭಿಸಿತ್ತು. ಹೀಗೆ ಯಶಸ್ಸನ್ನು ಸಾಧಿಸುತ್ತ ಹೋದ ಚಿನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಟಾಪ್ 10 ಮಂದಿಯ ಫೈನಲ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಇದು ಅವರ ಬದುಕಿಗೆ ದೊಡ್ಡ ತಿರುವನ್ನು ನೀಡಿದ್ದು, ಕೇವಲ ಮೂರು ಲಕ್ಷ ಹೂಡಿಕೆಯೊಂದಿಗೆ ರುಬಾನ್ಸ್ ಆಕ್ಸೆಸರೀಸ್ ಅನ್ನು ಸ್ಥಾಪಿಸಿದರು. ಅದರ ನಿರ್ವಹಣೆಗಾಗಿ ತಮ್ಮದೇ ಕಿಯೋಸ್ಕ್ ಅನ್ನು ಪ್ರಾರಂಭಿಸಿದರು. 2018ರ ವೇಳೆ ಒಟ್ಟು ಐದು ಕಿಯೋಸ್ಕ್‌ಗಳನ್ನು ಸ್ಥಾಪಿಸಿದರು. ಕೊರೊನಾ ಸಂದರ್ಭದಲ್ಲಿ ಅವರು ಜ್ಯುವೆಲ್ಲರಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಕಾರಣ ಸೇಲ್ಸ್ ಕೂಡ ಹೆಚ್ಚಾಯಿತು.
"ಆ ದಿನಗಳಲ್ಲಿ ಅಪ್ಪ-ಅಮ್ಮನನ್ನು ಬಿಟ್ಟು ಮನೆಯಿಂದ ಹೊರಟು ಬರಬೇಕಾದರೆ ನನ್ನ ಕೈಯಲ್ಲಿ ಕೇವಲ 300 ರೂ. ಇತ್ತು. ಆದರೆ ಆ ದಿನಗಳಲ್ಲಿ ಏನನ್ನು ತಿನ್ನಬೇಕು ಹಾಗೂ ಹೇಗೆ ಜೀವನ ನಿರ್ವಹಿಸಬೇಕು ಎಂಬುದು ಗೊತ್ತಾಗುತ್ತಿರಲಿಲ್ಲ. ರುಬಾನ್ಸ್‌ನಲ್ಲಿ ಕುಳಿತುಕೊಂಡು ನಾನು ಈಗ ಆ ದಿನಗಳ ಹಸಿವಿನ ಬಗ್ಗೆ ಯೋಚಿಸುತ್ತೇನೆ," ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಚಿನು ತಮ್ಮ ಕಷ್ಟದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.
ದೊಡ್ಡ ಯಶಸ್ವಿಗೆ ಸಣ್ಣ ಹೆಜ್ಜೆಗಳು
ಕಂಪನಿಯು ಈಗ ಲಾಭದಾಯಕವಾಗಿದ್ದು, ಶೇ.30 ರಿಪಿಟೇಡ್ ಗ್ರಾಹಕರನ್ನು ಹೊಂದಿದೆ ಎಂದು ಚಿನು ಹೇಳುತ್ತಾರೆ. ಅವರ ಈ ಬಿಸಿನೆಸ್‌ಗೆ 1.5 ಕೋಟಿ ರೂ. ಹೂಡಿಕೆ ಕೂಡ ಬಂದಿದೆ. ಆ ದಿನಗಳಲ್ಲಿ 70 ರೂ. ಮೌಲ್ಯದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕೇವಲ ಆರು ತಿಂಗಳಲ್ಲಿ ಮೂರು ಮಂದಿ ಹುಡುಗಿಯರ ತಂಡವನ್ನು ನಿರ್ವಹಿಸುತ್ತಿದ್ದರು.
ಬಳಿಕ ಅವರು ಟಾಟಾ ಇಂಡಿಕಾಂನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದು, ಅಲ್ಲಿ ಅವರು ಪತಿ ಅಮಿತ್ ಕಾಲಾ ಅವರನ್ನು ಭೇಟಿಯಾಗುತ್ತಾರೆ. ಈ ನಡುವೆ ಮನೆಯಲ್ಲಿ ಸೆಲ್ಯೂನ್ ಒಂದನ್ನು ಪ್ರಾರಂಭಿಸಿದ್ದು, ಅದು ಕೂಡ ಯಶಸ್ವಿಯಾಗಿ ನಡೆಯುತ್ತಿದೆ. 2021ನೇ ಹಣಕಾಸು ವರ್ಷದಲ್ಲಿ 29.7 ಕೋಟಿ ರೂ. ವಹಿವಾಟು ನಡೆಸಿದ್ದು, 2022ರಲ್ಲಿ ಅದು 51 ಕೋಟಿ ರೂ. ಆಗಿತ್ತು.


Click it and Unblock the Notifications