ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. ಆದರೆ ಯಾರಿಗಾದರೂ ಸರಿ ಯಶಸ್ಸು ತುಂಬಾ ಸಲೀಸಾಗಿ ಸಿಗುವುದಿಲ್ಲ. ಗೋಯಲ್ ಅವರಿಗೂ ತಮ್ಮ ಜೀವನದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಅಡೆತಡೆಗಳು ಎದುರಾಗಿದ್ದು ಅವೆಲ್ಲವನ್ನು ಸಮರ್ಥವಾಗಿ ಎದುರಿಸಿ ಇಂದು ಸಾಧಕ ಅನ್ನಿಸಿಕೊಂಡಿರುವ ಅವರ ಕಥೆಯು ತುಂಬಾ ಸ್ಪೂರ್ತಿದಾಯಕವಾಗಿದೆ.
ದೀಪಿಂದರ್ ಗೋಯಲ್ ಸ್ಥಾಪಿಸಿದ ಜೊಮ್ಯಾಟೊ ಕಂಪನಿಯು ಇಂದು ಅತ್ಯಂತ ದೊಡ್ಡ ಮತ್ತು ಶಕ್ತಿಯುತವಾದ ಕಂಪನಿ ಆಗಿದ್ದು ಶೀಘ್ರದಲ್ಲೇ ಲಾಭದಾಯಕ ಸಂಸ್ಥೆಯಾಗಲಿದೆ. ಗೋಯಲ್ ಅವರು ಈವರೆಗೆ ಚೆಫ್‌ಕಾರ್ಟ್ ಮತ್ತು ಅನಾಕಾಡೆಮಿ ಸೇರಿದಂತೆ 16 ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ನಿವ್ವಳ ಮೌಲ್ಯವು ಹೆಚ್ಚು ಕಡಿಮೆ 1 ಬಿಲಿಯನ್ ಡಾಲರ್ ಮಾರ್ಕ್ ದಾಟಿದೆ.

ಸಾಂಕ್ರಮಿಕದ ಸಮಯದಲ್ಲಿ ಸ್ಟಾಕ್ ಓನರ್‌ಶಿಪ್ ಯೋಜನೆಯ ಅಂಗವಾಗಿ ತಮಗೆ ಲಭ್ಯವಾಗುವ ಸುಮಾರು 700 ಕೋಟಿ ರೂ.ಗ ಳನ್ನು ಸಂಸ್ಥೆಯ ಡೆಲಿವರಿ ಬಾಯ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು ದೀಪಿಂದರ್ ಗೋಯಲ್. ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಜನಿಸಿದ ಗೋಯಲ್ ತೀರಾ ಬುದ್ದಿವಂತ ಅಥವಾ ತೀರಾ ದಡ್ಡನೂ ಅಲ್ಲದ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು.
ಎಂಟನೇ ತರಗತಿಯಲ್ಲಿರುವಾಗ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಗೋಯಲ್ ಗೆ ನೆರವು ನೀಡಲು ನಿರ್ಧರಿಸಿದರು. ಆ ಪರೀಕ್ಷೆಯಲ್ಲಿ ಗೋಯಲ್ ಅನುತ್ತೀರ್ಣರಾಗುತ್ತಿದ್ದರು. ಆದರೆ ಇದರಿಂದ ಅವರು ಮೂರನೇ ರ್ಯಾಂಕ್ ಪಡೆದುಕೊಂಡರು. ಇದು ಗೋಯಲ್ ಬದುಕಿಗೆ ಮಹತ್ವದ ತಿರುವು ನೀಡಿತು. ಈ ಘಟನೆ ಅವರ ಜೀವನವನ್ನೇ ಬದಲಾಯಿಸಿತು.
ಈ ಘಟನೆ ಬಳಿಕ ದೀಪಿಂದರ್ ಗೋಯಲ್, ಶಾಲೆಯ ಟಾಪರ್ ಗಳಲ್ಲಿ ಗೋಯಲ್ ಅವರು ಒಬ್ಬರಾದರು. ಇದಾದ ಬಳಿಕ ಐಐಟಿ ತಯಾರಿಗಾಗಿ ಅವರ ಕುಟುಂಬದವರು ಚಂಡೀಗಢಕ್ಕೆ ಕಳುಹಿಸಿದರು. ಆದರೆ ಅಲ್ಲಿದ್ದ ಬುದ್ಧಿವಂತ ವಿದ್ಯಾರ್ಥಿಗಳಷ್ಟು ಇವರು ಪರೀಕ್ಷೆಗೆ ತಯಾರಿ ನಡೆಸಿರಲಿಲ್ಲ ಹೀಗಾಗಿ ಅವರು ಮನೆಗೆ ಮರಳಿದರು. ಆದರೆ, ಮುಂದಿನ ದಿನಗಳಲ್ಲಿ ಅವರು ಐಐಟಿ ದೆಹಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ದೀಪಿಂದರ್ ಗೋಯಲ್ ಅಹಂಕಾರಿ. ಆತ ಜನರೊಂದಿಗೆ ಮಾತನಾಡಲು ಬಯಸುವುದಿಲ್ಲ.ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಅಪವಾದಕ್ಕೆ ಯುವರ್‌ಸ್ಟೋರಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರುಉತ್ತರಿಸಿದ್ದು, "ನಾನು ಇನ್ನೂ ಕೆಲವು ಉಚ್ಚಾರ ದೋಷಗಳೊಂದಿಗೆ ಹೋರಾಡುತ್ತಿದ್ದೇನೆ ಮತ್ತು ತೊದಲುತ್ತೇನೆ ಹೀಗಾಗಿ ಸಂದರ್ಶನಗಳನ್ನು ನೀಡುವುದನ್ನು ಮತ್ತು ವೇದಿಕೆ ಮೇಲೆ ಹೋಗುವುದನ್ನು ತಪ್ಪಿಸುತ್ತೇನೆ," ಎಂದು ಒಪ್ಪಿಕೊಳ್ಳುತ್ತಾರೆ ದೀಪಿಂದರ್ ಗೋಯಲ್.
2021 ರಲ್ಲಿ ಜೊಮ್ಯಾಟೊ ಲಿಸ್ಟೆಡ್ ಕಂಪನಿಯಾದ ನಂತರ ಗೋಯಲ್ ಅವರ ನಿವ್ವಳ ಮೌಲ್ಯವು 650 ಮಿಲಿಯನ್ ಡಾಲರ್‌ಗಳಿಗೆ (5345 ಕೋಟಿ ರೂ.) ತಲುಪಿತ್ತು. ಆ ಸಮಯದಲ್ಲಿ, ಅವರು ಜೊಮ್ಯಾಟೊದಲ್ಲಿ 4.7 ಶೇಕಡಾ ಷೇರು ಹೊಂದಿದ್ದರು. ಇನ್ನು ಸದ್ಯಕ್ಕೆ ಕಂಪನಿಯಿಂದ ಇವರು ಯಾವುದೇ ವೇತನ ಸ್ವೀಕರಿಸುತ್ತಿಲ್ಲ. ಆದರೆ, ಅವರು 358 ಕೋಟಿ ರೂಪಾಯಿಗಳನ್ನು ESOP (employee stock ownership plan) ಹೊಂದಿದ್ದಾರೆ.
ಕಂಪನಿಯ ಮಾರುಕಟ್ಟೆ ಮೌಲ್ಯ 66,874 ಕೋಟಿ ರೂಪಾಯಿ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ತಾನು ಡೆಲಿವರಿ ಬಾಯ್ ವಿವರಿಸಿಕೊಂಡಿರುವ ಅವರು ಕಂಪನಿಯನ್ನು, ಉದ್ಯೋಗಿಗಳನ್ನು ಉತ್ತೇಜಿಸಲು ಆಗಾಗ್ಗೆ ಗ್ರಾಹಕರಿಗೆ ಆಹಾರ ತಲುಪಿಸುವ ಡೆಲಿವರಿ ಬಾಯ್ ಯಾಗಿ ಕಾಣಿಸಿಕೊಳ್ಳುತ್ತಾರೆ.
800 ಮಂದಿಯ ನೇಮಕಾತಿ ಘೋಷಿಸಿದ್ದ ಸಿಇಒ
ತನ್ನ ಲಾಭವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಇತ್ತೀಚೆಗೆ ತನ್ನ ಗೋಲ್ಡ್ ಚಂದಾದಾರಿಕೆಯನ್ನು ಭಾರತದಲ್ಲಿ ಮತ್ತೆ ಆರಂಭ ಮಾಡಿದೆ. ಈ ಯೋಜನೆಯಡಿಯಲ್ಲಿ ಒಟ್ಟಾಗಿ 9 ಲಕ್ಷ ಸದಸ್ಯರು ಚಂದಾದಾರಿಕೆಯನ್ನು ಮಾಡಿದ್ದಾರೆ. ಇನ್ನು ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿರುವಾಗ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಸಂಸ್ಥೆಯಲ್ಲಿ ನೇಮಕಾತಿ ಮಾಡುವ ಘೋಷಣೆಯನ್ನು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್, ಸಂಸ್ಥೆಯಲ್ಲಿ 800 ಮಂದಿಯನ್ನು ನೇಮಕಾತಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಲಿಂಕ್ಡಿನ್‌ನಲ್ಲಿ ದೀಪೆಂದರ್ ಗೋಯಲ್ ಉದ್ಯೋಗ ನೇಮಕಾತಿಯ ಬಗ್ಗೆ ವಿವರಣೆ ನಿಡಿದ್ದಾರೆ. ಸಿಇಒ, ಜೆನರಲಿಸ್ಟ್, ಗ್ರೋತ್ ಮ್ಯಾನೆಜರ್, ಪ್ರೊಡಕ್ಟ್ ಓನರ್, ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಘೋಷಣೆ ಮಾಡಿದೆ.


Click it and Unblock the Notifications