ಈ ಬಾರಿ ಮಾಸ್ಟರ್‌ಚೆಫ್ ಇಂಡಿಯಾದ ಸೀಸನ್ ರಿಯಾಲಿಟಿ ಶೋ ಪ್ರಸಾರವಾಗುವವರೆಗೆ ಗರಿಮಾ ಅರೋರಾ ಎನ್ನುವ ಪ್ರತಿಭಾವಂತ ಭಾರತೀಯ ಮಹಿಳಾ ಚೆಫ್ ಬಗ್ಗೆ ಅನೇಕರಿಗೆ ಪರಿಚಯವೇ ಇರಲಿಲ್ಲ. ಮಾಸ್ಟರ್‌ಚೆಫ್ ಇಂಡಿಯಾದ ಇತಿಹಾಸದಲ್ಲಿ ಕಾರ್ಯಕಮವನ್ನು ನಿರ್ವಹಿಸಿದ ಮೊದಲ ಮಹಿಳಾ ಬಾಣಸಿಗರಾಗಿದ್ದಾರೆ. ಗರಿಮಾ ಅವರು "ಮೈಕಲಿನ್ ಸ್ಟಾರ್ " ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗರಿಮಾ ಅರೋರಾ 1986 ನವೆಂಬರ್ 9ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದು, ಬಾಲ್ಯದಲ್ಲೇ ಅಡುಗೆ ಬಗ್ಗೆ ಅಭಿರುಚಿ ಹೊಂದಿದ್ದರು. ಅಡುಗೆ ಮಾಡುವಾಗ ತಮ್ಮ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುವುದರಲ್ಲಿ ಗರಿಮಾ ಯಾವಾಗಲೂ ಮುಂದಿರುತ್ತಿದ್ದರು. ಸಹೋದರ ನೌರೋಜ್ ಅರೋರಾ ಅವರೊಂದಿಗೆ ಸೇರಿ ಅಡುಗೆ ಮನೆಯ ಮಸಾಲೆಗಳ ಜಗತ್ತಿನಲ್ಲಿ ಪ್ರಯೋಗ ಮಾಡುತ್ತಿದ್ದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದ ಗರಿಮಾ
ಗರಿಮಾ ಅವರು ಜೆಟ್ ಎರ್ ವೇಸ್ ನಲ್ಲಿ ಪೈಲಟ್ ಆಗಿರುವ ರಾಹುಲ್ ವರ್ಮಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಓರ್ವ ಪುತ್ರಿ ಇದ್ದಾಳೆ. ಗರಿಮಾ ಮುಂಬೈ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ವಿಶೇಷವೆಂದರೆ ತಮ್ಮ ನೈಜ ಆಸಕ್ತಿ ಇರುವುದು ಪಾಕಶಾಸ್ತ್ರದಲ್ಲಿ ಎಂದು ಅರಿತುಕೊಳ್ಳುವ ಮೊದಲು ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಪ್ಯಾರಿಸ್‌ನ ಪಾಕ ಶಾಲೆಯಲ್ಲಿ ಓದಲೆಂದು 2008 ರಲ್ಲಿ ಫ್ರಾನ್ಸ್‌ಗೆ ತೆರಳಿದರು. ಗರಿಮಾ ಅವರು 2010 ರಲ್ಲಿ ಪ್ಯಾರಿಸ್‌ನ ಲೆ ಕಾರ್ಡನ್ ಬ್ಲೂ ನಿಂದ ಪಾಕಶಾಸ್ತ್ರ ಮತ್ತು ಪ್ಯಾಟಿಸ್ಸೆರಿಯಲ್ಲಿ ಗ್ರ್ಯಾಂಡ್ ಡಿಪ್ಲೊಮಾ ಪಡೆದುಕೊಂಡರು. 2013 ರಲ್ಲಿ, ಅವರು ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ ನೋಮಾದಲ್ಲಿ ಇಂಟರ್ನ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಿದರು, ಅಲ್ಲಿ ಅವರು ಪ್ರಸಿದ್ಧ ಡ್ಯಾನಿಶ್ ಚೆಫ್ ರೆನೆ ರೆಡ್ಜೆಪಿ ಮತ್ತು ಗಾರ್ಡನ್ ರಾಮ್‌ಸೆ ಅವರ ಅಡಿಯಲ್ಲಿ ಮೂರು ತಿಂಗಳ ಕಾಲ ಕೆಲಸ ಮಾಡಿದರು.
ದಿ ಒಬೆರಾಯ್ ಗ್ರೂಪ್ ನ ಹೋಟೆಲ್ಸ್ ಮತ್ತು ಬ್ಯಾಂಕಾಕ್‌ನ ಗಗ್ಗನ್, ಮೈಕೆಲಿನ್-ಸ್ಟಾರ್ಡ್ ರೆಸ್ಟೋರೆಂಟ್ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದರು. ಹೀಗೆ ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುವ ಮೂಲಕ ಅವರ ಅನುಭವ ಇನ್ನಷ್ಟು ಹೆಚ್ಚಾಯಿತು.
ರೆಸ್ಟೋರೆಂಟ್ ಗಾ ತೆರೆದ ಗರಿಮಾ
ಅವರು ಗಗ್ಗನ್ ಆನಂದ್, ಗಾರ್ಡನ್ ರಾಮ್ಸೆ ಮತ್ತು ಕೋಪನ್ ಹ್ಯಾಗನ್‌ನ ನೋಮಾದ ರೆನೆ ರೆಡ್ಜೆಪಿಯಂತಹ ಪಾಕಶಾಲೆಯ ದಿಗ್ಗಜರೊಂದಿಗೆ ಕೆಲಸ ಮಾಡಿದರು. 2017 ರ ಏಪ್ರಿಲ್ ನಲ್ಲಿ, ಗರಿಮಾ ಬ್ಯಾಂಕಾಕ್‌ನಲ್ಲಿ ಮೂರು ಅಂತಸ್ತಿನ ರೆಸ್ಟೋರೆಂಟ್ "ಗಾ"ವನ್ನು ತೆರೆದರು. ರೆಸ್ಟೋರೆಂಟ್ ಗಾ ಭಾರತೀಯ ಮತ್ತು ಥಾಯ್ ಪಾಕಪದ್ಧತಿಯ ಮಿಶ್ರಣವನ್ನು ಒದಗಿಸುತ್ತದೆ.
ಇದಲ್ಲದೇ ಮೊದಲ ಭಾರತೀಯ ಮಹಿಳಾ ಬಾಣಸಿಗರಾಗಿ ಮೈಕೆಲಿನ್ ಸ್ಟಾರ್ ಅನ್ನು ಸ್ವೀಕರಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಇದಾದ ಮರು ವರ್ಷವೇ ಅಂದರೆ ಮಾರ್ಚ್ 2019 ರಲ್ಲಿ, ಅವರ ರೆಸ್ಟೋರೆಂಟ್ ಏಷ್ಯಾದ ಅತ್ಯುತ್ತಮ 50 ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ನಂ. 16 ರಲ್ಲಿ ಪಾದಾರ್ಪಣೆ ಮಾಡಿತು. ಅದೇ ವರ್ಷ, ಜೂನ್‌ನಲ್ಲಿ "Gaa" ಪ್ರಪಂಚದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ 95 ಸ್ಥಾನ ಪಡೆದುಕೊಂಡಿತು.
ಮಹಿಳಾ ಸಬಲೀಕರಣದ ಮಾದರಿಯಾದ ಗರಿಮಾ ಅರೋರಾ ಅವರು ಅಡೆತಡೆಗಳನ್ನು ಎದುರಿಸುತ್ತಾ ಕಠಿಣ ಪರಿಶ್ರಮ, ಸಾಮರ್ಥ್ಯ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಉನ್ನತ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


Click it and Unblock the Notifications