ದೇಶದ ಜನಪ್ರಿಯ ಫಾರ್ಮಾ ಕಂಪನಿಯಾಗಿರುವ ಮ್ಯಾನ್‌ಕೈಂಡ್ ಕೊರೊನಾ ಮಹಾಮಾರಿ ಕಾಣಿಸಿಕೊಂಡು ಸಾಂಕ್ರಾಮಿಕ ಪಿಡುಗು ಸಂಕಷ್ಟದಲ್ಲಿ ಸಿಲುಕಿರಬೇಕಾದರೆ 250 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಬಹಿರಂಗಪಡಿಸಿದ್ದಾರೆ.
ಅವರು ಕಂಪನಿಯ ಭಾರತದ ವ್ಯಾಪಾರ- ವಹಿವಾಟು ನೋಡಿಕೊಳ್ಳುತ್ತಿದ್ದಾರೆ. ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ತಪ್ಪು ಲೆಕ್ಕಾಚಾರದ ಕಾರಣಗಳಿಂದಾಗಿ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ರಣವೀರ್ ಅಲ್ಲಾಹಬಾಡಿಯಾ ಅವರೊಂದಿಗಿನ ದಿ ರಣವೀರ್ ಶೋದಲ್ಲಿ ಮಾತನಾಡುವಾಗ, ಕೊರೊನಾ ಸಂದರ್ಭದಲ್ಲಿ ಸರ್ಕಾರದ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ರಾಜೀವ್ ಜುನೇಜಾ ಅವರು ತಿಳಿಸಿದ್ದಾರೆ.
"ಇಡೀ ದೇಶವೇ ಸಂಕಷ್ಟದಲ್ಲಿದ್ದಾಗ ನಾವು ಕೊರೊನಾ ನಿಧಿಗೆ ಹಣ ನೀಡುವ ವಿಚಾರವಾಗಿ ಮನೆಯಲ್ಲಿ ಚರ್ಚೆ ನಡೆದಿತ್ತು. ನಮ್ಮ ಬಳಿ ಅಪಾರ ಆಸ್ತಿಯಿದೆ. ಹೀಗಾಗಿ, ನಾವು ಕೊಡಲೇ ಬೇಕು ಎಂದು ತೀರ್ಮಾನಿಸಿದ್ದೆವು. ಆ ಪ್ರಕಾರ, 21 ಕೋಟಿ ಹಣ ನೀಡುವುದಕ್ಕೆ ನಿರ್ಧರಿಸಲಾಗಿತ್ತು," ಎಂದಿದ್ದಾರೆ.
"ಆದರೆ, ನನ್ನ ಮಗ ಹೇಳಿದ ನೀವು ಇಷ್ಟು ದೊಡ್ಡ ಉದ್ಯಮಿಯಾಗಿರುವ ಕಾರಣ ಇನ್ನೂ ಜಾಸ್ತಿ ಹಣವನ್ನು ದೇಣಿಗೆಯಾಗಿ ನೀಡಬೇಕೆಂದು. ಅದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು 50 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ವರದಿಯಾಗಿತ್ತು. ಇದನ್ನು ಕೇಳಿದ ನನ್ನ ಮಗ ಮತ್ತೆ ಮನೆಗೆ ಬಂದು ಅದೇ ವಿಚಾರವಾಗಿ ಮತ್ತೆ ಒತ್ತಾಯ ಮಾಡಿದ್ದ. ಆ ಸಂದರ್ಭದಲ್ಲಿ ಯಾವುದನ್ನೂ ಯೋಚಿಸಿದೆ ಕೂಡಲೇ ನಿರ್ಧಾರವನ್ನು ತೆಗೆದುಕೊಂಡಿದ್ದೆವು," ಎಂಬುದಾಗಿ ತಿಳಿಸಿದ್ದಾರೆ.
"ಆದರೆ ನಮ್ಮಲ್ಲಿರುವ ಮಾತೆನೆಂದರೆ ಒಂದು ಕೈನಿಂದ ಕೊಡುವಾಗ ಮತ್ತೊಂದು ಕೈಗೆ ಗೊತ್ತಾಗಬಾರದ್ದು ಎನ್ನುವುದು. ಆದರೆ, ನನ್ನ ಪ್ರಕಾರ ನಾವು ಮಾಡುವ ಸಹಾಯ ಬೇರೆಯವರಿಗೆ ಗೊತ್ತಾಗಬೇಕು. ಏಕೆಂದರೆ ಅದು ಇನ್ನೊಬ್ಬರಿಗೆ ಸ್ಫೂರ್ತಿಯನ್ನು ನೀಡುತ್ತದೆ. ಅದೇ ರೀತಿ ನಾವು ಮೊದಲು ಪಿಎಂ ನಿಧಿ ಮೂಲಕ ವೈದ್ಯರ ಸಮೂಹಕ್ಕೆ ಸಹಾಯವನ್ನು ಮಾಡುವುದಕ್ಕೆ ತೀರ್ಮಾನಿಸಿದ್ದೆವು," ಎಂದು ವಿವರಿಸಿದ್ದಾರೆ.
"ನಂತರ ಆಕ್ಸೀಜನ್ ಸಿಲಿಂಡರ್‌ಗೆ ನೆರವು ನೀಡುವುದಾಗಿತ್ತು. ಯಾವಾಗಲೂ ಏನನ್ನಾದರೂ ನೀಡಲು ಬಯಸುವಾಗ ಮೊದಲು ನಮ್ಮ ಹತ್ತಿರದ ಕುಟುಂಬದವರಿಗೆ ಕೊಡುವುದಕ್ಕೆ ಬಯಸುತ್ತೇವೆ. ಮೂಲಕ ಹೆಚ್ಚು ಅಪಾಯದಲ್ಲಿದ್ದ ವೈದ್ಯರು ಹಾಗೂ ನರ್ಸ್‌ಗಳಿಗೆ ನೆರವಾಗುವುದಕ್ಕೆ ಮುಂದಾಗಿದ್ದೆವು. ಆದರೆ, ತಪ್ಪಾದ ಲೆಕ್ಕಾಚಾರದಿಂದಾಗಿ ಅಂದಾಜು ದೇಣಿಗೆ ಮೊತ್ತವು ನಾವು ನೀಡಿದ ನಿಜವಾದ ಮೊತ್ತಕ್ಕಿಂತ ಒಂದು ಕಡಿಮೆ ಶೂನ್ಯವನ್ನು ಹೊಂದಿತ್ತು," ಎನ್ನುತ್ತಾರೆ.
"ಇನ್ನೊಂದೆಡೆ, ಮ್ಯಾನ್‌ಕೈಂಡ್ ಕೂಡ ಕೊರೊನಾ ಸಂದರ್ಭದಲ್ಲಿ ಅಪಾಯದ ಮುಂಚೂಣಿಯಲ್ಲಿದ್ದ ಪೊಲೀಸರು, ನರ್ಸ್‌ಗಳು, ಔಷಧ ವ್ಯಾಪಾರಸ್ಥರು ಹಾಗೂ ವೈದ್ಯರು ಸತ್ತರೆ ಅವರಿಗೆ ಹೆಚ್ಚಿನ ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದ್ದೆವು. ಹೀಗಾಗಿ, ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಮೊತ್ತ ನೀಡಬೇಕಾಯಿತು. ಅದರಂತೆ ಆ ಅವಧಿಯಲ್ಲಿ ನಾವು 250 ಕೋಟಿ ರೂಪಾಯಿ ದೇಣಿಗೆ ನೀಡಿದ್ದೆವು," ಎಂದು ತಿಳಿಸಿದರು.
"ಆದರೆ, ಅದರಿಂದ ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಇರಲಿಲ್ಲ. ಇದೆಲ್ಲವೂ ಅನಿರೀಕ್ಷಿತವಾಗಿತ್ತು ಮತ್ತು ಅದಕ್ಕೆ ಸಾರ್ವಜನಿಕ ವಲಯದಿಂದ ಬಹಳ ಪ್ರಶಂಸೆ ಕೂಡ ಬಂದಿತ್ತು. ಅಂದರೆ ಏನೋ ತಪ್ಪಿನಿಂದ ಬಹಳ ದೊಡ್ಡ ಕೆಲಸವೇ ಆಗಿ ಹೋಗಿತ್ತು," ಎನ್ನುತ್ತಾರೆ ಜುನೇಜಾ.
ರಾಜೀವ್ ಜುನೇಜಾ ಅವರು ಬಿಲಿಯನೇರ್ ಆಗಿದ್ದು, ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ 1,145ನೇ ಸ್ಥಾನದಲ್ಲಿದ್ದಾರೆ. ಆದರೆ, ರಾಜೀವ್ ಅವರು ಎಷ್ಟೊಂದು ಹೃದಯವೈಶಾಲ್ಯತೆ ಹೊಂದಿದ್ದಾರೆ ಅಂದರೆ, ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಕಂಪನಿಯ ಬಹಳಷ್ಟು ಉದ್ಯೋಗಿಗಳ ಕುಟುಂಬಕ್ಕೂ ದೊಡ್ಡ ಸಹಾಯ ಮಾಡಿದ್ದಾರೆ. ಅಂದರೆ, ಕೊರೊನಾದಲ್ಲಿ ಮೃತಪಟ್ಟ ಕಂಪನಿಯ ಉದ್ಯೋಗಿಗಳ ಕುಟುಂಬಕ್ಕೆ 13 ವರ್ಷಗಳ ವೇತನವನ್ನು ಪಾವತಿಸಿದ್ದಾರೆ.
ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ನಮ್ಮ ಕುಟುಂಬದವರು ಅಂದುಕೊಂಡ ಮೇಲೆ ನಾವು ಖಂಡಿತವಾಗಿಯೂ ಸಂಕಷ್ಟದ ಸಮಯದಲ್ಲಿ ಅವರಿಗೆ ನೆರವಾಗಬೇಕು. ಕೇವಲ ಮಾತಿನಿಂದ ದುಃಖವನ್ನು ವ್ಯಕ್ತಪಡಿಸಿದರೆ ಸಾಲದ್ದು, ಮಾನವೀಯ ನೆಲೆಯಲ್ಲಿ ನಾವೂ ಕೂಡ ಭಾಗಿಯಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇದು ನಮ್ಮ ಕಂಪನಿಯ ಸಂಸ್ಕೃತಿ. ಒಂದುವೇಳೆ ಯಾರಾದರೂ ಕಷ್ಟದಲ್ಲಿದ್ದರೆ ಎಲ್ಲರೂ ಸೇರಿ ನೆರವು ನೀಡುತ್ತೇವೆ ಎನ್ನುತ್ತಾರೆ.
ಫೋರ್ಬ್ಸ್ ಪ್ರಕಾರ ರಾಜೀವ್ ಜುನೇಜಾ ಅವರು 22,000 ಕೋಟಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಫಾರ್ಮಾ ಜಗತ್ತಿನಲ್ಲಿ 29 ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದಾರೆ.


Click it and Unblock the Notifications