ಬುರ್ಜ್ ಖಲೀಫಾ ಎನ್ನುವುದು ದುಬೈನ ಪ್ರಮುಖ ಲ್ಯಾಂಡ್ ಐಕಾನ್ ಆಗಿದ್ದು, ಅಲ್ಲಿಗೆ ಭೇಟಿ ನೀಡುವ ಬಹುತೇಕರು ಇದರ ಸೌಂದರ್ಯ ಹಾಗೂ ಆಕರ್ಷಣೆಗೆ ಮನಸೋತಿರುತ್ತಾರೆ. ಹೀಗಿರುವಾಗ, ಈ ಗಗನಚುಂಬಿ ಕಟ್ಟಡದಲ್ಲಿ ಆಸ್ತಿಯನ್ನು ಹೊಂದುವುದು ಕೂಡ ಅನೇಕ ಉದ್ಯಮಿಗಳ ಪಾಲಿಗೆ ಐಷಾರಾಮಿ ಬದುಕು ಹಾಗೂ ಯಶಸ್ವಿನ ಮೆಟ್ಟಿಲುಗಳ ಪೈಕಿ ಒಂದಾಗಿ ಬಿಂಬಿಸಲಾಗುತ್ತಿದೆ.
ಬುರ್ಜ್ ಖಲೀಫಾದಲ್ಲಿ ಅಪಾರ್ಟ್‌ಮೆಂಟ್ ಅಥವಾ ಮನೆಯನ್ನು ಭಾರತದಲ್ಲಿನ ಶ್ರೀಮಂತ ವ್ಯಕ್ತಿಗಳು ಹೊಂದಿದ್ದಾರೆ. ಈ ಬಾನೆತ್ತರದ ಆಕರ್ಷಕ ಕಟ್ಟಡದಲ್ಲಿ 900 ಅಪಾರ್ಟ್‌ಮೆಂಟ್‌ಗಳ ಪೈಕಿ 150 ಭಾರತೀಯರ ಮಾಲೀಕತ್ವದಲ್ಲಿದೆ. ಹೀಗಿರುವಾಗ, ಒಂದು ಕಾಲದಲ್ಲಿ ಏನು ಇಲ್ಲದೆ ಬಡತನದಲ್ಲಿದ್ದುಕೊಂಡು, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಜ್ ವಿ. ನೆರೆಯಂಪರಂಬಿಲ್ ಅವರು ಕೂಡ ಅಂಥಹ ಕನಸಯೊಂದನ್ನು ನನಸು ಮಾಡಿದ್ದಾರೆ.

ಜಾರ್ಜ್ ವಿ. ನೆರೆಯಂಪರಂಬಿಲ್ ಬಗ್ಗೆ ಇಲ್ಲಿದೆ ವಿವರ
ಜಾರ್ಜ್ ಅವರು ಕೇರಳದ ಬಡ ಕುಟುಂಬವೊಂದರಲ್ಲಿ ಜನಿಸಿದ್ದಾರೆ. ಮನೆಯಲ್ಲಿನ ಬಡತನದಿಂದಾಗಿ ತಮ್ಮ ಹದಿಹರೆಯಕ್ಕೆ ಬರುವ ಮೊದಲೇ ದುಡಿಮೆಯನ್ನು ಆರಂಭಿಸಿದವರು. ಕೇವಲ 11 ವರ್ಷ ವಯಸ್ಸಿನಲ್ಲಿಯೇ ತಮ್ಮ ತಂದೆಯ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದರು. ಇದನ್ನು ದೊಡ್ಡ ಉದ್ಯಮವಾಗಿ ಬೆಳೆಸುವುದಕ್ಕೆ ಮೊದಲು ಜಾರ್ಜ್ ಅವರು ಮ್ಯೆ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು.
ಹೀಗಿರುವಾಗ, ಜಾರ್ಜ್ ಅವರು 1976ರಲ್ಲಿ ಶಾರ್ಜಾಕ್ಕೆ ಬರುವುದರೊಂದಿಗೆ ಅವರ ಬದುಕು ತಿರುವು ಪಡೆದುಕೊಂಡಿತು. ಮಧ್ಯ ಪ್ರಾಚ್ಯದ ಆರ್ಥಿಕತೆಯು ಬೆಳೆಯುತ್ತಿದ್ದಂತೆ ಅಲ್ಲಿ ವ್ಯಾಪಾರ ಉದ್ಯಮಕ್ಕೆ ವಿಪುಲ ಅವಕಾಶ ಇದೆ ಎಂಬುದನ್ನು ಮನಗಂಡಿದ್ದರು. ಆ ಮೂಲಕ ನಿಧಾನಕ್ಕೆ ತಮ್ಮ ಉದ್ಯಮದ ಕನಸುಗಳನ್ನು ಒಂದೊಂದಾಗಿ ನನಸು ಮಾಡುತ್ತ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದರು.
ಪ್ರಸ್ತುತ ಜಾರ್ಜ್ ಹುಟ್ಟು ಹಾಕಿದ ಜಿಇಒ ಗ್ರೂಪ್ ಆಫ್ ಕಂಪನೀಸ್ ಗಲ್ಫ್ ಪ್ರಾಂತ್ಯದಲ್ಲಿ ಭಾರತದ ಮೂಲದ ಬಹುದೊಡ್ಡ ಉದ್ಯಮವಾಗಿ ಬೆಳೆಯುವಂತೆ ಮಾಡಿದೆ. ಆ ಮೂಲಕ ಜಾರ್ಜ್ ಅವರು ಕೂಡ ದೈತ್ಯ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ನಡುವೆ ಬುರ್ಜ್ ಖಲೀಫಾದಲ್ಲಿ ಆಸ್ತಿಯೊಂದನ್ನು ಖರೀದಿಸಬೇಕೆಂಬುದು ಜಾರ್ಜ್ ಅವರ ಆಸೆ ಹಾಗೂ ಕನಸು ಕೂಡ ಆಗಿತ್ತು. ಇದಕ್ಕೆ ಒಂದು ಕಾರಣ ಕೂಡ ಇದೆ. ಅದೇನಂದರೆ, ತಮಗೆ ಬುರ್ಜ್ ಖಲೀಫಾಕ್ಕೆ ಪ್ರವೇಶಿಸುವುದಕ್ಕೂ ಸಾಧ್ಯವಿಲ್ಲ ಎಂದು ಸಂಬಂಧಿಕರು ಅವಹೇಳನ ಮಾಡಿದ್ದರು.
ಆ ಹಠವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ನನಸಾಗಿಸಿಕೊಂಡರು. ಆ ಮೂಲಕ 2010ರಲ್ಲಿ ಅಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದುಕೊಂಡರು. ಸಕಾಲಕ್ರಮೇಣ ಜಾರ್ಜ್ ಅವರು ಬುರ್ಜ್ ಖಲೀಫಾದಲ್ಲಿ ಒಟ್ಟು 22 ಲಕ್ಸುರಿ ಅಪಾರ್ಟ್‌ಮೆಂಟ್‌ಗಳನ್ನು ಸ್ವಾಧೀನಪಡಿಸಿಕೊಂಡರು.
ಅವರು ತಮ್ಮಲ್ಲಿರುವ ಅಪಾರ ಸಂಪತ್ತನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುವ ವ್ಯಕ್ತಿಯಲ್ಲ. ಎಲ್ಲಿಯವರೆಗೆ ಅಂದರೆ ಜಾರ್ಜ್ ಅವರ ಅಪಾರ್ಟ್‌ಮೆಂಟ್‌ನ ಗೋಡೆಗಳು ಕೂಡ ಚಿನ್ನದ ಅಲಂಕಾರದಿಂದ ಕೂಡಿದೆ ಎಂದು ವರದಿಯಾಗಿದೆ. ಅಷ್ಟೇಅಲ್ಲ; ಅವರು ಬಹು ಎತ್ತರದ ಬುರ್ಜ್ ಖಲೀಫಾದಲ್ಲಿ ಮತ್ತಷ್ಟು ಅಪಾರ್ಟ್‌ಮೆಂಟ್ ಖರೀದಿಸುವುದರತ್ತ ಗಮನಹರಿಸಿದ್ದಾರೆ.


Click it and Unblock the Notifications