ರೇಣುಕಾ ಜಗ್ತಿಯಾನಿ ದುಬೈ ಮೂಲದ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಅಧ್ಯಕ್ಷೆ ಆಗಿದ್ದಾರೆ. ಅವರ ಕಂಪನಿಯು ಮಧ್ಯಪ್ರಾಚ್ಯದಲ್ಲಿ ಚಿಲ್ಲರೆ ವ್ಯಾಪಾರದ ದೈತ್ಯವಾಗಿದೆ. ಈ ಸಂಸ್ಥೆಯನ್ನು ರೇಣುಕಾ ಅವರ ಪತಿ, ದಿವಂಗತ ಮುಕೇಶ್ (ಮಿಕ್ಕಿ) ಜಗ್ತಿಯಾನಿ ಸ್ಥಾಪಿಸಿದ್ದರು.
ಮಿಕ್ಕಿ ಜಗ್ತಿಯಾನಿ ಅವರು 1973 ರಲ್ಲಿ ಬಹ್ರೇನ್‌ನಲ್ಲಿ ಒಂದು ಅಂಗಡಿಯನ್ನು ತೆರೆದು ಮುಂದೆ ಇದು ಬೃಹತ್ ರಿಟೇಲ್ ಸಂಸ್ಥೆಯಾಗಿ ಬೆಳೆದು ನಿಂತಿತು. ಪತಿ ಮಿಕ್ಕಿ ಅವರ ನಿಧನದ ನಂತರ ರೇಣುಕಾ ಜಗ್ತಿಯಾನಿ ಕಂಪನಿಯನ್ನು ಮುನ್ನಡೆಸುತ್ತಿದ್ದು, ಸ್ಟ್ರಾಟೆಜಿ ಮತ್ತು ಹೊಸ ಬುಸಿನೆಸ್ ಅವಕಾಶಗಳನ್ನು ನೋಡಿಕೊಳ್ಳುತ್ತಾರೆ.

69 ವರ್ಷದ ರೇಣುಕಾ ಅವರು ಇತ್ತೀಚೆಗೆ ಮೊದಲ ಬಾರಿಗೆ ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಂಪನಿಯ ಮುಖ್ಯಸ್ಥರಾಗಿ, ರೇಣುಕಾ 50,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೋಡಿಕೊಳ್ಳುತ್ತಾರೆ.
ಫೋರ್ಬ್ಸ್ ಪ್ರಕಾರ, ರೇಣುಕಾ ಅವರು ತಮ್ಮ ಪತಿಯಿಂದ ಅನುವಂಶಿಕವಾಗಿ 40,040 ಕೋಟಿ ರೂಪಾಯಿ (4.8 ಬಿಲಿಯನ್ ಡಾಲರ್) ನಿವ್ವಳ ಮೌಲ್ಯವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಫೋರ್ಬ್ಸ್‌ನ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 44 ನೇ ಸ್ಥಾನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರೇಣುಕಾ ಜಗ್ತಿಯಾನಿ ಅವರು 1993 ರಲ್ಲಿ ಲ್ಯಾಂಡ್‌ಮಾರ್ಕ್‌ಗೆ ಸೇರಿ ಸಂಸ್ಥೆಯಲ್ಲಿ ತಮ್ಮ ಆದ ಛಾಪು ಮೂಡಿಸಿ, 2017 ರಲ್ಲಿ ಅಧ್ಯಕ್ಷೆ ಮತ್ತು ಸಿಇಒ ಸ್ಥಾನಕ್ಕೆ ಏರಿದರು. ಮೂರ್ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಅವರು ಸಿಇಒ ಸ್ಥಾನದಿಂದ ಕೆಳಗಿಳಿದ್ದಾರೆ. ಅವರ ಮೂವರು ಮಕ್ಕಳಾದ ಆರತಿ, ನಿಶಾ ಮತ್ತು ರಾಹುಲ್ ಅವರು ಲ್ಯಾಂಡ್‌ಮಾರ್ಕ್‌ನಲ್ಲಿ ಗ್ರೂಪ್ ಡೈರೆಕ್ಟರ್‌ಗಳಾಗಿದ್ದಾರೆ.
ಲ್ಯಾಂಡ್‌ಮಾರ್ಕ್ ಗ್ರೂಪ್ ಮಿಡ್ಲ್ ಈಸ್ಟ್, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡ ದೇಶಗಳು ಸೇರಿ 24 ದೇಶಗಳಲ್ಲಿ 2,200 ಮಳಿಗೆಗಳನ್ನು ಹೊಂದಿದೆ. ಮೂವತ್ತು ವರ್ಷಗಳಿಂದ, ರೇಣುಕಾ ಅವರು ಗ್ರೂಪ್‌ನ ಕಾರ್ಪೊರೇಟ್ ಕಾರ್ಯತಂತ್ರದ ಬಗ್ಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.
ರೇಣುಕಾ ಅವರ ನೇತೃತ್ವದಲ್ಲಿ, ಲ್ಯಾಂಡ್‌ಮಾರ್ಕ್ ಗ್ರೂಪ್ ಹತ್ತು ವರ್ಷಗಳ ಹಿಂದೆ ಇ-ಕಾಮರ್ಸ್‌ಗೆ ಪ್ರವೇಶಿಸಿ ಯಶಸ್ವಿಯಾಗಿದೆ. ಅವರು ಪ್ರಸ್ತುತವಾಗಿ, ಸಂಸ್ಥೆಯ ವಿಷನ್ ಮತ್ತು ಕಾರ್ಯತಂತ್ರ ಮತ್ತು ಉದಯೋನ್ಮುಖ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವತ್ತ ತಮ್ಮ ಗಮನ ನೀಡುತ್ತಿದ್ದಾರೆ. ಮಾತ್ರವಲ್ಲದೇ ಲ್ಯಾಂಡ್‌ಮಾರ್ಕ್ ರಿಟೇಲ್ ಬೋರ್ಡ್‌ನ ಅಧ್ಯಕ್ಷರಾಗಿ, ಅವರು ಕಾರ್ಯತಂತ್ರದ ನಿರ್ಧಾರಗಳಲ್ಲಿ ಲೀಡರ್ ಶಿಪ್ ಜೊತೆ ನಿಕಟವಾಗಿ ಕೆಲಸ ಮಾಡುತ್ತಾ ಮಾರ್ಗದರ್ಶನ ನೀಡುತ್ತಿದ್ದಾರೆ.


Click it and Unblock the Notifications