ಇಶೆತಾ ಸಲಗಾಂವ್ಕರ್ ಅವರು ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ವಿ ಹಾಗೂ ಡೈನಾಮಿಕ್ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ರಿಲಯನ್ಸ್ ಗ್ರೂಪ್‌ನ ಮುಕೇಶ್ ಅಂಬಾನಿ ಅವರು ಇಶೆತಾ ಅವರ ಚಿಕ್ಕಪ್ಪ ಆಗಿದ್ದು, ಗಮನಾರ್ಹ ಸಾಧನೆಗಳ ಹೊರತಾಗಿಯೂ ಹೆಚ್ಚು ಜನಪ್ರಿಯತೆಯನ್ನು ಬಯಸದೆ ಜೀವನವನ್ನು ನಡೆಸುತ್ತಿದ್ದಾರೆ.
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪದವೀಧರೆ ಆಗಿರುವ ಇಶೆತಾ ಅವರು ಪ್ರಸ್ತುತ ಸಲಗಾಂವ್ಕರ್ ಕಾರ್ಪೊರೇಷನ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಕಾರ್ಪೊರೇಟ್ ಡೆವಲ್ಪ್‌ಮೆಂಟ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಶೆತಾ ಅವರ ವೃತ್ತಿ ಬದುಕಿನಲ್ಲಿ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರಾದ ದೀಪ್ತಿ ಸಲಗಾಂವ್ಕರ್ ಹಾಗೂ ದತ್ತರಾಜ್ ಸಲಗಾಂವ್ಕರ್ ಅವರು ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.

ಇಶೆತಾ ಜನೋಪಕಾರಿಯೂ ಆಗಿದ್ದು, ಅವರು ತಮ್ಮ ಪ್ರತಿಭೆಯನ್ನು ಸದುಪಯೋಗಿಸಿಕೊಂಡು ಹಲವಾರು ಉದ್ಯಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ಸನ್ನು ಗಳಿಸಿದ್ದಾರೆ. ಕಾರ್ಪೊರೇಟ್ ವಲಯದ ಹೊರತಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಚಾರಿಟಿ ಚಟುವಟಿಕೆಗಳಲ್ಲಿನ ಇಶೆತಾ ಅವರ ಬದ್ಧತೆಯೇ ಸಮಾಜಮುಖಿ ಸೇವೆಯ ಕಡೆಗೆ ಅವರಿಗೆ ಇರುವ ಒಲವು ಮತ್ತು ತುಡಿತಕ್ಕೆ ಸಾಕ್ಷಿ. ವೈಯಕ್ತಿಕವಾಗಿ ತೆಗೆದುಕೊಂಡರೆ ಇಶೆತಾ ಅವರ ಜೀವನವು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಗಮನಸೆಳೆದಿದೆ.
ಇಶೆತಾ ಅವರು ಮೊದಲು ಅಂದರೆ 2016ರಲ್ಲಿ ನೀರವ್ ಮೋದಿ ಅವರ ಸಹೋದರ ನೀಶಲ್ ಮೋದಿ ಅವರನ್ನು ಮದುವೆಯಾಗಿದ್ದರು. ಮುಂದೆ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದು, 2022ರಲ್ಲಿ ಅದ್ದೂರಿ ಮದುವೆ ಸಮಾರಂಭದಲ್ಲಿ ನೆಕ್ಸುಜು ಮೊಬಿಲಿಟಿ ಸ್ಥಾಪಕ ಹಾಗೂ ಲಕ್ಷ್ಮಿ ನಿವಾಸ್ ಮಿತ್ತಲ್ ಅವರ ಸೋದರಳಿಯ ಅತುಲ್ಯ ಮಿತ್ತಲ್ ಅವರನ್ನು ವಿವಾಹವಾಗಿದ್ದರು. ಅತ್ತುಲ್ಯ ಅವರು ಇಶೆತಾ ಅವರ ಬದುಕಿಗೆ ಹೊಸ ಆಯಾಮವನ್ನು ನೀಡಿದ್ದಾರೆ.
ಇಶೆತಾ ಅವರ ತಾಯಿ ದೀಪ್ತಿ ಸಲಗಾಂವ್ಕರ್ ಅವರು ಖ್ಯಾತ ಉದ್ಯಮಿ ಧೀರುಭಾಯಿ ಅಂಬಾನಿ ಅವರ ಕಿರಿಯ ಮಗಳು. ದೀಪ್ತಿ ಅವರ ಪತಿ ದತ್ತರಾಜ್ ಸಲಗಾಂವ್ಕರ್ ಅವರು ಗೋವಾದ ಸಂಸ್ಕೃತಿ ಮತ್ತು ಜನಾಂಗೀಯತೆ ಕಾಪಾಡುವ ಸುನಪರಂತವನ್ನು ಸ್ಥಾಪಿಸಿದ್ದಾರೆ.
ದೀಪ್ತಿ ಮತ್ತು ಇಶೆತಾ ಇಬ್ಬರೂ ಈ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಅವರಿಬ್ಬರು ಕ್ರಮವಾಗಿ ಉಪಾಧ್ಯಕ್ಷರು ಹಾಗೂ ಸಲಹಾ ಮಂಡಳಿ ಸದಸ್ಯರಾಗಿ ದುಡಿಯುತ್ತಿದ್ದಾರೆ.
ಇಶೆತಾ ಅವರು ಹೊಂದಿರುವ ಆಸ್ತಿ-ಪಾಸ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಅವರು ಐಷಾರಾಮಿ ಜೀವನವನ್ನು ಮುನ್ನಡೆಸುತ್ತಿದ್ದು, ಹಲವು ಬೆಲೆ ಬಾಳುವ ಕಾರುಗಳು, ಬಂಗಲೆ, ಉಡುಪುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications