ಭಾರತೀಯ ಉದ್ಯಮಿ, ಜನ ಸಹಾಯಕ, ಭಾರತದ 'ವಾಕ್ಸಿನ್ ಪ್ರಿನ್ಸ್ 'ಎಂದು ಕರೆಯಲ್ಪಡುವ ಅಧಾರ್ ಪೂನಾವಾಲಾ ಕುಟುಂಬವು ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಕೋವಿಡ್ -19 ಸಾಂಕ್ರಾಮಿಕ ಪ್ರಾರಂಭದ ಬಳಿಕ ನಾಗರಿಕರಿಗೆ ಲಸಿಕೆ ಹಾಕುವಲ್ಲಿ ಪೂನಾವಾಲಾ ಅವರ "ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ" ನೀಡಿ ಕೊಡುಗೆಯಿಂದಾಗಿ ಈ ಹೆಸರು ಹಲವಾರು ಬಾರಿ ನಾವು ಕೇಳುವಂತಾಗಿದೆ.
ಲೋಕೋಪಕಾರ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಾತ್ರವಲ್ಲದೇ ಪೂನಾವಾಲಾ ಕುಟುಂಬವು ತನ್ನ ವಿಶೇಷ ಹವ್ಯಾಸ, ಆಭರಣ ಹಾಗೂ ಕಾರುಗಳ ಸಂಗ್ರಹಕ್ಕಾಗಿ ಹೆಸರುವಾಸಿಯಾಗಿದೆ. ಅವರ ಹವ್ಯಾಸಗಳ ಬಗ್ಗೆ ಮಾತನಾಡುವಾಗ ಬಿಲಿಯನೇರ್ ಯೊಹಾನ್ ಪೂನಾವಾಲಾ ಅವರ ಹೆಸರನ್ನು ಮರೆಯಲು ಸಾಧ್ಯವಿಲ್ಲ.

ಇವರು ಅಧಾರ್ ಪೂನಾವಾಲಾ ಅವರ ಸಹೋದರ ಸಂಬಂಧಿಯಾಗಿದ್ದಾರೆ. ಯೊಹಾನ್ ಅವರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಎಕ್ಸ್ ಕ್ಲ್ಯೂಸಿವ್ ಕಾರುಗಳನ್ನು ಮಾತ್ರವಲ್ಲದೆ ಪ್ರೈವೆಟ್ ಹೆಲಿಕಾಪ್ಟರ್‌ಗಳ ಒಡೆಯರಾಗಿದ್ದಾರೆ. ಯೊಹಾನ್ ತಮ್ಮ ಕಾರುಗಳಲ್ಲಿ ತಮ್ಮ ಹೆಸರಿನ ಮೊದಲಕ್ಷರಗಳಾದ 'YZP' ಅನ್ನು ಪ್ರದರ್ಶಿಸಲು ಇಚ್ಚಿಸುತ್ತಾರೆ.
ಯೊಹಾನ್ ಪೂನಾವಾಲಾ ಯಾರು?
ಬಿಲಿಯನೇರ್ ಬ್ಯುಸಿನೆಸ್ ಟೈಕೂನ್ ಆಗಿದ್ದ ಝವರಾಯ್ ಪೂನಾವಾಲ ಮತ್ತು ಬೆಹ್ರೋಜ್ ದಂಪತಿಯ ಪುತ್ರನಾಗಿ 1972 ರಲ್ಲಿ ಜನಿಸಿದ ಯೊಹಾನ್ ಪೂನಾವಾಲಾ , ತಮ್ಮ ಶಾಲಾ ಶಿಕ್ಷಣವನ್ನು ಪುಣೆಯ ಬಿಷಪ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಳಿಕ ಪುಣೆಯ ವಾಡಿಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಲಂಡನ್ ನಲ್ಲಿ ಎಂಬಿಎ ಅಭ್ಯಾಸಿಸಿದರು.
ಯೊಹಾನ್ ಪೂನಾವಾಲಾ ಅವರು ಪೂನಾವಾಲಾ ಇಂಜಿನಿಯರಿಂಗ್ ಗ್ರೂಪ್ ಮತ್ತು ಎಲ್-ಒ-ಮ್ಯಾಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ.ಇದಲ್ಲದೆ, ಅವರು ಪೂನಾವಾಲಾ ಸ್ಟಡ್ ಫಾರ್ಮ್ಸ್ ಮತ್ತು ಪೂನಾವಾಲಾ ರೇಸಿಂಗ್ ಮತ್ತು ಬ್ರೀಡಿಂಗ್‌ನ ನಿರ್ದೇಶಕರಾಗಿದ್ದಾರೆ.
ಇವರು ತಮ್ಮ ಸಹೋದರ ಸೈರಸ್ ಪೂನಾವಾಲಾ ಜೊತೆ ಸೇರಿಕೊಂಡು 1966 ರಲ್ಲಿ ಬಯೋಫಾರ್ಮಾಸ್ಯುಟಿಕಲ್ಸ್ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು. ಹಾರ್ಸ್- ರೇಸಿಂಗ್ ಕಮ್ಯೂನಿಟಿ ಯಲ್ಲಿ ಯೊಹಾನ್ ಪೂನಾವಾಲಾ ಹೆಸರುವಾಸಿಯಾಗಿದ್ದಾರೆ.
ಅಮೇರಿಕಾ, ಹಾಂಗ್ ಕಾಂಗ್, ಸಿಂಗಾಪುರ್, ದುಬೈ, ಮತ್ತು ಮಲೇಷಿಯಾದಂತಹ ಅನೇಕ ದೇಶಗಳಲ್ಲಿ ಗೆದ್ದು ತಮ್ಮದೇ ಛಾಪು ಮೂಡಿಸಿರುವ ಅನೇಕ ಚಾಂಪಿಯನ್ ಕುದುರೆಗಳನ್ನು ಪೂನಾವಾಲಾ ಸ್ಟಡ್ ಫಾರ್ಮ್ಸ್ ರಫ್ತು ಮಾಡಿದೆ. ಪ್ರಸ್ತುತ, ಪೂನಾವಾಲಾ ಕುಟುಂಬದ ನಿವ್ವಳ ಮೌಲ್ಯವು $27 ಶತಕೋಟಿಗಿಂತ ಹೆಚ್ಚಿದೆ.
ಯೊಹಾನ್ ಪೂನವಾಲಾ ಐಷಾರಾಮಿ ಕಾರು ಸಂಗ್ರಾಹಕರಾಗಿದ್ದಾರೆ. ಅವರ ಮೊತ್ತ ಮೊದಲ ಕಾರು 1931 Chevy ಆಗಿತ್ತು. ಬಳಿಕ ಅವರ ಕುಟುಂಬ ಹೊಸ ಎತ್ತರಕ್ಕೆ ಏರುತ್ತಿದ್ದಂತೆ, ಯೊಹಾನ್ ಪೂನವಾಲಾ ಅವರ ಕಾರು ಗ್ಯಾರೇಜ್ ಕೂಡಾ ದೊಡ್ಡದಾಗುತ್ತಾ ಹೋಯಿತು.
ಬಿಲಿಯನೇರ್ ಆಗಿರುವ ಅವರು ಇಂದು ವಿವಿಧ ರೀತಿಯ ಐಷಾರಾಮಿ ಕಾರುಗಳಸಂಗ್ರಹವನ್ನು ಹೊಂದಿದ್ದು ಇವುಗಳಲ್ಲಿ ಭಾರತದಲ್ಲಿ ಸಾಕಷ್ಟು ಅಪರೂಪವಾಗಿ ಕಂಡುಬರುವ ಕಾರುಗಳಿವೆ.
ಅವರ ಕಾರುಗಳ ಕಲೆಕ್ಷನ್ ಗಳಲ್ಲಿ ಬೆಂಟ್ಲಿ ಬೆಂಟೈಗಾ, ಲ್ಯಾಂಡ್ ರೋವರ್ ಡಿಫೆಂಡರ್, ಫೆರಾರಿ 488 ಪಿಸ್ತಾ ಸ್ಪೈಡರ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಮತ್ತು ಲಂಬೋರ್ಘಿನಿ ಗಲ್ಲಾರ್ಡೊ ಸೇರಿವೆ. ಯೋಹಾನ್ ಪೂನಾವಾಲಾ ಅವರು ಹೊಂದಿರುವ ಕಾರುಗಳು 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಇದು ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿಗಿಂತಲೂ ದೊಡ್ಡದಾಗಿದೆ.


Click it and Unblock the Notifications