ವಿನೋದ್ ಸರಾಫ್, ಓರ್ವ ಉದ್ಯಮಿಯಾಗಿದ್ದು ಭಾರತದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅಚಲವಾದ ಮತ್ತು ಉದ್ಯಮಶೀಲತೆಯ ಉತ್ಸಾಹದ ಮೂಲಕ ಗುರುತಿಸಿಕೊಂಡಿರುವ ವಿನೋದ್ ಹುಟ್ಟಿನಿಂದಲೂ ಶ್ರೀಮಂತರಾಗಿರಲಿಲ್ಲ. ರಾಜಸ್ಥಾನದ ಮಧ್ಯಮ ವರ್ಗದ ವ್ಯಾಪಾರ ಕುಟುಂಬದ ಹಿನ್ನಲೆಯುಳ್ಳ ವಿನೋದ್ ಅವರು ತಮ್ಮ ಬಾಲ್ಯದಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.
ವಿನೋದ್ ಅವರು 17 ನೇ ವಯಸ್ಸಿನಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಪದವಿ ಪಡೆದರು. ತಮ್ಮ19 ನೇ ವಯಸ್ಸಿನಲ್ಲಿ ಬಿಟ್ಸ್ (BITS) ಪಿಲಾನಿಯಿಂದ ಎಂಬಿಎಯಲ್ಲಿ ಚಿನ್ನದ ಪದಕವನ್ನು ಗಳಿಸಿದರು. ಈ ಎಲ್ಲಾ ಶೈಕ್ಷಣಿಕ ಸಾಧನೆಗಳ ಹೊರತಾಗಿಯೂ, ಸರಾಫ್ ಅವರ ಮಾತೃ ಭಾಷೆ ಹಿಂದಿ ಆಗಿದ್ದರಿಂದ ಪ್ರಮುಖವಾದ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಆರಂಭಿಕವಾದ ವೃತ್ತಿಜೀವನದ ಸವಾಲುಗಳನ್ನು ಎದುರಿಸಿದರು.

ಆದರೆ ಹಿನ್ನಡೆಗಳಿಂದ ಕುಗ್ಗದ ಅವರು, ಸುಮಾರು ಒಂದು ದಶಕಗಳ ಕಾಲ ವಿವಿಧ ಜವಳಿ ಕಂಪನಿಗಳಲ್ಲಿ ತಮ್ಮ ಕೌಶಲ್ಯಗಳನ್ನು ತೋರಿಸಿ, ಅಮೂಲ್ಯವಾದ ಉದ್ಯಮದ ಅನುಭವವನ್ನು ಸಂಗ್ರಹಿಸಿದರು. ಎಂದಿಗೂ ತಾಳ್ಮೆ ಕಳೆದುಕೊಳ್ಳದ ಅವರು ಕೊನೆಗೂ ಬಿರ್ಲಾ ಗ್ರೂಪ್‌ನಲ್ಲಿ ನಿರ್ಣಾಯಕ ಹುದ್ದೆ ಗಿಟ್ಟಿಸಿಕೊಂಡರು.
ಅಂತಿಮವಾಗಿ ಕೈಗಾರಿಕೋದ್ಯಮಿ ಆದಿತ್ಯ ಬಿರ್ಲಾ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದರು. ಗ್ರಾಸಿಮ್ ಇಂಡಸ್ಟ್ರೀಸ್, ಮಾಡರ್ನ್ ಸಿಂಟೆಕ್ಸ್ ಮತ್ತು ಭಿಲ್ವಾರಾ ಗ್ರೂಪ್‌ನಂತಹ ಹೆಸರಾಂತ ಕಂಪನಿಗಳಲ್ಲಿ ಸರಾಫ್ ಮಹತ್ವದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಕಾರ್ಪೊರೇಟ್ ಏಣಿಯನ್ನು ಹಂತಹಂತವಾಗಿ ಹತ್ತುವ ಮೂಲಕ ಸಿಇಒ ಆಗಿ ಉತ್ತುಂಗಕ್ಕೇರಿದರು.
1990 ರಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಂಡ ಅವರು , ಉನ್ನತ-ಹುದ್ದೆಯ ಕಾರ್ಪೊರೇಟ್ ಸ್ಥಾನದ ಭದ್ರತೆಯಿಂದ ದೂರ ಸರಿದು, ಉದ್ಯಮಶೀಲತೆಯೆಡೆಗೆ ಸಾಗುವ ಸಾಹಸ ಮಾಡುವ ದಿಟ್ಟ ನಿರ್ಧಾರವನ್ನು ಮಾಡಿದರು. ಅವರು ತಮ್ಮ ಮಗಳ ಹೆಸರಿನಲ್ಲಿ ವಿನತಿ ಆರ್ಗಾನಿಕ್ಸ್ ಅನ್ನು ಸ್ಥಾಪಿಸಿದರು.
ಇದು ನೋವು ನಿವಾರಕ ಔಷಧ ಐಬುಪ್ರೊಫೇನ್‌ನಲ್ಲಿ ಪ್ರಮುಖ ಅಂಶವಾದ ಐಸೊಪ್ರೊಪಿಲ್ ಬೆಂಜೀನ್ (ಐಬಿಬಿ) ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಸರಾಫ್ ಅವರ ಪುತ್ರಿ ವಿನತಿ ಸರಾಫ್ ಮುತ್ರೇಜಾ ನೇತೃತ್ವದಲ್ಲಿ ಇಂದು ವಿನತಿ ಆರ್ಗಾನಿಕ್ಸ್ ಮುನ್ನಡೆಯುತ್ತಿದೆ.
ಇಂದು ಸರಿಸುಮಾರು 20,014 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳೀಕರಣ ಮತ್ತು ಸುಮಾರು 15,000 ಕೋಟಿ ರೂಪಾಯಿಗಳ (1.8 ಶತಕೋಟಿ ಡಾಲರ್) ವೈಯಕ್ತಿಕ ನಿವ್ವಳ ಮೌಲ್ಯದೊಂದಿಗೆ, ಸರಾಫ್ ಅವರು ಮುಕೇಶ್ ಅಂಬಾನಿ, ಕುಮಾರ್ ಮಂಗಲಂ ಬಿರ್ಲಾ, ಆನಂದ್ ಮಹೀಂದ್ರಾ ಮತ್ತು ಇತರ ವ್ಯಕ್ತಿಗಳ ಜೊತೆಗೆ ಭಾರತದ ಶ್ರೀಮಂತರ ಶ್ರೇಣಿಯನ್ನು ಸೇರಿಕೊಂಡಿದ್ದಾರೆ.
ಸರಾಫ್ ಅವರ ಸಾಧನೆಗಳನ್ನು ಗುರುತಿಸಿ, 2019 ರಲ್ಲಿ ಹುರುನ್ ಇಂಡಿಯಾ ಸೆಲ್ಫ್‌ಮೇಡ್ ಉದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 71 ನೇ ವಯಸ್ಸಿನಲ್ಲಿ, ಅವರು ಫೋರ್ಬ್ಸ್ ಇಂಡಿಯಾದ 2022 ರ ಶ್ರೀಮಂತ ಪಟ್ಟಿಯಲ್ಲಿ 96 ನೇ ಸ್ಥಾನವನ್ನು ಹೊಂದಿದ್ದು, 2023 ರ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1720 ನೇ ಸ್ಥಾನದಲ್ಲಿದ್ದಾರೆ.


Click it and Unblock the Notifications