ದೇಶದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬಹಳ ವೇಗವಾಗಿ ಬೆಳೆಯುತ್ತಿದ್ದು, ಹಲವು ಯುವ ಉದ್ಯಮಿಗಳು ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಹಾಗೂ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ನಮ್ಮ ದೇಶದಿಂದ ಮಾತ್ರವಲ್ಲ ವಿದೇಶದಿಂದಲೂ ಧನಸಹಾಯವನ್ನು ಪಡೆಯುತ್ತಿರುವ ಅನೇಕ ಯುವ ಭಾರತೀಯ ಉದ್ಯಮಿಗಳಿದ್ದಾರೆ. ವಿದಿತ್ ಆತ್ರೆ ಹಾಗೂ ಸಂಜೀವ್ ಬರ್ನ್ವಾಲ್ ಅವರಂಥಹ ಯುವ ಉದ್ಯಮಿಗಳು ಕೂಡ ಈ ಸಾಲಿಗೆ ಸೇರಿದ್ದಾರೆ.
ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್ವಾಲ್ ಅವರು ಐಐಟಿ ದಿಲ್ಲಿಯ ಹಳೆ ವಿದ್ಯಾರ್ಥಿಗಳಾಗಿದ್ದು, ಇವರಿಬ್ಬರು ಬಹಳ ಜನಪ್ರಿಯತೆ ಪಡೆದುಕೊಂಡಿರುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಮೀಶೋದ ಸಹ ಸಂಸ್ಥಾಪಕರು. ವಿದಿತ್ ಆತ್ರೆ ಹಾಗೂ ಸಂಜೀವ್ ಬರ್ನ್ವಾಲ್ ಐಐಟಿಯಿಂದ ಉತ್ತೀರ್ಣತೆ ಹೊಂದಿದ ಕೆಲವು ವರ್ಷಗಳ ಬಳಿಕ ಮೀಶೋವನ್ನು ಪ್ರಾರಂಭಿಸಿದ್ದಾರೆ. ಮೀಶೋ ಒಂದು ಹೈಪರ್ ಲೋಕಲ್, ಆನ್ ಡಿಮಾಂಡ್ ಫ್ಯಾಶನ್ ಮಾರ್ಕೆಟ್ ತಾಣವಾಗಿದೆ.

ವಿದಿತ್ ಅವರು ಮೊದಲು ಪ್ರಾರಂಭಿಸಿದ್ದ ಸ್ಟಾರ್ಟಪ್ ಯಶಸ್ಸನ್ನು ಸಾಧಿಸದೆ ವಿಫಲಗೊಂಡಿತ್ತು. ಹೀಗಾಗಿ, ವಿದಿತ್ ಹಾಗೂ ಸಂಜೀವ್ ಅವರು ಅದರ ವೈಫಲ್ಯದಿಂದ ಸಾಕಷ್ಟು ಪಾಠವನ್ನು ಕಲಿತುಕೊಂಡಿದ್ದರು. ಈ ನಡುವೆ, ದೇಶದ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ಮನಗಂಡರು. ಆದರೆ, ಇದು ಅವರಿಗೆಲ್ಲ ಹೆಚ್ಚಿನ ಯಶಸ್ಸನ್ನು ನೀಡುತ್ತಿಲ್ಲ ಎಂಬುದನ್ನು ಕೂಡ ಅರ್ಥಮಾಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ 2015ರಲ್ಲಿ ಸಂಜೀವ್ ಬರ್ನ್ವಾಲ್ ಅವರ ಜತೆ ಸೇರಿಕೊಂಡು ಮೀಶೋವನ್ನು ಹುಟ್ಟು ಹಾಕಿದರು. ಐಐಟಿಯಿಂದ ಪದವಿಯನ್ನು ಪಡೆದುಕೊಂಡ ಬಳಿಕ ವಿದಿತ್ ಆತ್ರೆ ಅವರಿಗೆ ಐಟಿಸಿಯಲ್ಲಿ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಚೆನ್ನೈ ಐಟಿಸಿಯಲ್ಲಿ ಕೆಲಸ ಮಾಡಿದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಆ ಸಂದರ್ಭದಲ್ಲಿ ವಿದಿತ್ ಅವರು ತಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಬಳಿಕ ವಿದಿತ್ ಅವರು ಟೋಕಿಯೊದಲ್ಲಿ ಕೆಲಸ ಮಾಡುತ್ತಿದ್ದ ಸಂಜೀವ್ ಬರ್ನ್ವಾಲ್ ಅವರನ್ನು ಕರೆಸಿಕೊಂಡು ಮೀಶೋವನ್ನು ಪ್ರಾರಂಭಿಸುವುದಕ್ಕೆ ತೀರ್ಮಾನಿಸಿದರು.
ವಿದಿತ್ ಆತ್ರೆ ಅವರು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ರವಿ ದತ್ ಶರ್ಮಾ ಅವರು ದೆಹಲಿ ಜಲ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದರು. ದಿಲ್ಲಿಯಲ್ಲಿ ಸರ್ಕಾರದ ಎರಡು ಬೆಡ್‌ರೂಮ್‌ನ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ವಿದಿತ್ ಅವರ ತಂದೆಗೆ ತಮ್ಮ ಮಗನನ್ನು ಐಎಎಸ್ ಪಾಸ್ ಮಾಡಿಸಿ ಅಧಿಕಾರಿಯನ್ನಾಗಿ ಮಾಡಬೇಕೆಂದು ಆಸೆಪಟ್ಟಿದ್ದರು. ಅದಕ್ಕಾಗಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಕೂಡ ನಡೆಸುವುದಕ್ಕೆ ಯೋಚಿಸಿದ್ದರು.
ಆದರೆ ಐಐಟಿ ಓದು ಮುಗಿಸಿದ ಬಳಿಕ ಆತ್ರೆ ಅವರು ಸರ್ಕಾರಿ ಉದ್ಯೋಗಕ್ಕೆ ಸೇರುವ ತಮ್ಮ ನಿರ್ಧಾರವನ್ನು ಬದಲಿಸಿಕೊಂಡರು. ಆ ಮೂಲಕ ತಮ್ಮದೇ ಐಡಿಯಾದೊಂದಿಗೆ ವಿನೂತನ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೆ ಯೋಚಿಸಲಾರಂಭಿಸಿದ್ದರು. ಅದರ ಪರಿಣಾಮವಾಗಿ ಮೀಶೋ ಹುಟ್ಟಿಕೊಂಡಿದೆ. ಮೀಶೋ ಬಹಳ ವಿಭಿನ್ನ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ಮಾರಾಟಗಾರರು ಆಪ್‌ನಲ್ಲಿ ಮಾರುಕಟ್ಟೆ ತಾಣವನ್ನು ತಯಾರಿಸುವುದಕ್ಕೆ ಅವಕಾಶವನ್ನು ಪಡೆಯುತ್ತಾರೆ.
ಅವರು ತಮ್ಮ ಫೇಸ್‌ಬುಕ್ ಪೇಜ್‌ಗಳನ್ನು ಮೀಶೋಗೆ ಲಿಂಕ್ ಮಾಡಿಕೊಂಡು ಆ ಮೂಲಕ ಗ್ರಾಹಕರೊಂದಿಗೆ ವಾಟ್ಸಾಪ್‌ನಲ್ಲಿ ಚಾಟ್ ಮಾಡಬಹುದು. ಅವರಿಗೆ ಬರುವ ಆರ್ಡರ್‌ಗಳನ್ನು ಡೆಲಿವರಿ ಮಾಡುವ ಕೆಲಸವನ್ನು ಮೀಶೋ ಮಾಡುತ್ತದೆ. ಇದಕ್ಕೆ ಮಾರಾಟಗಾರರಿಂದ ಮೀಶೋ ಕಮಿಷನ್ ಪಡೆದುಕೊಳ್ಳುತ್ತದೆ.
ಯಾರು ಬೇಕಾದರೂ ಮೀಶೋದಲ್ಲಿ ತಮ್ಮ ಅಕೌಂಟ್ ಅನ್ನು ಮಾಡಿಕೊಂಡು ಮೀಶೋ ಆಪ್‌ನಲ್ಲಿ ಲಭ್ಯವಿರುವ ವಸ್ತುಗಳಿಗೆ ಲಿಂಕ್ ಮಾಡಿಕೊಳ್ಳಬಹುದು. 2021ರಲ್ಲಿ ಮೀಶೋ 870 ಮಿಲಿಯನ್ ಅಮೆರಿಕನ್ ಡಾಲರ್ ಫಂಡ್‌ನ್ನು ಫೆಡಿಲಿಟಿ, ಸಾಫ್ಟ್‌ಬ್ಯಾಂಕ್ ಹಾಗೂ ಬಿ ಕ್ಯಾಪಿಟಲ್‌ನಿಂದ ರೈಸ್ ಮಾಡಿಕೊಂಡಿತ್ತು. 2021ರ ಸೆಪ್ಟಂಬರ್ ವರದಿ ಪ್ರಕಾರ ಮೀಶೋ 4.9 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಮೌಲ್ಯ ಹೊಂದಿದೆ.


Click it and Unblock the Notifications