ನಮ್ಮಲ್ಲಿ ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು ಹಲವಾರು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಖಾಸಗಿ ಕಂಪನಿಗಳಿಗೆ ಸೇರುತ್ತಾರೆ. ಈ ನಡುವೆ, ಕೆಲವರು, ಉದ್ಯಮದ ಕಡೆಗೆ ಆಸಕ್ತಿ ಬೆಳೆಸಿಕೊಂಡು ಸರ್ಕಾರಿ ಸೇವೆಗೆ ಗುಡ್‌ಬೈ ಹೇಳಿ ಸ್ವಂತ ಕಂಪನಿ ಕೂಡ ಆರಂಭಿಸಿ ಯಶಸ್ಸನ್ನು ಸಾಧಿಸುತ್ತಿದ್ದಾರೆ.
ಇನ್ನು ಕೆಲವರು ಅಧ್ಯಕ್ಷ ಅಥವಾ ವ್ಯವಸ್ಥಾಪಕ ನಿರ್ದೇಶಕರಾಗಿ ದೊಡ್ಡ ಕಂಪನಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಅಂಥವರ ಪೈಕಿ 1978ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸಿಎಸ್ ರಾಜನ್ ಕೂಡ ಒಬ್ಬರು.

ಅವರು ಈಗ ಅಂದರೆ 2024 ರ ಜನವರಿ 1ರಿಂದ ಮುಂದಿನ ಎರಡು ವರ್ಷಗಳ ಕಾಲ ಪ್ರತಿಷ್ಟಿತ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಲು ಅಣಿಯಾಗಿದ್ದಾರೆ. ಉನ್ನತ ಹುದ್ದೆಗೆ ಅವರ ನೇಮಕಾತಿಯನ್ನು ರಿಸರ್ವ್ ಬ್ಯಾಂಕ್ ಅನುಮೋದಿಸಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಬುಧವಾರ ಘೋಷಿಸಿದೆ.
ಸಿಎಸ್ ರಾಜನ್ ಯಾರು?
ರಾಜನ್ ಅವರು 38 ವರ್ಷಗಳ ಕಾಲ ನಾಗರಿಕ ಸೇವೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕ 2016 ರಲ್ಲಿ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಅವರ ಪೂರ್ಣ ಹೆಸರು ಚಂದ್ರಶೇಖರ್ ರಾಜನ್.
ಪ್ರಕಾಶ್ ಆಪ್ಟೆ ಅವರ ನಿವೃತ್ತಿ ಬಳಿಕ ಮುಂದಿನ ಅರೆಕಾಲಿಕ ಅಧ್ಯಕ್ಷರನ್ನಾಗಿ ರಾಜನ್ ಅವರ ನೇಮಕವನ್ನು ಆಡಳಿತ ಮಂಡಳಿ ಅನುಮೋದಿಸಿದೆ. ಆಪ್ಟೆ ಅವರ ಅಧಿಕಾರವಧಿಯು 2023ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ರಾಜನ್ ಅವರು ಈಗಾಗಲೇ ಅಂದರೆ 2022ರಿಂದ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಇನ್ನುಮುಂದೆ ಖಾಸಗಿ ವಲಯದ ಮುಂಚೂಣಿಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಮುಖ್ಯಸ್ಥರಾಗಲಿದ್ದಾರೆ. ಡಿಸೆಂಬರ್ 27ರ ಮಾಹಿತಿ ಪ್ರಕಾರ, ಕೋಟಕ್ ಬ್ಯಾಂಕ್ 3790000 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ನಿವೃತ್ತಿ ಬಳಿಕ ರಾಜನ್ ಅವರು ರಾಜಸ್ಥಾನದ ಮುಖ್ಯಮಂತ್ರಿಗಳಿಗೆ ಸಲಹೆಗಾರರಾಗಿ ಸುಮಾರು ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದರು. 2018 ರಲ್ಲಿ ರಾಜನ್ ಅವರು ಐಎಲ್ & ಎಫ್‌ಎಸ್‌ಗೆ ನಿರ್ದೇಶಕರಾಗಿ 2018ರ ಅಕ್ಟೋಬರ್‌ನಲ್ಲಿ ಭಾರತ ಸರ್ಕಾರ ನೇಮಕಗೊಳಿಸಿತ್ತು. 2019ರಲ್ಲಿ ರಾಜನ್ ಅವರು ಐಎಲ್ & ಎಫ್‌ಎಸ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಈಗ ಅವರು ಕಾರ್ಯನಿರ್ವಹಣೇತರ ಅಧ್ಯಕ್ಷರಾಗಿ ಕಂಪನಿಯಲ್ಲಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದ ಅವರು ಸುಮಾರು 12 ವರ್ಷಗಳ ಕಾಲ ಇಂಧನ, ಹೆದ್ದಾರಿ ಸೇರಿದಂತೆ ಮೂಲಭೂತ ಸೌಕರ್ಯ ವಲಯದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ಸುಮಾರು 14 ವರ್ಷಗಳ ಕಾಲ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಲಯದಲ್ಲಿಯೂ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದುಕೊಂಡಿದ್ದಾರೆ.


Click it and Unblock the Notifications