ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದ್ದು, ತಂತ್ರಜ್ಞಾನ, ಉದ್ಯಮ, ಬಾಹ್ಯಾಕಾಶ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ವಿಶ್ವದ ಮುಂದೆ ಗಮನಸೆಳೆಯುತ್ತಿರುವ ಸಾಧನೆಗೆ ಸಾಕ್ಷಿಯಾಗುತ್ತಿದೆ. ಆದರೆ, ಭಾರತ ಇಷ್ಟೊಂದು ಪ್ರಗತಿ ಪಥದಲ್ಲಿ ಸಾಗುತ್ತಿರಬೇಕಾದರೆ ಅದಕ್ಕೆ ಇಲ್ಲಿನ ಉದ್ಯಮಿಗಳ ಕೊಡುಗೆ ಕೂಡ ಗಮನಾರ್ಹ.
ಕೇವಲ 2.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇಷ್ಟು ಕಡಿಮೆ ಹೂಡಿಕೆಯೊಂದಿಗೆ ವ್ಯವಹಾರ ಪ್ರಾರಂಭಿಸಿ ಅದನ್ನು ಬಹುಕೋಟಿಗಳ ಉದ್ಯಮವಾಗಿ ಪರಿವರ್ತಿಸಿದ ಭಾರತದ ಯಶಸ್ವಿ ಉದ್ಯಮಿಗಳ ಸಾಲಿಗೆ ಬಿಪಿನ್ ಹಡ್ವಾನಿ ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ-

ಸಂಸ್ಥೆ, ಅದರ ಸ್ಥಾಪಕರ ಬಗ್ಗೆ ತಿಳಿಯಿರಿ
ಬಿಪಿನ್ ಹಡ್ವಾಣಿ ಹಾಗೂ ಅವರ ಪತ್ನಿಯು ಕೇವಲ 2.5 ಲಕ್ಷ ರೂಪಾಯಿಯ ಸಣ್ಣ ಮೊತ್ತದೊಂದಿಗೆ ಗೋಪಾಲ್ ಸ್ನಾಕ್ಸ್ ಲಿಮಿಟೆಡ್ ಎಂಬ ಉದ್ಯಮ ಪ್ರಾರಂಭಿಸಿದ್ದರು. ಇದನ್ನು ಹುಟ್ಟು ಹಾಕಿದ ಬಳಿಕ ಅದು ನಿಧಾನಕ್ಕೆ ಯಶಸ್ವಿನ ಹಾದಿಯಲ್ಲಿ ಸಾಗುತ್ತಾ ಹೋಗಿದೆ. 2022ರ ಆರ್ಥಿಕ ವರ್ಷದಲ್ಲಿ ಕಂಪನಿಯ ಮೌಲ್ಯವು 1,306 ಕೋಟಿ ರೂಪಾಯಿಗಳಿಗೆ ಏರಿದೆ.
ಈ ಗೋಪಾಲ್ ಬ್ರಾಂಡ್ ಅನ್ನು ದೇಶದಲ್ಲಿ ಹೆಚ್ಚು ಜನಪ್ರಿಯಗೊಳಿಸಬೇಕಾದರೆ ಅದರ ಹಿಂದೆ ಬಿಪಿನ್ ಹಾಗೂ ಅವರ ಕುಟುಂಬದವರ ಪರಿಶ್ರಮ ಹಾಗೂ ಬದ್ಧತೆ ಬಹಳ ಅಡಗಿದೆ. ಇಡೀ ದೇಶದಲ್ಲಿ ಖಾರದ ವಸ್ತುಗಳ ಪೈಕಿ ನಾಲ್ಕನೇಯ ಅತಿದೊಡ್ಡ ತಿಂಡಿ-ನಿನಿಸುಗಳ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ.
ಝೀ ನ್ಯೂಸ್ ಪ್ರಕಾರ, ಹಡ್ವಾಣಿ ಅವರು ಹಳ್ಳಿಯಲ್ಲಿ ತಮ್ಮ ಚಿಕ್ಕ ಅಂಗಡಿಯಲ್ಲಿ ತಂದೆ ವ್ಯಾಪಾರ ನಡೆಸುತ್ತಿದ್ದು, ಅಲ್ಲಿ ಮಾರಾಟವಾಗುತ್ತಿದ್ದ ನಮ್ಕೀನ್ (ಖಾರದ) ತಿಂಡಿಗಳನ್ನು ಗಮನಿಸುತ್ತಿದ್ದರು. ಅಲ್ಲದೆ, ಅವರ ತಂದೆಯು ಮನೆಯಲ್ಲಿಯೇ ಸಾಂಪ್ರದಾಯಿಕವಾದ ಗುಜರಾತಿ ತಿಂಡಿಗಳನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಅತ್ತ ಮಗ ಬಿಪಿನ್ ಕೂಡ ಶಾಲೆಯಿಂದ ಬಂದು ತಂದೆಗೆ ನೆರವಾಗುತ್ತಿದ್ದರು.
ಹೀಗೆ ವ್ಯಾಪಾರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಹಡ್ವಾಣಿ ಅವರು 1990ರಲ್ಲಿ ತಮ್ಮ ತಂದೆಯಿದ 4500 ರೂಪಾಯಿ ಪಡೆದುಕೊಂಡು ತಿಂಡಿ ವ್ಯಾಪಾರವನ್ನು ಶುರು ಮಾಡಿದ್ದು, ಆ ಮೂಲಕ ಉದ್ಯಮ ಸ್ಥಾಪಿಸುವ ತಮ್ಮ ಕನಸು ನನಸುಗೊಳಿಸುವುದಕ್ಕೆ ಹೆಜ್ಜೆ ಹಾಕಿದ್ದರು. ನಾಲ್ಕು ವರ್ಷಗಳ ಬಳಿಕ ತಮ್ಮದೇ ಸ್ವಂತ ಉದ್ಯಮ ಆರಂಭಿಸುವುದಕ್ಕೆ ನಿರ್ಧರಿಸಿದ್ದು, ಈ ಹಿಂದೆ ಪಾಲುದಾರಿಕೆ ವ್ಯಾಪಾರದಿಂದ ಬಂದ 2.5 ಲಕ್ಷ ರೂಪಾಯಿಯನ್ನು ವಿನಿಯೋಗಿಸಿ ತಮ್ಮದೇ ವ್ಯಾಪಾರವನ್ನು ಸ್ಥಾಪಿಸಿದರು.
1994ರಲ್ಲಿ ವ್ಯವಹಾರ ಬೇರ್ಪಟ್ಟ ಬಳಿಕ ಹಡ್ವಾಣಿ ಅವರು ಮನೆಯೊಂದನ್ನು ಖರೀದಿಸುವ ನಿರ್ಧಾರ ಮಾಡಿದರು. ಆ ಮೂಲಕ ಗೋಪಾಲ್ ಸ್ನಾಕ್ಸ್ ಹೆಸರಿನ ಬ್ರಾಂಡ್ ಆರಂಭಿಸಿದರು. ಮನೆಯಲ್ಲೇ ಸಾಂಪ್ರದಾಯಿಕ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಅದಕ್ಕಾಗಿ ಬಿಪಿನ್ ಅವರು ರಾಜ್‌ಕೋಟ್‌ನ ಬೀದಿಗಳಲ್ಲಿ ಸೈಕಲ್‌ನಲ್ಲಿ ತೆರಳಿ ತಿಂಡಿ-ತಿನಿಸು ಮಾರಾಟ ಮಾಡುತ್ತಿದ್ದರು. ಆ ಮೂಲಕ ತಾವು ತಯಾರಿಸುತ್ತಿದ್ದ ವಸ್ತುಗಳನ್ನು ಗ್ರಾಹಕರು ಹಾಗೂ ಏಜೆನ್ಸಿಗಳಿಗೆ ತಲುಪಿಸುತ್ತಿದ್ದರು.
ವ್ಯಾಪಾರ ನಿಧಾನಕ್ಕೆ ಚೇತರಿಕೆ ಕಾಣುತ್ತಿದ್ದಂತೆ ಒಂದು ಸಣ್ಣ ಪ್ಲಾಟ್ ಅನ್ನು ಖರೀದಿಸಿಕೊಂಡು ಅಲ್ಲಿ ಹೆಚ್ಚಿನ ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ತಯಾರಿಸುತ್ತಿದ್ದರು. ಜತೆಗೆ ಅದಕ್ಕಾಗಿ ಒಂದು ಫ್ಯಾಕ್ಟರಿಯನ್ನು ಕೂಡ ಸ್ಥಾಪಿಸಿದರು. ಇದು ಹಡ್ವಾಣಿ ಅವರ ತಿಂಡಿ-ತಿನಿಸುಗಳ ವ್ಯಾಪಾರ ಉದ್ಯಮವನ್ನು ಎತ್ತರಕ್ಕೆ ಬೆಳೆಸುವುದಕ್ಕೆ ಸಹಕಾರಿಯಾಯಿತು. ಹಡ್ವಾನಿ ಅವರು ಹಾಕಿದ ಕಠಿಣ ಪರಿಶ್ರಮದಿಂದಾಗಿ ಗೋಪಾಲ್ ಸ್ನಾಕ್ಸ್ ದೇಶದ ದೊಡ್ಡ ನಮ್ಕಿನ್ ಬ್ರಾಂಡ್ ಆಗಿ ರೂಪುಗೊಂಡಿದೆ.


Click it and Unblock the Notifications