ಮಾಸ್ಟರ್‌ಶೆಫ್ ಇಂಡಿಯಾ ಸೀಸನ್ 8 ಕೊನೆಯಾಗಿದೆ. ಇದರಲ್ಲಿ ನಮ್ಮ ಕರ್ನಾಟಕದ ಹೆಮ್ಮೆ, ಮಂಗಳೂರಿನ ಮೊಹಮ್ಮದ್ ಆಶಿಕ್ ವಿಜೇತರಾಗಿ ಮಾಸ್ಟರ್‌ಶೆಫ್ ಕೋಟ್ ಅನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ನುರಿತ ಬಾಣಸಿಗರಿಂದ ಶ್ಲಾಘನೆ ಗಳಿಸಿದ್ದಾರೆ.
ಎಂಟು ವಾರಗಳ ಈ ಶೋ ಬಳಿಕ ಮಂಗಳೂರಿನ 24 ವರ್ಷದ ಮೊಹಮ್ಮದ್ ಆಶಿಕ್ ಈ ಸೀಸನ್‌ನ ಅಂತಿಮ ಮಾಸ್ಟರ್‌ಚೆಫ್ ಆಗಿ ಹೊರಹೊಮ್ಮಿದ್ದಾರೆ. ಮೊಹಮ್ಮದ್ ಆಶಿಕ್ ಯಾರು, ಲಭ್ಯವಾಗುವ ಬಹುಮಾನ ಮೊತ್ತವೆಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಆಶಿಕ್ ಯಾರು, ಬಹುಮಾನ ಮೊತ್ತವೆಷ್ಟು?
ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ 2023 ಅನ್ನು ಗೆದ್ದಿದ್ದು, ಶೆಫ್ ಕೋಟ್ ಅನ್ನು ಪಡೆಯಲಿದ್ದಾರೆ. ಹಾಗೆಯೇ 25 ಲಕ್ಷ ರೂಪಾಯಿಯನ್ನು ಕೂಡಾ ಪಡೆಯಲಿದ್ದಾರೆ.
ಕಳೆದ ಸೀಸನ್‌ನಲ್ಲಿ ಡಿಸ್ಕೌಲಿಫೈ ಆಗಿದ್ದ ಆಶಿಕ್ ಈ ಸೀಸನ್‌ನಲ್ಲಿ ತನ್ನ ಉತ್ಸಾಹ ಮತ್ತು ಪರಿಶ್ರಮದಿಂದಾಗಿ ಮಾಸ್ಟರ್‌ಶೆಫ್ ಇಂಡಿಯಾದ ತಮ್ಮ ಕನಸನ್ನು ಈಡೇರಿಸಿದ್ದಾರೆ. ಹಾಗೆಯೇ ಮಂಗಳೂರಿನ, ಕರ್ನಾಟಕದ ಆಹಾರವನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಮೊಹಮ್ಮದ್ ಆಶಿಕ್ ಅವರ ಪ್ರಯಾಣವು ಸಾಮಾನ್ಯವಾದುದ್ದಲ್ಲ. ಈ ಸೀಸನ್‌ನಲ್ಲಿ ಮೊದಲ ಎಲಿಮಿನೇಷನ್ ರೌಂಡ್‌ನಲ್ಲಿ ಕಾಣಿಸಿಕೊಂಡ ಆಶಿಕ್ ತನ್ನ ಅಡುಗೆ ಕಲೆಯಿಂದಲೇ ಈಗ ಅಂತಿಮವಾಗಿ ಪ್ರತಿಷ್ಠಿತ ಮಾಸ್ಟರ್‌ಶೆಫ್ ಇಂಡಿಯಾ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.
ಮಾಸ್ಟರ್‌ಶೆಫ್ ಇಂಡಿಯಾ ಅಡುಗೆಮನೆಗೆ ಬರುವ ಮೊದಲು, ಆಶಿಕ್ ತನ್ನದೇ ಆದ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದರು. ಈ ಸೀಸನ್‌ನಲ್ಲಿ ತನ್ನ ಅಡುಗೆ ಕಲೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕರಾವಳಿಯ ಸಮುದ್ರ ಆಹಾರಗಳನ್ನು ಮಾಡರ್ನ್ ಆಗಿ ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಈ ಸೀಸನ್‌ನಲ್ಲಿ ಪ್ರದರ್ಶಿಸಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಅನರ್ಹರಾಗಿದ್ದರೂ ಕೂಡಾ ಆಶಿಕ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಈ ಬಾರಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಶಿಕ್
"ಮಾಸ್ಟರ್‌ಶೆಫ್ ಇಂಡಿಯಾದಲ್ಲಿ ನಾನು ನಡೆಸಿದ ಪ್ರಯಾಣಕ್ಕಾಗಿ ನಾನು ಅಪಾರವಾಗಿ ಕೃತಜ್ಞನಾಗಿದ್ದೇನೆ. ಎಲಿಮಿನೇಷನ್ ಎದುರಿಸುವುದರಿಂದ ಹಿಡಿದು ಟ್ರೋಫಿ ಹಿಡಿಯುವವರೆಗೆ, ಪ್ರತಿ ಕ್ಷಣವೂ ಒಂದು ಪಾಠವಾಗಿತ್ತು. ಈ ಅನುಭವವು ನನ್ನ ಜೀವನವನ್ನು ಸಂಪೂರ್ಣವಾಗಿ ಮರುರೂಪಿಸಿದೆ ಮತ್ತು ಈ ಗೌರವಾನ್ವಿತ ಟೈಟಲ್ ಅನ್ನು ಗೆಲ್ಲುವುದು ಸಂತೋಷವಾಗಿದೆ," ಎಂದು ತಿಳಿಸಿದರು.
"ಕಳೆದ ಸೀಸನ್‌ನಲ್ಲಿ ನಾನು ಅವಕಾಶವನ್ನು ಕಳೆದುಕೊಂಡೆ. ಈಗ ದೃಢವಾದ ನಿರ್ಣಯದೊಂದಿಗೆ ಮತ್ತೆ ಹಿಂತಿರುಗಿದೆ. ಇದು ಕಠಿಣವಾಗಿತ್ತು. ಆದರೆ ನಾನು ಸಂಪೂರ್ಣವಾಗಿ ಪಾಕಶಾಲೆಯ ಕರಕುಶಲತೆಯ ಕಲಿಕೆಗೆ ನನ್ನನ್ನು ನಾನು ಅರ್ಪಿಸಿಕೊಂಡಿದ್ದೇನೆ," ಎಂದು ಹೇಳಿದರು.
"ಈ ಗೆಲುವು ನನ್ನದಲ್ಲ. ತಮ್ಮ ಕನಸನ್ನು ಬೆನ್ನಟ್ಟಲು ಸಾಧ್ಯವಾಗದೆ, ಹಲವಾರು ವಿರೋಧಗಳನ್ನು ಎದುರಿಸುವ ಪ್ರತಿಯೊಬ್ಬ ಕನಸುಗಾರರಿಗೆ ಇದು ಅರ್ಪಣೆ. ನಾನು ತೀರ್ಪುಗಾರರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇನೆ. ಶೆಫ್ ವಿಕಾಸ್, ರಣವೀರ್ ಮತ್ತು ಪೂಜಾ, ಸಹ ಸ್ಪರ್ಧಿಗಳು, ಪ್ರೇಕ್ಷಕರು ಮತ್ತು ಅಡುಗೆಮನೆಯಲ್ಲಿ ಪ್ರತಿ ದಿನವೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಸಹಾಯ ಮಾಡಿದ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು," ಎಂದು ತಿಳಿಸಿದರು.
"ನಾನು ಗಮನಾರ್ಹವಾಗಿ ಬೆಳೆದಿದ್ದೇನೆ ಮತ್ತು ನನ್ನ ಅಡುಗೆ ಕೌಶಲ್ಯದಲ್ಲಿ ಗಮನಾರ್ಹ ಬದಲಾವಣೆ ಇದೆ. ಈ ಎಲ್ಲ ಅನುಭವಗಳಿಗೆ ನಾನು ಧನ್ಯವಾದವನ್ನು ತಿಳಿಸುತ್ತೇನೆ," ಎಂದು ಹೇಳಿದರು.


Click it and Unblock the Notifications