ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆ ದೇಶ ದಿವಾಳಿಯಾಗುವ ಹಂತದಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಪಾಕಿಸ್ತಾನವು ಕಳೆದ 70 ವರ್ಷಗಳಲ್ಲಿ ತನ್ನ ತಪ್ಪು ನೀತಿ ಹಾಗೂ ಕೆಟ್ಟ ರಾಜಕೀಯ ನಿರ್ಧಾರಗಳಿಂದಾಗಿ ಭಾರತದಂತೆ ಅಭಿವೃದ್ಧಿ ಹೊಂದಲು ವಿಫಲವಾಗಿದೆ ಎನ್ನುವುದು ವಾಸ್ತವ ಸಂಗತಿ. ಆದರೆ ಕೆಲವು ಪಾಕಿಸ್ತಾನಿಗಳು ಉತ್ತಮ ಉದ್ಯಮಿಯಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದು, ವಿಶ್ವದಾದ್ಯಂತ ಹೆಸರು ಕೂಡ ಮಾಡಿದ್ದಾರೆ.
ಇನ್ನು ಕೋಟ್ಯಾಧಿಪತಿಗಳ ಲೆಕ್ಕ ಬಂದಾಗ ಪಾಕಿಸ್ತಾನವು ಭಾರತದ ಮುಂದೆ ಎಲ್ಲಿಯೂ ನಿಲ್ಲುವ ಸ್ಥಿತಿಯಲ್ಲಿಲ್ಲ. ಇದು ಕಳೆದ 70 ವರ್ಷಗಳಲ್ಲಿ ಭಾರತ ಯಾವು ರೀತಿಯಲ್ಲಿ ಪ್ರಗತಿಯನ್ನು ಸಾಧಿಸಿದೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ. ಉದಾಹರಣೆಗೆ ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಸುಮಾರು USD 82 ಬಿಲಿಯನ್ ಆಗಿದ್ದರೆ ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ವ್ಯಕ್ತಿ ಶಾಹಿದ್ ಖಾನ್ ಅವರ ನಿವ್ವಳ ಆಸ್ತಿ ಮೌಲ್ಯವು ಕೇವಲ USD 12 ಬಿಲಿಯನ್ ಆಗಿದೆ. ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಶಾಹಿದ್ ಖಾನ್ ಅಂದರೆ ಯಾರು?
1950ರ ಜುಲೈ18ರಂದು ಜನಿಸಿರುವ ಶಾಹಿದ್ ಖಾನ್ ಅವರು ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫ್ಲೆಕ್ಸ್-ಎನ್-ಗೇಟ್ ಮಾಲೀಕರಾದ ಶಾಹಿದ್ ಖಾನ್ ಕೋಟ್ಯಾಧಿಪತಿ ಉದ್ಯಮಿಯಾಗಿದ್ದಾರೆ. ಜತೆಗೆ ಅವರು ಕ್ರೀಡಾ ಉದ್ಯಮಿಯೂ ಹೌದು. ಅವರು ಫ್ಲೆಕ್ಸ್-ಎನ್-ಗೇಟ್ ವಾಹನಗಳ ಬಿಡಿಭಾಗ ಪೂರೈಕೆ ಮಾಡುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಹಿದ್ ಖಾನ್ ಅವರು ನ್ಯಾಷನಲ್ ಫುಟ್ಬಾಲ್ ಲೀಗ್((NFL)ನ ಜಾಕ್ಸನ್‌ವೆಲ್ಲೆ ಜಾಗ್ವಾರ್ಸ್ ಹಾಗೂ ಫುಲ್‌ಹಾಮ್ ಎಫ್‌ಸಿ ಪ್ರೀಮಿಯರ್ ಲೀಗ್‌ನ ಮಾಲೀಕರು ಕೂಡ ಆಗಿದ್ದಾರೆ. ಅಲ್ಲದೆ ಶಾಹಿದ್ ಅವರು ತಮ್ಮ ಪುತ್ರ ಟೋನಿ ಖಾನ್ ಜತೆಗೆ ಅಮೆರಿಕನ್ ಕುಸ್ತಿ ಪ್ರಮೋಷನ್ ಆಲ್ ಎಲೈಟ್ ವ್ರೆಸ್ಲಿಂಗ್(ಎಇಡಬ್ಲ್ಯು)ನ ಸಹ ಮಾಲೀಕರೂ ಆಗಿದ್ದಾರೆ.
ಶಾಹಿದ್ ಖಾನ್ ಅವರು ಪಾಕಿಸ್ತಾನದ ಲಾಹೋರ್‌ನಲ್ಲಿ ಹುಟ್ಟಿದ್ದು, ಅವರ ಕುಟುಂಬವು ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಆದರೆ ಶಾಹಿದ್ ಕುಟುಂಬವು ಮಧ್ಯಮ ವರ್ಗದ ಕುಟುಂಬವಾಗಿತ್ತು. ಅವರ ತಾಯಿ ಗಣಿತ ಅಧ್ಯಾಪಕಿಯಾಗಿದ್ದು, ತಂದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. 1967ರಲ್ಲಿ ತನಗೆ 16 ವರ್ಷ ಇರುವಾಗ ಶಾಹಿದ್ ಕಲಿಯುವ ಆಸಕ್ತಿಯಿಂದ ಮನೆಯನ್ನು ತೊರೆದು ಅಮೆರಿಕ ದೇಶಕ್ಕೆ ತೆರಳಿದ್ದರು. ಅಲ್ಲಿ ಅವರು ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸೇರಿಕೊಂಡರು. ಆದರೆ ಹಣಕಾಸಿನ ತೊಂದರೆಯಿದ್ದ ಕಾರಣ ಮೊದಲ ಸೆಮಿಸ್ಟರ್‌ನಲ್ಲಿರುವಾಗಲೇ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡಿದ್ದರು.
ತಮ್ಮ ಮೊದಲ ಉದ್ಯೋಗಕ್ಕೆ ಪಡೆಯುತ್ತಿದ್ದ ವೇತನ ಕೇವಲ 1.20 ಡಾಲರ್ (ಗಂಟೆಗೆ). ಆದರೆ ಬದುಕಿನಲ್ಲಿ ಪಟ್ಟ ನಾನಾ ರೀತಿಯ ಕಷ್ಟಗಳನ್ನು ಸವಾಲಾಗಿ ಎದುರಿಸಿದ ಪರಿಣಾಮ, 2021ರ ಫೋರ್ಬ್ಸ್‌ನಲ್ಲಿ ಅಮೆರಿಕದ 400 ಮಂದಿ ಶ್ರೀಮಂತರ ಪಟ್ಟಿಯಲ್ಲಿ 98ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಾಹಿದ್ ಶಿಕ್ಷಣದ ಜತೆಗೆ ಅಮೆರಿಕದ ಆಟೊಮೊಟೀವ್ ಬಿಡಿಭಾಗಗಳ ವಿತರಕ ಸಂಸ್ಥೆ ಫೆಲೆಕ್ಸ್ ಎನ್-ಗೇಟ್‌ನಲ್ಲಿ ಎಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ. 1978ರಲ್ಲಿ ಅವರು ಆ ಕಂಪೆನಿಯನ್ನು ಬಿಟ್ಟು ಅದೇ ಮಾದರಿಯ ಕಾರುಗಳ ಬಂಪರ್ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಅಂದರೆ 1980ರಲ್ಲಿ ಫ್ಲೆಕ್ಸ್ ಎನ್-ಗೇಟ್ ಕಂಪೆನಿಯು ನಷ್ಟ ಹೊಂದಿದ್ದ ವೇಳೆ ಅದನ್ನೇ ಖರೀದಿ ಮಾಡಿದರು.
ಪ್ರಸ್ತುತ ಫ್ಲೆಕ್ಸ್ ಎನ್-ಗೇಟ್ ಅಮೆರಿಕದ ಅತಿದೊಡ್ಡ ಆಟೋಮೊಬೈಲ್ ಬಿಡಿ ಭಾಗಗಳ ಪೂರೈಕೆ ಕಂಪೆನಿಯಾಗಿ ಬೆಳೆದಿದೆ. ಜತೆಗೆ ಅಮೆರಿಕ, ಚೀನಾ, ಅರ್ಜೆಂಟೀನಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಮೆಕ್ಸಿಕೋ ಮತ್ತು ಕೆನಡಾ ಸೇರಿದಂತೆ ವಿಶ್ವದ ಹಲವೆಡೆ 69 ಉತ್ಪಾದನಾ ಘಟಕಗಳನ್ನು ಹೊಂದಿದ್ದು, 25,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 2020ರಲ್ಲಿ ಪ್ರಾರಂಭಗೊಂಡ 24 ಗಂಟೆಗಳ ಬ್ಲ್ಯಾಕ್ ನ್ಯೂಸ್ ಚಾನೆಲ್‌ನ ಪಾಲುದಾರರು ಕೂಡ ಆಗಿದ್ದಾರೆ.


Click it and Unblock the Notifications