ಪಾರುಲ್ ಶರ್ಮಾ ಅವರು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನ, ಗ್ರೂಪ್ ಪ್ರೆಸಿಡೆಂಟ್ ಆಗಿ ಜೂನ್ 20 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಕಮ್ಯುನಿಕೇಷನ್ ಸ್ಟ್ರಾಟಜಿಸ್ಟ್ ಆಗಿ ವ್ಯಾಪಕ ಅನುಭವ ಹೊಂದಿರುವ ಇವರು, ಪ್ರಮುಖ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, 40 ವರ್ಷಗಳ ಕಾಲ ರಿಲಯನ್ಸ್ ಗ್ರೂಪ್‌ನ ಪ್ರಮುಖರಲ್ಲಿ ಓರ್ವರಾಗಿ ಸೇವೆ ಸಲ್ಲಿಸಿದ ಟೋನಿ ಜೇಸುದಾಸನ್ ಫೆಬ್ರವರಿಯಲ್ಲಿ ನಿಧನರಾದ ಬಳಿಕ ಅವರ ಸ್ಥಾನವನ್ನು ತುಂಬಲು ಪಾರುಲ್ ಶರ್ಮಾ ಅವರನ್ನು ನಿಯೋಜಿಸಲಾಯಿತು. ಹೀಗಾಗಿ ಶರ್ಮಾ ಇನ್ಮುಂದೆ ರಿಲಯನ್ಸ್ ಎಡಿಎ ಗ್ರೂಪ್ ಅನ್ನು ಪ್ರತಿನಿಧಿಸಿ ಮುನ್ನಡೆಸಲಿದ್ದಾರೆ.
ಪಾರುಲ್ ಶರ್ಮಾ ಯಾರು?: ರೂಪರ್ಟ್ ಮುರ್ಡೋಕ್ ಮಾಲೀಕತ್ವದ ಸ್ಟಾರ್ ಇಂಡಿಯಾದಲ್ಲಿ 15 ವರ್ಷಗಳ ಕಾಲ ಕಮ್ಯುನಿಕೇಷನ್ಸ್ ಪ್ಲಾನ್ ಮೇಲ್ವಿಚಾರಣೆ ಮಾಡಿದ್ದಲ್ಲದೇ ಸ್ಟಾರ್ ಇಂಡಿಯಾದ ಪಬ್ಲಿಕ್ ರಿಲೇಷನ್ಸ್, ರಿಲೇಷನ್ಶಿಪ್ಸ್, ಮತ್ತು ಕಾರ್ಪೊರೇಟ್ ಇಮೇಜ್ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದರು. ಇದಕ್ಕೂ ಮೊದಲು ಕಲೋನ್ ಮೂಲದ ಜರ್ಮನ್ ಬ್ರಾಡ್‌ಕಾಸ್ಟರ್ Deutsche Welle ಗಾಗಿ ಕೆಲಸ ಮಾಡಿದ್ದರು.

ಇವರು ಛಾಯಾಗ್ರಹಣದತ್ತ ಗಮನಹರಿಸಲು 2017 ರಲ್ಲಿ ಸ್ಟಾರ್ ತೊರೆದರು ಮತ್ತು ಅಷ್ಟೇ ತ್ವರಿತವಾಗಿ ಈ ಕ್ಶೇತ್ರದಲ್ಲೂ ತಮ್ಮ ಹೆಸರು ಸ್ಥಾಪಿಸುವಲ್ಲಿ ಯಶಸ್ವಿಯಾದರು. ವಾಸ್ತುಶಿಲ್ಪ, ಅರ್ಬನ್ ಲ್ಯಾಂಡ್ ಸ್ಕ್ಯಾಪ್ಸ್, ಹ್ಯೂಮನ್ ಫಾರಂ ವಿಚಾರಗಳಲ್ಲಿ ಕೆಲಸ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ಕುಂಭಮೇಳದಅವರ ಫೋಟೋ ಸರಣಿ 2019 ರಲ್ಲಿ ಪ್ರತಿಷ್ಠಿತ ಫ್ಲಾರೆನ್ಸ್ ಸಾರ್ವಜನಿಕ ವಸ್ತುಸಂಗ್ರಹಾಲಯ 'ಮರಿನೋ ಮರಿನಿ' ನಲ್ಲಿ ಪ್ರದರ್ಶಿಸಲಾಯಿತು.
2020 ರಲ್ಲಿ, ಅವರು ಕರೋನವೈರಸ್ ಸಾಂಕ್ರಾಮಿಕ ಮತ್ತು ವಲಸಿಗರ ಸಂಕಷ್ಟ, ಕೋವಿಡ್ ಸಾವುಗಳ ಕುರಿತ 'ಡಯಲೆಕ್ಟ್ಸ್ ಆಫ್ ಸೈಲೆನ್ಸ್' ಪುಸ್ತಕವನ್ನು ಬರೆದಿದ್ದು, ಅವರ ಎರಡನೇ ಪುಸ್ತಕ 'ಕೊಲಾಬಾ' ಶೀಘ್ರ ಬಿಡುಗಡೆಗೊಳ್ಳಲಿದೆ. "ಪಾರುಲ್ ಗ್ರೂಪ್ ಅಧ್ಯಕ್ಷರಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಿರುವುದು ನಮಗೆ ಖುಷಿ ತಂದಿದೆ. ಇದು ಗ್ರೂಪ್‌ನೊಂದಿಗಿನ ಅವರ ಮೊದಲ ಔಪಚಾರಿಕ ಸಂಬಂಧವಾಗಿದ್ದರೂ, ಅವರು ಟೋನಿಯ ಪಾಲುದಾರರಾಗಿ ರಿಲಯನ್ಸ್ ಕುಟುಂಬದ ಸದಸ್ಯರಾಗಿದ್ದರು," ಎಂದು ಪಾರುಲ್ ಅವರನ್ನು ಸ್ವಾಗತಿಸಿದ ರಿಲಯನ್ಸ್ ಹೇಳಿಕೊಂಡಿದೆ.
"ಟೋನಿಯವರ ಕುರಿತಾದ ನಮ್ಮ ಅವಿಸ್ಮರಣಿಯ ನೆನಪು ಮತ್ತು ಗ್ರೂಪ್‌ಗಾಗಿ ಮಾಡಿದ್ದಅವರ ಸೇವೆ ಪಾರುಲ್ ಆಗಮನದಿಂದ ಇನ್ನಷ್ಟು ಸ್ಮರಣೀಯವಾಗಿದೆ," ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. "ಟೋನಿಯವರು ಸಾಗಿದ ದಾರಿಯಲ್ಲಿ ಹೆಜ್ಜೆ ಹಾಕುವುದು ಸುಲಭದ ಮಾತಲ್ಲ. ಆದರೆ ಅವರ ದಾರಿಯಲ್ಲಿ ಸಾಗುವ ನನ್ನ ಪ್ರಯತ್ನವನ್ನು ನೋಡಿ ಅವರು ಸಂತೋಷಪಡಾಬಹುದು," ಎಂದು ಪಾರುಲ್ ಶರ್ಮಾ ಹೇಳಿಕೊಂಡಿದ್ದಾರೆ.
ಜಾಗತಿಕ ಮಾಧ್ಯಮಗಳೊಂದಿಗೆ ನನ್ನ ಅನುಭವದ ಜೊತೆಗೆ, ಸ್ಟಾಕ್ ಹೋಲ್ಡರ್ ಮ್ಯಾನೇಜ್ಮೆಂಟ್ ನಲ್ಲಿ ಸಹಾನುಭೂತಿ ಮತ್ತು ಮಾನವೀಯತೆಯನ್ನು ಮಿಶ್ರಣ ಮಾಡಲು ಬಯಸುತ್ತೇನೆ. ರಿಲಯನ್ಸ್ ಗ್ರೂಪ್ ಕ್ರಾಂತಿಕಾರಿ ಹಾದಿಯಲ್ಲಿದ್ದು, ಇದನ್ನು ಎತ್ತಿಹಿಡಿಯಲು ನಾನು ಪ್ರಯತ್ನಿಸುತ್ತೇನೆ " ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾಧನೆ ಮಾಡಿದ ಇತರೆ ಮಹಿಳೆಯರು
ಭಾರತದ ವ್ಯಾಪಾರ ಕ್ಷೇತ್ರದಲ್ಲಿ ಹೆಸುವಾಸಿಯಾದವರ ಮಹಿಳೆಯರ ಪೈಕಿ ವಾಣಿ ಕೋಲಾ ಕೂಡಾ ಒಬ್ಬರಾಗಿದ್ದಾರೆ. ವಾಣಿ ಕೋಲಾ ಅವರು ಬಹಳ ಜನಪ್ರಿಯ ವೆಂಚರ್ ಕ್ಯಾಪಿಟಲಿಸ್ಟ್ ಹಾಗೂ ಉದ್ಯಮಿಯಾಗಿದ್ದಾರೆ. ಅವರು ಬೆಂಗಳೂರು ಮೂಲದ ವೆಂಚರ್ ಕ್ಯಾಪಿಟಲಿಸ್ಟ್ ಸಂಸ್ಥೆಯಾದ ಕಲಾರಿ ಕ್ಯಾಪಿಟಲ್‌ನ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಪ್ರೇರಣಾ ಜುಂಜುನ್‌ವಾಲಾ 'ಕ್ರಿಯೇಟಿವ್ ಗೆಲಿಲಿಯೋ' ಹಾಗೂ 'ಲಿಟಲ್ ಸಿಂಗಮ್ - ಕಿಡ್ಸ್ ಅರ್ಲಿ ಲರ್ನ್' ಅಪ್ಲಿಕೇಶನ್ ನ ಸಂಸ್ಥಾಪಕರಾಗಿದ್ದು, ಸಿಂಗಾಪುರದಲ್ಲಿ ಪ್ರೀ - ಸ್ಕೂಲ್ ಹೊಂದಿದ್ದು ಅವರೊಬ್ಬ ಭಾರತೀಯ ಸೀರಿಯಲ್ ಎಂಟ್ರೆಪ್ರೆನಿಯರ್ ಆಗಿದ್ದಾರೆ. ಅವರ ಕ್ರಿಯೇಟಿವ್ ಗೆಲಿಲಿಯೋ ಅಪ್ಲಿಕೇಶನ್ ಮೂರರಿಂದ ಎಂಟು ವರ್ಷಗಳ ನಡುವಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ.


Click it and Unblock the Notifications