ಮೋಹಿತ್ ಅಹ್ಲುವಾಲಿಯಾ ಹಾಗೂ ಜಗಜ್ಯೋತ್ ಕೌರ್ ಅವರು 2017ರ ಚಳಿಗಾಲದಲ್ಲಿ ಬಾಲಿಗೆ ವಿಹಾರಕ್ಕಾಗಿ ಪ್ರವಾಸ ಹೋಗಿದ್ದರು. ಈ ದಂಪತಿಯು ಅಲ್ಲಿ ಕೇವಲ ಅಧ್ಭುತ ನೆನಪುಗಳನ್ನಷ್ಟೇ ಸೃಷ್ಟಿಸಲಿಲ್ಲ; ಜತೆಗೆ ಬಹುದೊಡ್ಡ ಕನಸು ಹಾಗೂ ಮಹತ್ವಾಕಾಂಕ್ಷೆಯೊಂದಿಗೆ ಮನೆಗೆ ವಾಪಾಸ್ಸಾಗಿದ್ದರು. ಈ ದಂಪತಿಯು ಹೆಚ್ಚಿನ ಸಂಬಳ ಪಡೆಯುತ್ತಿದ್ದ ಉದ್ಯೋಗವನ್ನು ತೊರೆದು ತಮ್ಮ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿದ್ದರು. ಮೋಹಿತ್ ಅಹ್ಲುವಾಲಿಯಾ ಅವರು ಸೇಲ್ಸ್ ವೃತ್ತಿಯಲ್ಲಿದ್ದು, ಜಗಜ್ಯೋತ್ ಕೌರ್ ಅವರು ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಚಂಡೀಘಡ ಮೂಲದ ಈ ದಂಪತಿಯು 2019ರಲ್ಲಿ ರಾಮೇ ಎಂಬ ಹೆಸರಿನ ಗೃಹ ಮತ್ತು ಲೈಫ್‌ಸ್ಟೈಲ್ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಇದು ಕ್ಯುಷನ್ ಕವರ್, ಟೋಟ್ ಬ್ಯಾಗ್‌ಗಳು, ಕ್ವಿಲ್ಟ್ ಹಾಗೂ ಪೌಚ್‌ಗಳನ್ನು ಒಳಗೊಂಡಂತೆ ತರಬೇತಿ ಪಡೆದ ಕುಶಲಕರ್ಮಿಗಳು ತಯಾರಿಸಿದ ಹ್ಯಾಂಡ್-ಬ್ಲಾಕ್ ಮುದ್ರಿತ ಸರಕುಗಳನ್ನು ಮಾರಾಟ ಮಾಡುತ್ತದೆ. ರಾಮೇ ಬಲಿನೀಸ್ ಮೂಲದ ಪದವಾಗಿದ್ದು, ಇದು ಬಲಿನೀಸ್ ಜನರ ಜೀವನ ಶೈಲಿಯಾಗಿದೆ. ಅಂದರೆ ಕಿಕ್ಕಿರಿದ ಹಾಗೂ ಅಸ್ತವ್ಯಸ್ತವಾಗಿರುವ ಜಗತ್ತಿನಲ್ಲಿ ಬದುಕುತ್ತಿದ್ದರೂ ಸಂತೋಷವನ್ನು ಕಂಡುಕೊಳ್ಳುತ್ತಾರೆ.

ಜಗಜ್ಯೋತ್ ಏನು ಹೇಳುತ್ತಾರೆ?
"ಕೆಲವು ವರ್ಷಗಳ ಹಿಂದೆ ನಾನು ಮಾಡಿದ ಬಾಲಿ ಪ್ರವಾಸವು ನನ್ನ ಜೀವನಕ್ಕೆ ಮಹತ್ವದ ತಿರುವನ್ನು ನೋಡಿದೆ. ಅಲ್ಲಿ ಬಲಿನೀಸ್ ಜನರು ತಯಾರಿಸುತ್ತಿದ್ದ ಗುಣಮಟ್ಟದ ಮತ್ತು ಕಲಾತ್ಮಕವಾದ ವಸ್ತುಗಳನ್ನು ನೋಡಿದಾಗ ಕೈಯಿಂದ ತಯಾರಿಸುವ ಉತ್ಪನ್ನಗಳಿಗಿರುವ ಮಾರುಕಟ್ಟೆಯನ್ನು ಗಮನಿಸಿದ್ದೆ. ವಿದೇಶಿಯರು ಮಾಡುತ್ತಿರಬೇಕಾದರೆ ಭಾರತೀಯ ಕೈಗಳಿಂದ ತಯಾರಿಸಿರುವ ಉತ್ಪನ್ನಗಳು ಯಾಕೆ ಜನಪ್ರಿಯತೆ ಗಳಿಸುತ್ತಿಲ್ಲ ಅಂದುಕೊಂಡು ಆಶ್ಚರ್ಯಪಟ್ಟಿದ್ದೆ" ಎಂದು shethepeople.tv ಗೆ ನೀಡಿದ್ದ ಸಂದರ್ಶನದಲ್ಲಿ ಜಗಜ್ಯೋತ್ ಹೇಳಿದ್ದರು.
"ಬಾಲಿ ಮಾರುಕಟ್ಟೆಯನ್ನು ಅನ್ವೇಷಿಸಿದಾಗ ಭಾರತ ನಿರ್ಮಿತ ಬ್ಲಾಕ್ ಪ್ರಿಂಟಿಂಗ್ ಫ್ಯಾಬ್ರಿಕ್ಸ್‌ಗಳು ಹೆಚ್ಚಿನ ಮೌಲ್ಯವರ್ಧನೆಯನ್ನು ಹೊಂದಿದೆ ಎಂಬುದನ್ನು ಮನವರಿಕೆಯಾಗಿತ್ತು. ಅದು ಕೇವಲ ಬೆಲೆಯಲ್ಲಿ ಮಾತ್ರವಲ್ಲ ಜತೆಗೆ ಗ್ರಾಹಕರ ಗೌರವ ಸಂಪಾದಿಸುವಲ್ಲಿಯೂ ಅತ್ಯುತ್ತಮವಾದದ್ದು" ಎಂದು ಮೋಹಿತ್ ದಿ ಬೆಟರ್ ಇಂಡಿಯಾಗೆ ತಿಳಿಸಿದ್ದರು. ಬಾಲಿ ಮಾದರಿಯ ಉತ್ಪನ್ನಗಳಿಗೆ ಭಾರತದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ. ಅದೇ ಬಾಲಿಯಲ್ಲಿ ಅವುಗಳಿಗೆ ಗಮನಾರ್ಹ ಬೇಡಿಕೆಯಿದೆ" ಎನ್ನುತ್ತಾರೆ ಅವರು.
ಬಾಲಿಯಿಂದ ಭಾರತಕ್ಕೆ ಮರಳಿದ್ದ ದಂಪತಿಯು ಕುಶಲಕರ್ಮಿಗಳ ಜೀವನೋಪಾಯವನ್ನು ಬೆಂಬಲಿಸಲು ಹಾಗೂ ಬ್ಲಾಕ್ ಪ್ರಿಂಟಿಂಗ್ ಕಲೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿದರು. ಅದರಂತೆ ಸುಮಾರು ಹತ್ತು ವರ್ಷಗಳ ಕಾರ್ಪೊರೇಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಮೂಲಕ 2019ರಲ್ಲಿ ರಾಮೇ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸ್ತುತ ಅವರು ಕ್ವಿಲ್ಟ್, ಪೋಚ್‌ಗಳು, ಪರ್ಸ್ ಹಾಗೂ ಪಿಲ್ಲೋ ಕವರ್ ಸೇರಿದಂತೆ ಸುಮಾರು 60 ಬಗೆಯ ಉತ್ಪನ್ನಗಳನ್ನು ಭಾರತ ಹಾಗೂ ಹೊರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಸ್ಥಳೀಯ ಕಲಾವಿದರೊಂದಿಗೆ 2018ರಲ್ಲಿ ಈ ದಂಪತಿಯು ಜೈಪುರದಲ್ಲಿ ನಡೆದ ಬ್ಲಾಕ್ ಪ್ರಿಂಟಿಂಗ್ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದರು. ಅದಾದ ಮೂರು ತಿಂಗಳ ಬಳಿಕ ಕ್ವಿಲ್ಟ್ ಹಾಗೂ ಪಿಲ್ಲೋಗಳ ಪ್ರದರ್ಶನವನ್ನು ದಿಲ್ಲಿಯಲ್ಲಿ ಆಯೋಜಿಸಿದ್ದರು. ಆರಂಭದಲ್ಲಿ ಕಲರ್ ಮತ್ತು ಪ್ಯಾಟರ್ನ್‌ಗಳ ಬಗ್ಗೆ ಕಲಾವಿದರ ಜತೆಗೆ ಚರ್ಚಿಸುತ್ತಿದ್ದರು. ಹೆಚ್ಚಿನವರು ಸಾಂಪ್ರದಾಯಿಕ ಹೋಮ್ ಡಿಸೈನ್ ಅನ್ನು ಇಷ್ಟಪಡುತ್ತಿದ್ದರು. ಹೀಗಾಗಿ, ಸಮಕಾಲೀನ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಾ ಹೋದರು.
4 ಲಕ್ಷ ರೂಪಾಯಿಯೊಂದಿಗೆ ಪ್ರಾರಂಭಿಸಿದ ಕಂಪನಿಯು ಈಗ ಪ್ರತಿ ತಿಂಗಳು 18 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಅಂದರೆ ವಾರ್ಷಿಕ ಸುಮಾರು 2.16 ಕೋಟಿ ರೂಪಾಯಿ ವಹಿವಾಟು ನಡೆಸುತ್ತಾರೆ. ರಾಜಸ್ಥಾನ್, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಮೈಸೂರು, ಗೋವಾ, ಕೇರಳ, ಇಂಫಾಲ್, ಅಸ್ಸಾಂ ಹಾಗೂ ಮಿಜೋರಾಂ ಅವರ ಉತ್ಪನ್ನಗಳ ಮಾರಾಟದ ಪ್ರಮುಖ ಸ್ಥಳಗಳಾಗಿವೆ. ಯುಎಇ ಹಾಗೂ ಅಮೆರಿಕಾದಲ್ಲಿಯೂ ಗ್ರಾಹಕರನ್ನು ಹೊಂದಿದ್ದಾರೆ.


Click it and Unblock the Notifications