ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಎರಡು ದಶಕಗಳೇ ಕಳೆದಿವೆ. ಈ ಅವಧಿಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 42 ಪಟ್ಟು ಮತ್ತು ಲಾಭದ ಪ್ರಮಾಣವು ಸುಮಾರು 20 ಪಟ್ಟು ಹೆಚ್ಚಾಗಿದೆ. ಹಾಗಿದ್ರೆ ಈ ರಿಲಯನ್ಸ್ ಸಂಸ್ಥೆಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವವರು ಮುಕೇಶ್ ಅಂಬಾನಿ ಆಗಿರಬಹುದು ಅಂದುಕೊಂಡರೆ ನಿಮ್ಮ ಊಹೆ ತಪ್ಪು.!
ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಲ್ಲ.! ಅವರ ಬದಲಾಗಿ ಮುಖೇಶ್ ಅಂಬಾನಿ ಅವರ ಸೋದರ ಸಂಬಂಧಿಗಳಾದ ನಿಖಿಲ್ ಮೆಸ್ವಾನಿ ಮತ್ತು ಹಿತಲ್ ಮೆಸ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಗಳಾಗಿದ್ದಾರೆ.

ನಿಖಿಲ್ ಮೆಸ್ವಾನಿ ಮತ್ತು ಹಿತಲ್ ಮೆಸ್ವಾನಿ ಇವರಿಬ್ಬರು ರಸಿಖ್ ಲಾಲ್ ಮೆಸ್ವಾನಿ ಅವರ ಪುತ್ರರಾಗಿದ್ದಾರೆ. ಇನ್ನು ರಸಿಖ್ ಲಾಲ್ ಮೆಸ್ವಾನಿ ಇವರು ಧೀರೂಭಾಯಿ ಅಂಬಾನಿ ಅವರ ಹಿರಿಯ ಸಹೋದರಿ ಮತ್ತು ರಿಲಯನ್ಸ್ನ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದ ತ್ರಿಲೋಚನಾ ಬೆನ್ ಅವರ ಪುತ್ರರಾಗಿದ್ದಾರೆ.
ಇಬ್ಬರ ಆದಾಯ, ಸಂಭಾವನೆ ಎಷ್ಟಿದೆ?
ವರದಿಗಳ ಪ್ರಕಾರ, 2023 ರ ಆರ್ಥಿಕ ವರ್ಷದಲ್ಲಿ ನಿಖಿಲ್ ಮತ್ತು ಹಿತಾಲ್ ಮೆಸ್ವಾನಿ ತಲಾ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದಲ್ಲದೇ ರಿಲಯನ್ಸ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಸಿಟ್ಟಿಂಗ್ ಶುಲ್ಕವಾಗಿ ರೂ 6 ಲಕ್ಷ (2021-22 ರಲ್ಲಿ 5 ಲಕ್ಷ ರೂಪಾಯಿ) ಮತ್ತು 2022-23ಕ್ಕೆ 2 ಕೋಟಿ ರೂಪಾಯಿ ಕಮಿಷನ್ ಗಳಿಸಿದ್ದಾರೆ.
ನಿಖಿಲ್ ಮೆಸ್ವಾನಿ ಕೆಮಿಕಲ್ ಇಂಜಿನಿಯರ್ ಆಗಿದ್ದು ಇವರು 1986 ರಲ್ಲಿ ರಿಲಯನ್ಸ್‌ಗೆ ಸಂಸ್ಥೆಗೆ ಸೇರ್ಪಡೆಗೊಂಡರು. ಇದಾದ ಬಳಿಕ 1988 ರ ಜುಲೈ 1 ರಂದು, ನಿಖಿಲ್ ಮೆಸ್ವಾನಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡು, ಕಂಪನಿಯ ಮಂಡಳಿಯಲ್ಲಿ ಫುಲ್ ಟೈಮ್ ನಿರ್ದೇಶಕರಾದರು.
ಪೆಟ್ರೋಕೆಮಿಕಲ್ಸ್‌ನಲ್ಲಿ ರಿಲಯನ್ಸ್ ವಿಶ್ವಕ್ಕೆ ನಾಯಕನಾಗಲು ಸಹಾಯ ಮಾಡಿದ ಕ್ರೆಡಿಟ್ ನಿಖಿಲ್ ಮೆಸ್ವಾನಿ ಅವರಿಗೆ ಸಲ್ಲುತ್ತದೆ. ರಿಲಯನ್ಸ್‌ನ ರಿಫೈನರಿ ವ್ಯವಹಾರವನ್ನು ನಿರ್ವಹಿಸುವುದರ ಜೊತೆಗೆ, ನಿಖಿಲ್ ಮೆಸ್ವಾನಿ ಕಾರ್ಪೊರೇಟ್ ವ್ಯವಹಾರಗಳು ಮತ್ತುಗ್ರೂಪ್ ಟ್ಯಾಕ್ಸೇಷನ್ ಸಹ ನೋಡಿಕೊಳ್ಳುತ್ತಾರೆ. ಇದಲ್ಲದೇ ರಿಲಯನ್ಸ್ ಒಡೆತನದ ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ನಿರ್ವಹಣೆಯಲ್ಲಿ ಅವರು ನೀತಾ ಅಂಬಾನಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.
ಇನ್ನು ಹಿತಲ್ ಮೆಸ್ವಾನಿ ಅವರ ಬಗ್ಗೆ ಗಮನಿಸುವುದಾದರೆ, ಅವರು ಯುಎಸ್‌ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ (UPenn) ದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. UPennನ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು ಮತ್ತು ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.
ಹಿತಲ್ ಮೆಸ್ವಾನಿ ಅವರು 1990 ರಿಂದ ರಿಲಯನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪುಲ್ ಟೈಮ್ ನಿರ್ದೇಶಕರಾಗಿ ಕಂಪನಿಯ ಮಂಡಳಿಯಲ್ಲಿದ್ದಾರೆ. ರಿಲಯನ್ಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ 2022-23 ರ ಹಣಕಾಸು ವರ್ಷದಲ್ಲಿ ಮುಖೇಶ್ ಅಂಬಾನಿಯವರ ಸಂಭಾವನೆ "ಶೂನ್ಯ" (nil) ಎಂದು ಹೇಳಿದೆ.
2008-09 ರ ಹಣಕಾಸು ವರ್ಷದಿಂದ (ಏಪ್ರಿಲ್ 2008 ರಿಂದ ಮಾರ್ಚ್ 2009) ಆರ್ಥಿಕ ವರ್ಷದಲ್ಲಿ 2020 ವರೆಗೆ ತಮ್ಮ ವಾರ್ಷಿಕ ಸಂಭಾವನೆಯನ್ನು 15 ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಿದ ಮುಕೇಶ್ ಅಂಬಾನಿ 21 ಆರ್ಥಿಕ ವರ್ಷದಿಂದ ಸತತವಾಗಿ ಮೂರು ವರ್ಷಗಳವರೆಗೆ ಯಾವುದೇ ಸಂಬಳವನ್ನು ಪಡೆದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆರ್ಥಿಕ ವರ್ಷ 2021ರಲ್ಲಿ, ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಮುಖೇಶ್ ಅಂಬಾನಿ ತಮ್ಮ ಸಂಬಳವನ್ನು ಪಡೆಯದಿರಲು ನಿರ್ಧರಿಸಿದ್ದರು.


Click it and Unblock the Notifications