ಭಾರತದ ವಾಣಿಜ್ಯ ನಗರಿ ಮುಂಬೈಯು ಇತ್ತೀಚೆಗೆ ದೇಶದಲ್ಲೇ ಅತ್ಯಂತ ದೊಡ್ಡ ವ್ಯವಹಾರದ ರಿಯಲ್ ಎಸ್ಟೇಟ್ ಡೀಲ್‌ಗೆ ಸಾಕ್ಷಿಯಾಗಿದೆ. ಆ ಮೂಲಕ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ದುಬಾರಿ ಆಸ್ತಿ ವ್ಯವಹಾರ ನಡೆಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.
ವಾಡಿಯಾ ಬಿಸಿನೆಸ್ ಗ್ರೂಪ್‌ಗೆ ಸೇರಿದ ನುಸ್ಲಿ ವಾಡಿಯಾ ಅವರು ತಮ್ಮ ಗ್ರೂಪ್‌ಗೆ ಸೇರಿದ ಬಾಂಬೆ ಡೈಯಿಂಗ್ ಕಂಪನಿಯ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಈ ಆಸ್ತಿ ಪರಭಾರೆ ಡೀಲ್ ಮೊತ್ತ ಸುಮಾರು 5200 ಕೋಟಿ ರೂ. ಆಗಿರುವುದಾಗಿ ಅಂದಾಜಿಸಲಾಗಿದೆ.

ಒಂದು ಕಾಲದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಬಾಂಬೆ ಡೈಯಿಂಗ್ ಬ್ರಾಂಡ್ ಜವಳಿ ಕ್ಷೇತ್ರದಲ್ಲಿ ಇತ್ತೀಚೆಗೆ ಬಂದ ಟ್ರೆಡೆಂಟ್, ವೆಲ್ಸ್ಪುನ್ ಹಾಗೂ ಇಂಡೋ ಕೌಂಟ್‌ನಂಥ ಬ್ರಾಂಡ್‌ಗಳ ಮುಂದೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ ಬ್ರಾಂಡ್ ಅನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಈ ಡೀಲ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಫೋರ್ಬ್ಸ್ ವರದಿ ಮಾಡಿರುವ ಪ್ರಕಾರ, ಬಾಂಬೆ ಡೈಯಿಂಗ್ ಮೇಲಿನ ಸಾಲವನ್ನು ಪೂರ್ಣಗೊಳಿಸಿ ಕಂಪನಿಯನ್ನು ಲಾಭದತ್ತ ಮುನ್ನಡೆಸುವ ದೃಷ್ಟಿಯಿಂದ ವಾಡಿಯಾ ಅವರು ವರೋಲಿಯಲ್ಲಿರುವ ಅದರ ಆಸ್ತಿಯನ್ನು ಮಾರಾಟ ಮಾಡಿದೆ.
ವಾಡಿಯಾ ಗ್ರೂಪ್ ಪ್ರಸ್ತುತ ಮುನ್ನಡೆಸುತ್ತಿರುವ ಬ್ರಿಟಾನಿಯಾ ಕಂಪನಿಯು ಎಫ್‌ಎಂಸಿಜಿ ವಲಯದಲ್ಲಿ ದೈತ್ಯ ಉದ್ಯಮವಾಗಿ ನಿರೀಕ್ಷೆಗೆ ತಕ್ಕಂತೆ ಲಾಭದಾಯವಾಗಿ ನಡೆಯುತ್ತಿವೆ. ಬಾಂಬೆ ಬರ್ಮಾ, ಗೋ ಏರ್ ಹಾಗೂ ನ್ಯಾಷನಲ್ ಪೆರೊಕ್ಸೈಡ್ ವಾಡಿಯಾ ಒಡೆತನದ ಇತರೆ ಕಂಪನಿಗಳು. ನುಸ್ಲಿ ಅವರ ಮಗ ನೆಸ್ ಇತ್ತೀಚೆಗೆ ಪ್ರಾರಂಭಿಸಿದ ಗೋ ಏರ್ ವಿಮಾನಯಾನ ಸೇವೆಯು ಇತ್ತೀಚೆಗೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ವಿಶ್ಲೇಷಕರು ಹೇಳುವ ಪ್ರಕಾರ, ಜವಳಿ ಕ್ಷೇತ್ರದ ಈ ದೈತ್ಯ ಕಂಪನಿಯು ರಿಯಲ್ ಎಸ್ಟೇಟ್ ಕಂಪನಿಯಾಗಿ ಪರಿವರ್ತನೆಯಾದರೂ ಅಚ್ಚರಿಯಿಲ್ಲ. ಈ ಕಂಪನಿಯು ಭವಿಷ್ಯದಲ್ಲಿ 15000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಆಫ್‌ಲೋಡ್ ಮಾಡುವ ನಿರೀಕ್ಷೆಯನ್ನು ಹೊಂದಿದೆ.
ಈ ಬಹುದೊಡ್ಡ ಭೂ ಪರಭಾರೆ ಪ್ರಕಾರ ಬಾಂಬೆ ಡೈಯಿಂಗ್‌ನ 22 ಎಕರೆ ಜಾಗವನ್ನು 5200 ಕೋಟಿ ರೂ.ಗೆ ಗೂಸ್ ರಿಯಾಲಿಟಿ ಪ್ರೈವೆಟ್ ಲಿಮಿಟೆಡ್‌ಗೆ ಮಾರಾಟ ಮಾಡಲಾಗಿದೆ. ಅದರಲ್ಲಿ 4675 ರೂಪಾಯಿಯನ್ನು ತತ್‌ಕ್ಷಣಕ್ಕೆ ಹಾಗೂ ಉಳಿದ 525 ಕೋಟಿ ರೂಪಾಯಿಯನ್ನು ಕೆಲವೊಂದು ಮಾನದಂಡಗಳ ಆಧಾರದಲ್ಲಿ ಪಾವತಿಸಲಾಗುತ್ತದೆ.
ಈ ಡೀಲ್ ಬಾಂಬೈ ಡೈಯಿಂಗ್ ಒಮ್ಮೆಲೇ 4300 ಕೋಟಿ ರೂಪಾಯಿ ಪೂರ್ವ-ತೆರಿಗೆ ಲಾಭವನ್ನು ಗಳಿಸುವುದಕ್ಕೆ ಅನುವು ಮಾಡಿಕೊಡಲಿದೆ. ಇದು ಕಂಪನಿಯ ಬ್ಯಾಲೆನ್ಸ್‌ಶೀಟ್‌ನ್ನು ಆರ್ಥಿಕವಾಗಿ ಸದೃಢಗೊಳಿಸಲಿದೆ. ಫೋರ್ಬ್ಸ್ ಪ್ರಕಾರ, 79 ವರ್ಷದ ನುಸ್ಲಿ ವಾಡಿಯಾ ಅವರು ಪ್ರಸ್ತುತ 4.1 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.


Click it and Unblock the Notifications