ಬಡ ಕುಟುಂಬದ ಹಿನ್ನಲೆಯ ವ್ಯಕ್ತಿಯೊಬ್ಬ ಭಾರತದಲ್ಲಿ ಹೋಟೆಲ್ ಉದ್ಯಮದ ಸಾಮ್ರಾಜ್ಯ ಸ್ಥಾಪಿಸಿ, ಈ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಕಥೆ ಇದು. ಮೋಹನ್ ಸಿಂಗ್ ಒಬೆರಾಯ್ ಪಾಕಿಸ್ತಾನದ ಪಂಜಾಬ್‌ನ ಝೇಲಂ ಜಿಲ್ಲೆಯ (ಈಗ ಚಕ್ವಾಲ್ ಜಿಲ್ಲೆ) ಸಣ್ಣ ಹಳ್ಳಿಯಾದ ಭೌನ್‌ನಲ್ಲಿ ನೆಲೆಸಿದ್ದ ಕುಟುಂಬವೊಂದರಲ್ಲಿ ಜನಿಸಿದರು. ಮೋಹನ್ ಸಿಂಗ್ ಒಬೆರಾಯ್ ಅವರು ಆರು ತಿಂಗಳ ಮಗುವಿದ್ದಾಗ ಅವರ ತಂದೆ ಮೃತಪಟ್ಟಿದ್ದು ಹೀಗಾಗಿ ಅಪ್ಪನ ಪ್ರೀತಿಯನ್ನೇ ಕಾಣದಾದರು.
ತಾಯಿ ಸಂಸಾರದ ನೊಗ ಹೊರಬೇಕಾಗಿತ್ತು. ಮೋಹನ್ ಸಿಂಗ್ ಅವರು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಶಾಲಾ ಶಿಕ್ಷಣ ಪಡೆದು ಲಾಹೋರ್ ನಲ್ಲಿ ಇಂಟರ್ಮೀಡಿಯೇಟ್ ಕಾಲೇಜು ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆರ್ಥಿಕ ಮುಗ್ಗಟ್ಟಿನಿಂದ ಮುಂದಕ್ಕೆ ಓದಲು ಸಾಧ್ಯವಾಗದೇ ಲಾಹೋರ್‌ನಲ್ಲಿ ಅವರ ಚಿಕ್ಕಪ್ಪನ ನಡೆಸುತ್ತಿದ್ದ ಶೂ ಉದ್ಯಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಅಮೃತಸರದಲ್ಲಿ ನಡೆದ ಗಲಭೆಯಿಂದಾಗಿ ಒಂದು ವರ್ಷದ ನಂತರ ಅವರು ಕೆಲಸ ಮಾಡುತ್ತಿದ್ದ ಕಾರ್ಖಾನೆಯನ್ನು ಮುಚ್ಚಬೇಕಾಗಿ ಬಂತು. ಮೋಹನ್ ಸಿಂಗ್ ಒಬೆರಾಯ್ ತಮ್ಮದೇ ಗ್ರಾಮದ ಉಷ್ನಾಕ್ ರೈ ಎಂಬವರ ಮಗಳು ಇಶ್ರಾನ್ ದೇವಿಯನ್ನು 1920ರಲ್ಲಿ ವಿವಾಹವಾದರು. ಮದುವೆಯ ನಂತರ ಕುಟುಂಬದ ಪಾಲನೆಗಾಗಿ ಕೆಲಸ ಅರಸುತ್ತಾ ಈಗಿನ ಪಾಕಿಸ್ತಾನದ ಸರ್ಗೋಧಾಗೆ ಸ್ಥಳಾಂತರಗೊಂಡರು.
ಆದರೆ ಅವರಿಗೆ ಯಾವುದೇ ಸಮರ್ಪಕವಾದ ಕೆಲಸ ಸಿಗದೆ ಮತ್ತೆ ಖಾಲಿ ಕೈಯಲ್ಲಿ ತಮ್ಮ ಹಳ್ಳಿಗೆ ಮರಳಿ ತಾಯಿ ಜೊತೆಗೆ ಅಲ್ಲೇ ನೆಲೆಸುವ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಅವರ ತಾಯಿ ಮರಳಿ ಅತ್ತೆಯ ಊರಿಗೆ ತೆರಳಿ ಉದ್ಯೋಗ ಹುಡುಕುವಂತೆ ತಿಳಿಸಿ 25 ರೂಪಾಯಿ ನೀಡುತ್ತಾರೆ. 1934 ರಲ್ಲಿ, ಮೋಹನ್ ಸಿಂಗ್ ಒಬೆರಾಯ್ ಅವರು ತಮ್ಮ ಎಲ್ಲಾ ಆಸ್ತಿಯ ಜೊತೆಗೆ ಅವರ ಪತ್ನಿಯ ಆಭರಣಗಳನ್ನು ಅಡಮಾನವಿಟ್ಟು, ಅವರ ಮೊತ್ತ ಮೊದಲ ಆಸ್ತಿಯಾದ ದಿ ಕ್ಲಾರ್ಕ್ಸ್ ಹೋಟೆಲ್ ಅನ್ನು ತಮ್ಮ ಮಾರ್ಗದರ್ಶಕರಿಂದಲೇ ಖರೀದಿಸುತ್ತಾರೆ.
ಮುಂದೆ ಕೇವಲ 5 ವರ್ಷಗಳಲ್ಲಿ ದೃಢ ಸಂಕಲ್ಪದ ದುಡಿಮೆಯಿಂದ ಈ ಎಲ್ಲ ಸಾಲಗಳಿಂದ ಮುಕ್ತರಾಗುವಲ್ಲಿ ಯಶಸ್ವಿಯಾಗುತ್ತಾರೆ. ಇದರೊಂದಿಗೆ ಅಂದು ಭೀಕರವಾಗಿ ಕಾಡಿದ್ದ ಕಾಲರಾ ಸಾಂಕ್ರಾಮಿಕದಿಂದ ಮಾರಾಟಕ್ಕೆ ಇಡಲಾದ ಕಲ್ಕತ್ತಾದಲ್ಲಿ 500 ಕೋಣೆಗಳ ಗ್ರ್ಯಾಂಡ್ ಹೋಟೆಲ್ ಅನ್ನು ಲೀಸ್ ಗೆ ನಿರ್ವಹಿಸಲು ಒಪ್ಪಿಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಅವರು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗುತ್ತಾರೆ.
ಅವರು ಹೋಟೆಲ್ ಅನ್ನು ಕಮರ್ಷಿಯಲ್ ಸಕ್ಸಸ್ ಕಡೆ ಟರ್ನ್ ಮಾಡಿ ಒಬೆರಾಯ್ ಹೋಟೆಲ್ಸ್ ಹಾಗೂ ರೆಸಾರ್ಟ್ಸ್ ಮತ್ತು ಟ್ರಿಡೆಂಟ್ ಬ್ರ್ಯಾಂಡ್ ಗಳಡಿಯಲ್ಲಿ ಮುಂದೆ ಭಾರತದ ಎರಡನೇ ಅತಿದೊಡ್ಡ ಹೋಟೆಲ್ ಸಮೂಹವನ್ನು ರಚಿಸಿದರು. ಪ್ರಸ್ತುತ ಜಗತ್ತಿನಾದ್ಯಂತ ಈ ಸಂಸ್ಥೆಯಲ್ಲಿ 12,000ಕ್ಕೂ ಅಧಿಕ ಉದ್ಯೋಗಿಗಳಿದ್ದು, ಐದು ದೇಶಗಳಲ್ಲಿ 31 ಐಷಾರಾಮಿ ಹೋಟೆಲ್‌ಗಳು ಮತ್ತು ಐಷಾರಾಮಿ ಕ್ರೂಸ್ ಹಡಗುಗಳನ್ನು ಹೊಂದಿದೆ.
ಬ್ರಿಟಿಷ್ ಸರ್ಕಾರವು ಒಬೆರಾಯ್ ಅವರ ಸಾಧನೆಯನ್ನು ಗುರುತಿಸಿ 1943 ರಲ್ಲಿ "ರಾಯ್ ಬಹದ್ದೂರ್" ಎಂಬ ಬಿರುದನ್ನು ನೀಡಿ ಗೌರವಿಸಿತು. ಭಾರತ ಸರ್ಕಾರ 2001 ರಲ್ಲಿ ಅವರು ಪದ್ಮಭೂಷಣ ನೀಡಿ ಗೌರವಿಸಿತು. ಭಾರತ ಹೊಟೇಲ್ ಉದ್ಯಮದ ಪಿತಾಮಹಾ ಎಂದು ಕರೆಯಲ್ಪಡುವ ಮೋಹನ್ ಸಿಂಗ್ ಒಬೆರಾಯ್ 2002ರ ಮೇ 3 ರಂದು 103 ನೇ ವಯಸ್ಸಿನಲ್ಲಿ ನಿಧನರಾದರು.


Click it and Unblock the Notifications