2003ರಲ್ಲಿ ನಾಡಿಯಾ ಚೌಹಾಣ್ ತನ್ನ ತಂದೆಯ ಸಂಸ್ಥೆಯಾದ ಪಾರ್ಲೆ ಆಗ್ರೋಗೆ ಸೇರಿದಾಗ ಕಂಪನಿಯ ಆದಾಯ ಕೇವಲ 300 ಕೋಟಿ ರೂಪಾಯಿ ಇತ್ತು. 2017ರಲ್ಲಿ ಕಂಪನಿಯು 4200 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿದೆ. ಬಿಟಿ ಪ್ರಕಾರ, 2022-2023ರಲ್ಲಿ ಕಂಪನಿಯ ಸೇಲ್ಸ್ 8000 ಕೋಟಿ ರೂಪಾಯಿ ಆಗಿದೆ. ಮಾಲೀಕರಾದ ಪ್ರಕಾಶ್ ಚೌಹಾಣ್ ಅವರ ಪುತ್ರಿ ನಾಡಿಯಾ ಚೌಹಾಣ್ ಅವರು ಕಂಪನಿಯ ವಹಿವಾಟನ್ನು ವಿಸ್ತರಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಪಾರ್ಲೆ ಗ್ರೂಪ್ ಅನ್ನು 1929ರಲ್ಲಿ ಮೋಹನ್ ಲಾಲ್ ಚೌಹಾಣ್ ಅವರು ಸ್ಥಾಪಿಸಿದ್ದಾರೆ. ಅವರು ನಾಡಿಯಾ ಚೌಹಾಣ್ ಅವರ ಮುತ್ತಜ್ಜರಾಗಿದ್ದಾರೆ. 1959ರಲ್ಲಿ ಮೋಹನ್‌ಲಾಲ್ ಅವರ ಕಿರಿಯ ಪುತ್ರ ಜಯಂತಿಲಾಲ್ ಅವರು ಪಾನೀಯ ವ್ಯಾಪಾರವನ್ನು ಪ್ರಾರಂಭಿಸಿದ್ದರು. ಥಮ್ಸ್ ಅಪ್, ಲಿಮ್ಕಾ, ಗೋಲ್ಡ್ ಸ್ಪಾಟ್, ಸಿಟ್ರಾ ಮತ್ತು ಮಾಜಾದಂಥಹ ಬ್ರಾಂಡ್‌ಗಳನ್ನು ಹೊಂದಿದ್ದ ಕಂಪನಿಯನ್ನು ರಮೇಶ್ ಚೌಹಾಣ್ ಮತ್ತು ಪ್ರಕಾಶ್ ಚೌಹಾಣ್ ಅವರಿಗೆ ವರ್ಗಾಯಿಸಲಾಯಿತು.

ಪಾರ್ಲೆ ಗ್ರೂಪ್ ಈ ಬ್ರಾಂಡ್‌ಗಳನ್ನು 1990ರ ದಶಕದಲ್ಲಿ ಕೋಕೊ-ಕೋಲಾಗೆ ಮಾರಾಟ ಮಾಡಿತ್ತು. ನಂತರ ಇಬ್ಬರು ಸಹೋದರರು ತಮ್ಮ ವ್ಯವಹಾರವನ್ನು ವಿಭಜಿಸಿಕೊಂಡರು. ಜಯಂತಿ ಚೌಹಾಣ್ ಅವರ ತಂದೆ ರಮೇಶ್ ಚೌಹಾಣ್ ಅವರು ಬಿಸ್ಲೇರಿ ಬ್ರಾಂಡ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ನಾಡಿಯಾ ಚೌಹಾಣ್ ಅವರು ಪ್ರಕಾಶ್ ಚೌಹಾಣ್ ಅವರ ನಿಯಂತ್ರಣದಲ್ಲಿರುವ ಪಾರ್ಲೆ ಆಗ್ರೋ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆಕೆಯ ಅಕ್ಕ ಶೌನಾ ಚೌಹಾಣ್ ಕಂಪನಿಯ ಸಿಇಒ ಆಗಿದ್ದಾರೆ.
ಫೋರ್ಬ್ಸ್ ಪ್ರಕಾರ, ನಾಡಿಯಾ ಅವರನ್ನು ಚಿಕ್ಕ ವಯಸ್ಸಿನಿಂದಲೇ ತಮ್ಮ ತಂದೆಯು ಬಿಸಿನೆಸ್ ಬಗ್ಗೆ ಮಾರ್ಗದರ್ಶನ ನೀಡಿ ಬೆಳೆಸಿದ್ದರು. ನಾಡಿಯಾ ತಮ್ಮ ಶಾಲೆ ಮುಗಿಸಿದ ನಂತರದ ಸಮಯವನ್ನು ಕಂಪನಿಯ ಮುಂಬೈಯ ಪ್ರಧಾನ ಕಚೇರಿಯಲ್ಲಿ ಕಳೆಯುತ್ತಿದ್ದರು. ಕಂಪನಿಯು 1985ರಲ್ಲಿ ಪ್ರಾರಂಭವಾಗಿದ್ದು, ಅದೇ ವರ್ಷ ನಾಡಿಯಾ ಜನಿಸಿದ್ದರು. ಪ್ರಕಾಶ್ ಅವರು ಸ್ವೀಡಿಷ್ ಕಂಪನಿಯ ಉತ್ಪನ್ನವಾದ ಟೆಟ್ರಾ ಪ್ಯಾಕ್‌ನಲ್ಲಿ ನೀಡಲಾದ ಮ್ಯಾಂಗೋ ಜ್ಯೂಸ್ ಅನ್ನು ಬಿಡುಗಡೆ ಮಾಡಿದರು.
ನಾಡಿಯಾ ಅವರು 2003ರಲ್ಲಿ ಕಂಪನಿಗೆ ಸೇರಿದಾಗ ಕೇವಲ 17 ವರ್ಷ ವಯಸ್ಸಾಗಿತ್ತು. ಕಂಪನಿಯ ಶೇಕಡ 95 ರಷ್ಟು ಆದಾಯವು ಒಂದೇ ಉತ್ಪನ್ನವಾದ ಫ್ರೂಟಿಯಿಂದ ಬಂದಿರುವುದನ್ನು ಗಮನಿಸಿದರು. ನಂತರ ಅದನ್ನು ಬದಲಾಯಿಸುವುದಕ್ಕೆ ಯೋಜನೆ ರೂಪಿಸಿದರು. 2005ರಲ್ಲಿ ನಾಡಿಯಾ ಅವರು ಆಪ್ಪಿ ಫೀಝ್ ಅನ್ನು ಪ್ರಾರಂಭಿಸಿದರು. ಅದು ಸಾಕಷ್ಟು ಯಶಸ್ಸನ್ನು ಗಳಿಸಿತ್ತು. ಜತೆಗೆ ಹೊಸ ಉತ್ಪನ್ನವನ್ನು ಆರಂಭಿಸುವುದಕ್ಕೂ ಅವರು ಕಂಪನಿಗೆ ನೆರವಾದರು. ನಂತರದಲ್ಲಿ ಅವರು ಭಾರತದ ಮೊದಲ ಪ್ಯಾಕ್ಡ್ ನಿಂಬೂ ಪಾನಿಯನ್ನು ಲಾಂಚ್ ಮಾಡಿದರು.
ನಾಡಿಯಾ ಹಾಗೂ ಶೌನಾ ಅವರು ಹಲವಾರು ಹೊಸ ಉತ್ಪನ್ನ ತಯಾರಿಕಾ ಘಟಕಗಳನ್ನು ಸ್ಥಾಪಿಸಿದರು. 2015ರಲ್ಲಿ ನಾಡಿಯಾ ಚೌಹಾಣ್ ಅವರು ಫ್ರೂಟಿಯನ್ನು ರೀಲಾಂಚ್ ಮಾಡಿದ್ದು, ಅದು ಫಲ ನೀಡಿತ್ತು.
ಇಂಡಿಯಾ ಟುಡೆ ಪ್ರಕಾರ, ಬಿಸಿನೆಸ್‌ಗೆ ಫ್ರೂಟಿಯ ಕೊಡುಗೆಯು ಶೇಕಡ 48ಕ್ಕೆ ಇಳಿಕೆಯಾಯಿತು. ಕಂಪನಿಯ ಪ್ಯಾಕ್ಡ್ ನೀರು Bailey ವಹಿವಾಟು 1000 ಕೋಟಿ ರೂಪಾಯಿಗೆ ತಲುಪಿತು.
2030ರ ವೇಳೆಗೆ ಕಂಪನಿಯನ್ನು 20000 ಕೋಟಿಯ ಬ್ರಾಂಡ್ ಮಾಡುವ ಗುರಿಯನ್ನು ನಾಡಿಯಾ ಹೊಂದಿದ್ದಾರೆ. 37 ವರ್ಷದ ನಾಡಿಯಾ ಅವರು ಕಂಪನಿಯ ಸೇಲ್ಸ್, ಮಾರ್ಕೆಟಿಂಗ್ ಹಾಗೂ ಆರ್ & ಡಿ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ನಾಡಿಯಾ ಅವರು ತಮ್ಮ ಪದವಿಯನ್ನು ಎಚ್‌ಆರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಿಂದ ಪಡೆದುಕೊಂಡಿದ್ದಾರೆ.


Click it and Unblock the Notifications