ಒಂದು ಕಾಲದಲ್ಲಿ ಮಗುವಿಗೆ ಹಾಲು ಕೊಂಡುಕೊಳ್ಳಲು 14 ರೂಪಾಯಿ ಹೊಂದಿಸಲು ಸಾಧ್ಯವಾಗದ, ಆದರೆ ಇಂದು 800 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿರುವ ವ್ಯಕ್ತಿಯ ಕಥೆ ಇದು. ಬದುಕೆಂಬ ಪಯಣದಲ್ಲಿ ಎದುರಾಗುವ ಸಂಕಷ್ಟ, ವೈಫಲ್ಯಗಳನ್ನು ಮೆಟ್ಟಿ ನಿಂತು ಸತತ ಪ್ರಯತ್ನ, ತಾಳ್ಮೆ, ಪರಿಶ್ರಮ ಜಾಣ್ಮೆ ಮತ್ತುಇಚ್ಚಾಶಕ್ತಿಯಿಂದ ಬಡತನದಿಂದ ಶ್ರೀಮಂತಿಕೆಗೆ ಏರಬಹುದು ಎಂಬುವುದಕ್ಕೆ ಉದಾಹರಣೆ ಈ ವ್ಯಕ್ತಿ.
ವಿಜಯ್ ಕೇಡಿಯಾ ಸರಕು ಸಾಮಾಗ್ರಿ ಮಾರಾಟ ಮಾಡುವ ವ್ಯಾಪಾರಿಯಲ್ಲ, ಯಶಸ್ವಿ ಉದ್ಯಮಿಯಲ್ಲ ಅಥವಾ ಪ್ರತಿಷ್ಟಿತ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲೂ ಇಲ್ಲ. ಐಐಟಿ ಅಥವಾ ಐಐಎಂನಿಂದ ಯಾವುದೇ ಫ್ಯಾನ್ಸಿ ಪದವಿ ಪಡೆದವರಲ್ಲ. ಆದರೆ ತಮ್ಮ ಜಾಣ್ಮೆ ಮತ್ತು ಜೀವನದಲ್ಲಿ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚಾಶಕ್ತಿಯಿಂದ ಏಳುಬೀಳುಗಳ ನಡುವೆ ಹಂತಹಂತವಾಗಿ ಶ್ರೀಮಂತಿಕೆಯ ಮೆಟ್ಟಿಲೇರಿದವರು. ಹಾಗದ್ರೆ ವಿಜಯ್ ಕೇಡಿಯಾ ಯಾರು ಮತ್ತು ಅವರು ಹೇಗೆ ಶ್ರೀಮಂತರಾದರು?, ಇಲ್ಲಿದೆ ವಿವರ....

ವಿಜಯ್ ಕೇಡಿಯಾ ಯಾರು, ಆದಾಯ ಗಳಿಸಿದ್ದು ಹೇಗೆ?
ವಿಜಯ್ ಕೇಡಿಯಾ ಕೋಲ್ಕತ್ತಾದಲ್ಲಿ ಜನಿಸಿದ್ದು, ಅವರ ತಂದೆ ಸ್ಟಾಕ್ ಬ್ರೋಕರ್ ಆಗಿದ್ದರು. ವಿಜಯ್ ಹತ್ತನೇ ತರಗತಿಯಲ್ಲಿದ್ದಾಗ ಅವರ ತಂದೆ ಮೃತಪಟ್ಟರು. ತಂದೆ ಕಳೆದುಕೊಂಡ ಆಘಾತದಲ್ಲಿದ್ದ ಅವರಿಗೆ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ.19 ವರ್ಷವಿದ್ದಾಗ ಸ್ಟಾಕ್ ಬ್ರೋಕಿಂಗ್ ಪ್ರಾರಂಭಿಸಿದರು. ಆದರೆ ಸ್ಟಾಕ್ ಬ್ರೋಕಿಂಗ್‌ನಲ್ಲಿ ಅವರಿಗೆ ನಿಜವಾದ ಆಸಕ್ತಿ ಇರಲಿಲ್ಲ.
ಅವರ ವಿವಾಹ ಬಳಿಕ ಜೀವನ ಕಷ್ಟದಲ್ಲೇ ಸಾಗುತ್ತಿತ್ತು. ಅವರ ಆರ್ಥಿಕ ಪರಿಸ್ಥಿತಿ ಎಷ್ಟು ಹತಾಶಗೆ ತಲುಪಿತ್ತೆಂದರೆ ಒಮ್ಮೆ ಅವರ ಮಗನಿಗಾಗಿ ಹಾಲು ಖರೀದಿಸಲು 14 ರೂ. ಹೊಂದಿಸುವುದು ಕಷ್ಟವಾಗಿತ್ತು. ತಾಯಿಯ ಚಿನ್ನಾಭರಣ ಮಾರಿ ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿಯೂ ಬಂದೊದಗಿತ್ತು. ಒಂದೇ ಕೋಣೆಯಲ್ಲಿ 6 ಮಂದಿ ವಾಸಿಸುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ಉಂಟಾದ ನಷ್ಟ ಅವರಿಗೆ ಈ ಪರಿಸ್ಥಿತಿಯನ್ನು ತಂದೊಡ್ಡಿತು.
ಪರಿಸ್ಥಿತಿ ಹತಾಶವಾಗಿದ್ದರೂ ಕಂಗೆಡದೆ ಮುಂದೊಂದು ದಿನ ಆರ್ಥಿಕ ಸಂಕಷ್ಟದಿಂದ ಹೊರಬಂದರು ವಿಜಯ್ ಕೇಡಿಯಾ. ಮಗುವಿಗಾಗಿ ಹಾಲು ಖರೀದಿಸಲು ಪತ್ನಿ ಬಿಡಿಕಾಸು ಒಟ್ಟು ಮಾಡಿದ ಘಟನೆ ಕೆಡಿಯಾ ಅವರ ಮನಸ್ಸನ್ನು ಕಲಕಿತು. ಹೀಗಾಗಿ ಇದರಿಂದ ಹೊರಬರುವ ದೃಢ ಸಂಕಲ್ಪಮಾಡಿ ಕೋಲ್ಕತ್ತಾ ಬಿಟ್ಟು ಮುಂಬೈಗೆ ಪ್ರಯಾಣ ಬೆಳೆಸಿ ಅದೃಷ್ಟ ಪರೀಕ್ಷೆಗೆ ಮುಂದಾದರು.
1992ರಲ್ಲಿಅದೃಷ್ಟ ಕೆಡಿಯಾ ಅವರ ಕೈ ಹಿಡಿಯಿತು. ಷೇರು ಮಾರುಕಟ್ಟೆ ಏರುಗತಿಯಲ್ಲಿ ಸಾಗಿ ಕೆಡಿಯಾ ಹಣ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಈ ವೇಳೆ ಬೆಲೆ 35 ರೂ ಇದ್ದ ಪಂಜಾಬ್ ಟ್ರ್ಯಾಕ್ಟರ್‌ಗಳ ಷೇರುಗಳನ್ನು ಖರೀದಿಸಿದ್ದು ಇದನ್ನು ಶೇ.500 ಪ್ರೀಮಿಯಂಗೆ ಮಾರಿ ಎಸಿಸಿಯ ಷೇರುಗಳನ್ನು ಖರೀದಿಸಿದರು. ACC ಷೇರಿನ ಬೆಲೆ ಪ್ರತಿಶತ 1000 ಪ್ರತಿಶತ ಏರಿಕೆ ಕಂಡು ಸಾಕಷ್ಟು ಹಣ ಸಂಪಾದಿಸಿದರು.
ಇದಾದ ಬಳಿಕ ಮುಂಬೈನಲ್ಲಿ ಮನೆ ಖರೀದಿಸಿ, ಕೋಲ್ಕತ್ತಾದಿಂದ ತಮ್ಮ ಕುಟುಂಬವನ್ನು ಮುಂಬೈಗೆ ಶಿಫ್ಟ್ ಮಾಡಿದರು. ಆದರೆ ಅದೃಷ್ಟ ಮತ್ತೊಮ್ಮೆ ಕೈಕೊಟ್ಟಿತ್ತು. ಷೇರು ಮಾರುಕಟ್ಟೆ ಕುಸಿದಾಗ ಅವರು ಮತ್ತೆ ಎಲ್ಲವನ್ನೂ ಕಳೆದುಕೊಂಡರು. ಅವನು ಅವರು ಎಂದಿಗೂ ಹತಾಶರಾಗಲಿಲ್ಲ. 2002-2003ರಲ್ಲಿ, ಮಾರುಕಟ್ಟೆಯು ಮತ್ತೊಂದು ಏರಿಕೆ ಕಂಡಿತು. ಅವರು ಮೂರು ಷೇರುಗಳನ್ನು ಖರೀದಿಸಿದರು ಇದು ಅವರಿಗೆ ಭಾರಿ ಲಾಭವನ್ನು ಒದಗಿಸಿತು.
ಇಂದು ನಿವ್ವಳ ಮೌಲ್ಯವು ಈಗ 800 ಕೋಟಿ ರೂಪಾಯಿಗಳನ್ನು ತಲುಪಿದ್ದು ಅವ್ರು ದೇಶದ ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಕೆಡಿಯಾ ಸೆಕ್ಯುರಿಟೀಸ್ ಎಂಬ ಕಂಪನಿಯನ್ನು ತೆರೆದಿದ್ದಾರೆ. ತಮ್ಮ ತಪ್ಪುಗಳಿಂದ ಕಲಿಯುತ್ತಾ, ಜೊತೆಗೆ ಅದೇ ಕ್ಷೇತ್ರದಲ್ಲಿರುವವರ ಯಶಸ್ಸು ಮತ್ತು ವೈಫಲ್ಯಗಳನ್ನು ಗಮನಿಸಿ ತಮ್ಮ ಅನುಭವದಿಂದಾಗಿ ಅವರು ಮಿಲಿಯನೇರ್ ಆದರು. ಎಕನಾಮಿಕ್ ಟೈಮ್ಸ್ ಅವರನ್ನು "ಮಾರುಕಟ್ಟೆ ಮಾಸ್ಟರ್" ಎಂದು ಬಣ್ಣಿಸಿದೆ.


Click it and Unblock the Notifications