ಉದ್ಯಮಶೀಲ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಹಾಗೂ ಛಲದಿಂದ ಯಶಸ್ಸನ್ನು ಗಳಿಸಿದ ಸಾಕಷ್ಟು ಯಶೋಗಾಥೆಗಳನ್ನು ನಾವು ಕೇಳಿದ್ದೇವೆ. ಅದರಂತೆ ವಿನಯ್ ಸಿಂಘಾಲ್ ಅವರು ತಮ್ಮ ಸ್ನೇಹಿತರಾದ ಶಶಾಂಕ್ ವೈಷ್ಣವ್ ಹಾಗೂ ಪ್ರವೀಣ್ ಸಿಂಘಾಲ್ ಅವರೊಂದಿಗೆ ಸೇರಿಕೊಂಡು ಉದ್ಯಮ ಕ್ಷೇತ್ರದಲ್ಲಿ ಅನಿರೀಕ್ಷಿತ ಸಾಧನೆಯನ್ನು ಮಾಡಿದ್ದಾರೆ.
ವಿನಯ್ ಅವರು ತಮ್ಮ ಪದವಿಯನ್ನು ಮುಗಿಸಿದ ನಂತರ ವಿಟ್ಟಿ ಫೀಡ್ ಎಂಬ ವೆಂಚರ್ ಅನ್ನು ಪ್ರಾರಂಭಿಸಿದ್ದರು. ಆದರೆ ಅವರು ತಮ್ಮ ಉದ್ಯಮದತ್ತ ನೀಡಿದ್ದ ಪರಿಶ್ರಮ, ಬದ್ಧತೆಯು ನಿರೀಕ್ಷೆಗೂ ಮೀರಿದ ಯಶಸ್ಸನ್ನು ನೀಡುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ವೈರಲ್ ಕಂಟೆಂಟ್ ಫ್ಲಾಟ್‌ಫಾರಂ ಆದ ವಿಟ್ಟಿ ಫೀಡ್ ಬಹಳ ವೇಗವಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ. ಸುಮಾರು 125 ಮಂದಿ ಉದ್ಯೋಗಿಗಳೊಂದಿಗೆ ವಿಟ್ಟಿ ಫೀಡ್ ವಾರ್ಷಿಕವಾಗಿ 40 ಕೋಟಿ ರೂ. ವಹಿವಾಟು ನಡೆಸುತ್ತಿದೆ.

ಭಾರತ, ಸಿಂಗಾಪುರ ಹಾಗೂ ಅಮೆರಿಕದಲ್ಲಿ ಕಚೇರಿಯನ್ನು ಹೊಂದುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದುಕೊಂಡಿದೆ. 200 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದ್ದು, ತನ್ನ ವೆಬ್‌ಸೈಟ್ ಪ್ರತಿ ತಿಂಗಳು 120 ಮಿಲಿಯನ್ ಯೂನಿಕ್ ಯೂಸರ್ ಹಾಗೂ 420 ಮಿಲಿಯನ್ ಪೇಜ್ ವೀವ್ ಹಾಗೂ 2.5 ಬಿಲಿಯನ್ ಇಪ್ರೆಷನ್ ಅನ್ನು ಹೊಂದಿರುವುದಾಗಿ ನ್ಯೂಸ್18 ವರದಿ ಮಾಡಿದೆ.
ಈ ನಡುವೆ 2018ರ ನವೆಂಬರ್ 26ರಂದು ವಿಟ್ಟಿಫೀಡ್ ಫೇಸ್‌ಬುಕ್ ಪೇಜ್ ಕಣ್ಮರೆಯಾದಾಗ ಕಂಪನಿಯನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿತ್ತು. ಇದರಿಂದಾಗಿ 2019ರ ಹೊತ್ತಿಗೆ ಫಂಡ್ ಕೂಡ ಖಾಲಿಯಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೆ, ಈ ಆರ್ಥಿಕ ಸಂಕಷ್ಟದ ಸವಾಲುಗಳ ನಡುವೆಯೂ ವಿನಯ್ ಅವರು ಧೃತಿಗೆಡಲಿಲ್ಲ.
ಸಾಕಷ್ಟು ಸವಾಲುಗಳ ನಡುವೆಯೇ ವಿನಯ್ ಸಿಂಘಾಲ್ ಅವರು ತನ್ನ ಉದ್ಯೋಗಿಗಳಿಗೆ ಮೂರು ತಿಂಗಳ ಕಾಲ ವೇತನವನ್ನು ಮುಂದುವರಿಸುವ ಮೂಲಕ ಅಚಲ ಬದ್ಧತೆಯನ್ನು ಪ್ರದರ್ಶಿಸಿದರು. STAGE ಅಪ್ಲಿಕೇಷನ್ ಪರಿಕಲ್ಪನೆಯು ಫಲ ನೀಡುವತ್ತ ನಿರೀಕ್ಷೆ ಮೂಡಿಸಿತ್ತು. ಸುಮಾರು 54 ಮಂದಿ ತಂಡದ ಅವಿರತ ಸಾಂಘಿಕ ಪ್ರಯತ್ನದಿಂದಾಗಿ 2019ರ ನೆವಂಬರ್ 1ರಂದು STAGE ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ಸಾಕಷ್ಟು ಪರಿಶ್ರಮಪಟ್ಟರು. ಪ್ರಸ್ತುತ ಮಾಧ್ಯಮ ವರದಿ ಮಾಡಿದಂತೆ ಕಂಪನಿಯು 300 ಕೋಟಿ ರೂಪಾಯಿ ಮೌಲ್ಯದೊಂದಿಗೆ ಎತ್ತರಕ್ಕೆ ಬೆಳೆದಿದೆ.
ಇದರ ಜತೆಗೆ ಅದೇ ವರ್ಷದಲ್ಲಿ ವಿನಯ್, ಶಶಾಂಕ್ ಹಾಗೂ ಪ್ರವೀಣ್ ಅವರು ನೆಟ್‌ಫ್ಲಿಕ್ಸ್‌ನಂತೆಯೇ ಭಾರತೀಯ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶಿಷ್ಟವಾದ ಒಟಿಟಿ ಪ್ಲಾಟ್‌ಫಾರಂ ಅನ್ನು ಸಿದ್ಧಪಡಿಸುವತ್ತ ತಮ್ಮ ದೃಷ್ಟಿಯನ್ನು ಹರಿಸಿದ್ದರು. STAGE ಒಂದು ಒಟಿಟಿ ಪ್ಲಾಟ್‌ಫಾರಂ ಆಗಿದ್ದು, ಸುಮಾರು ಎರಡು ಮಿಲಿಯನ್ ಡೌನ್‌ಲೋಡ್ ಹಾಗೂ ಚಂದಾದಾರ ಆಧಾರಿತ ಒಂದು ಲಕ್ಷ ಗ್ರಾಹಕರನ್ನು ಹೊಂದಿದೆ. ಹೈಪರ್ ಲೋಕಲ್ ವೀಡಿಯೊ ಮನರಂಜನೆಯಲ್ಲಿ STAGE ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ.


Click it and Unblock the Notifications