ಶ್ರೀ ಸಿಮೆಂಟ್‌ನ ಅಧ್ಯಕ್ಷರಾದ ಬೇನು ಗೋಪಾಲ್ ಬಂಗೂರ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರು. ಅಷ್ಟೇಅಲ್ಲ, ಪಶ್ಚಿಮ ಬಂಗಾಲದ ಟಾಪ್ ಶ್ರೀಮಂತ ಉದ್ಯಮಿಯೂ ಹೌದು. 1931ರಲ್ಲಿ ಹುಟ್ಟಿರುವ ಬೇನು ಗೋಪಾಲ್ ಬಂಗೂರ್ ಅವರು 92 ವರ್ಷದವರಾಗಿದ್ದಾರೆ. ಭಾರತದ ಅತ್ಯಂತ ಹಳೆಯ ಬಿಲಿಯನೇರ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕೊಲ್ಕೋತ್ತಾದ ಮಾರ್ವಾಡಿ ವ್ಯಾಪಾರ ಕುಟುಂಬದಲ್ಲಿ ಜನಿಸಿದ್ದು, ಕೊಲ್ಕೋತ್ತಾ ವಿವಿಯಿಂದ ಶಿಕ್ಷಣ ಪಡೆದುಕೊಂಡಿದ್ದಾರೆ.
ಬಂಗೂರ್ ಅವರು ವ್ಯಾಪಾರ ಸಾಮ್ರಾಜ್ಯವನ್ನು ಅವರ ಅಜ್ಜ ಮಂಗೀ ರಾಮ್ ಬಂಗೂರ್ ಅವರು ಕಟ್ಟಿ ಬೆಳೆಸಿದ್ದು, ಅವರು ಸ್ಟಾಕ್ ಬ್ರೋಕರ್ ಆಗಿದ್ದರು. ಅವರ ಉದ್ಯಮವು 19ನೇ ಶತಮಾನದ ಕೊನೆಯಲ್ಲಿ ಪ್ರಾರಂಭವಾಗಿತ್ತು. 1991ರಲ್ಲಿ ಬಲಭದ್ರ ದಾಸ್ ಬಂಗೂರ್, ನಿವಾಸ್ ಬಂಗೂರ್, ಕುಮಾರ್ ಬಂಗೂರ್ ಮತ್ತು ಬೇನು ಗೋಪಾಲ್ ಬಂಗೂರ್ (ಮಂಗೀ ರಾಮ್ ಅವರ ಎಲ್ಲ ಮೊಮ್ಮಕ್ಕಳು) ಹಾಗೂ ಲಕ್ಷ್ಮಿ ನಿವಾಸ್ ಬಂಗೂರ್ (ರಾಮ್ ಕೂವರ್ ಅವರ ಮೊಮ್ಮಗ) ಅವರ ನೇತೃತ್ವದಲ್ಲಿ ಗ್ರೂಪ್‌ಗಳಾಗಿ ಪ್ರವರ್ಧಮಾನಕ್ಕೆ ಬಂದ ವ್ಯಾಪಾರ-ವಹಿವಾಟನ್ನು ವಿಭಜಿಸಲಾಯಿತು.

ಬೇನು ಗೋಪಾಲ್ ಬಂಗೂರ್ ಆದಾಯ ಎಷ್ಟಿದೆ ನೋಡಿ
ಫೋರ್ಬ್ಸ್ ಪ್ರಕಾರ, ಬೇನು ಗೋಪಾಲ್ ಬಂಗೂರ್ 2023ರ ಜುಲೈ 17ರ ಮಾಹಿತಿ ಪ್ರಕಾರ 6.7 ಶತಕೋಟಿ ಅಮೆರಿಕನ್ ಡಾಲರ್ ಅಥವಾ ಸುಮಾರು 57,000 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರು ಪತ್ನಿಯನ್ನು ಕಳೆದುಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ಐಐಟಿಯಿಂದ ಪದವಿ ಪಡೆದ ಅವರ ಮಗ ಹರಿ ಮೋಹನ್ ಬಂಗೂರ್ ಅವರು 1990ರಿಂದ ಶ್ರೀ ಸಿಮೆಂಟ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.
ಶ್ರೀ ಸಿಮೆಂಟ್ ಕಂಪನಿಯನ್ನು 1979 ರಲ್ಲಿ ಪ್ರಾರಂಭಿಸಲಾಗಿದೆ. ಸದ್ಯ ಬೇನು ಗೋಪಾಲ್ ಬಂಗೂರ್ ಅವರು ಕಂಪನಿಯ ಬೃಹತ್ ವ್ಯವಹಾರದಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಕಂಪನಿಯು ಶ್ರೀ ಅಲ್ಟ್ರಾ ಜಂಗ್ ರೋಧಕ್, ಬಂಗೂರ್ ಸಿಮೆಂಟ್ ಮತ್ತು ರಾಕ್‌ಸ್ಟ್ರಾಂಗ್ ಹೆಸರಿನ ಬ್ರಾಂಡ್‌ನಲ್ಲಿ ಸಿಮೆಂಟ್ ಅನ್ನು ಮಾರಾಟ ಮಾಡುತ್ತಿದೆ.
ಇದೀಗ ಶ್ರೀ ಸಿಮೆಂಟ್ ಕಂಪನಿಯು ಆಂಧ್ರಪ್ರದೇಶದಲ್ಲಿ ಹೊಸ ಸಿಮೆಂಟ್ ಸ್ಥಾವರವನ್ನು 200 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ವೆಚ್ಚದಲ್ಲಿ ಸ್ಥಾಪಿಸಲು ಸಿದ್ಧವಾಗಿದೆ. ಶ್ರೀ ಸಿಮೆಂಟ್ ಸುಮಾರು 89,750 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಶ್ರೀ ಸಿಮೆಂಟ್ ಪ್ರಸ್ತುತ ಭಾರತದ ಮೂರನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಅಲ್ಲದೆ ಈ ಹಳೇಯ ಕಂಪನಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬೇನು ಗೋಪಾಲ್ ಬಂಗೂರ್ ಹಾಗೂ ಅವರ ಕುಟುಂಬವು ಸಾಕಷ್ಟು ಗಮನಹರಿಸುತ್ತಿದೆ.


Click it and Unblock the Notifications