ವೃತ್ತಿ ಬದುಕಿನಲ್ಲಿ ಕೆಲಸವನ್ನು ಕಳೆದುಕೊಂಡಾಗ ಆಗುವ ಆಘಾತವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಕೆಲಸ ಹೋದಾಗ ಹಣಕಾಸಿನ ತೊಂದರೆಯ ಜತೆಗೆ ಆತ್ಮ ಗೌರವ ಹಾಗೂ ಸಾಮಾಜಿಕವಾಗಿಯೂ ನಾನಾ ರೀತಿಯ ಒತ್ತಡಗಳು ಎದುರಾಗುತ್ತವೆ.
ಮರಿಯಾನಾ ಕೊಬಯಾಶಿ ಎಂಬ ಹೆಸರಿನ ಈ ಯುವತಿ ಕೂಡ ಒಂದು ಸಮಯದಲ್ಲಿ ಇದೇ ರೀತಿಯ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದ್ದರು. ಏಕೆಂದರೆ, ಆಕೆಯು ಒಂದು ದಿನ ತನ್ನ ಇಮೇಲ್ ಓಪನ್ ಮಾಡುವಾಗ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎನ್ನುವ ಸಂದೇಶ ಬಂದಿತ್ತು.

ಮರಿಯಾನಾ ಕೊಬಯಾಶಿ ಅವರು ತಮ್ಮ ಕನಸಿನ ಕಂಪನಿಯಾದ ಲಿಂಕ್ಡ್‌ಇನ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿಧಾನಕ್ಕೆ ತಮ್ಮ ವೃತ್ತಿ ಬಗ್ಗೆ ಆಕೆ ಬಹಳ ಸಂತೋಷವಾಗಿದ್ದರು. ಆ ಕಂಪನಿಯೇ ಆಕೆಗೆ ಸರ್ವಸ್ವವೂ ಆಗಿತ್ತು.
ಮರಿಯಾನಾ ಅವರಿಗೆ ಲಿಂಕ್ಡ್‌ಇನ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬುದು ಬಹುದೊಡ್ಡ ಕನಸಾಗಿತ್ತು. ಅದಕ್ಕಾಗಿ ಆಕೆ ಹಲವು ಹಂತದ ಹುದ್ದೆಗಳಿಗೆ ಅರ್ಜಿಯನ್ನು ಹಾಕುತ್ತಿದ್ದರು. ಆದರೆ, ಪ್ರತಿ ಬಾರಿಯೂ ಕಂಪನಿಯು ಆಕೆಯ ಅರ್ಜಿಯನ್ನು ತಿರಸ್ಕರಿಸುತ್ತಿತ್ತು. ಈ ನಡುವೆ ಆಕೆ ಬೇರೆ ಕಡೆ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದ್ದರು. ಆದರೂ ಲಿಂಕ್ಡ್‌ಇನ್ ಸೇರುವ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು.
ಆದರೆ ಕೊನೆಗೂ 2022ರಲ್ಲಿ ಆಕೆಯ ಪದವಿ ಯೋಜನೆಯೊಂದಿಗೆ ಕಂಪನಿಗೆ ಪ್ರವೇಶ ಪಡೆದುಕೊಂಡರು. ಆದರೆ, ತಮ್ಮ ಕನಸಿನ ಸಂಸ್ಥೆ ಸೇರುವುದು ನನಸುಗೊಂಡಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆ ಸಂತೋಷ ಆಕೆಯ ವೃತ್ತಿ ಬದುಕಿನಲ್ಲಿ ಹೆಚ್ಚು ಕಾಲ ಇರಲಿಲ್ಲ ಎನ್ನುವುದು ವಾಸ್ತವ.
2023ರ ಮೇ ತಿಂಗಳಲ್ಲಿ ನಿಮ್ಮನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎನ್ನುವ ಇ-ಮೇಲ್ ಸಂದೇಶವನ್ನು ಮರಿಯಾನಾ ಕೊಬಯಾಶಿ ಅವರು ಪಡೆದಿದ್ದು, ಇದು ಆಕೆ ಪಾಲಿಗೆ ಬರಸಿಡಿಲಿನಂತೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿತ್ತು. ಇದು ಮರಿಯಾನಾ ಕೊಬಯಾಶಿ ಅವರನ್ನು ಎಷ್ಟೊಂದು ಘಾಸಿಗೊಳಿಸಿತು ಅಂದರೆ ಆಕೆ ಮಾನಸಿಕವಾಗಿಯೂ ತುಂಬಾ ದುರ್ಬಲಗೊಂಡಿದ್ದರು.
ಮುಂದೇನು ಮಾಡಬೇಕು ಎನ್ನುವ ಗೊಂದಲದ ನಡುವೆ ತಾನು ಇಷ್ಟಪಟ್ಟು ಸೇರಿದ್ದ ಕಂಪನಿಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೆ. ಆದರೂ ಈ ರೀತಿ ವಜಾಗೊಳಿಸಿರುವುದು ನೆನೆದು ಅದನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಇದು ವೃತ್ತಿ ಬದುಕಿನ ಭವಿಷ್ಯದ ಕಡೆಗಿನ ಆತ್ಮವಿಶ್ವಾಸವನ್ನು ಕಡಿಮೆಗೊಳಿಸುವಂತೆಯೂ ಮಾಡಿತ್ತು.
ಸ್ವಲ್ಪ ದಿನಗಳ ಬಳಿಕ ಬದುಕನ ಇಂಥಹ ಸವಾಲುಗಳನ್ನು ಎದುರಿಸುವ ಛಲ ಬೆಳೆಸಿಕೊಂಡ ಮರಿಯಾನಾ ಕೊಬಯಾಶಿ ಪ್ರವಾಸ ಮಾಡುವುದಕ್ಕೆ ನಿರ್ಧರಿಸಿದ್ದರು. ಈ ಟೂರ್ ನಡುವೆ ಕೆಲವೊಂದು ಸಂದರ್ಶನಗಳಿಗೂ ಹೋಗಿ ಬರುತ್ತಿದ್ದರು. ಕೊನೆಗೆ ಡಬ್ಲಿನ್‌ನಲ್ಲಿರುವ ಗೂಗಲ್‌ನಂಥ ದೊಡ್ಡ ಕಂಪನಿಯಲ್ಲಿ ಮರಿಯಾನಾ ಕೆಲಸ ಪಡೆದುಕೊಂಡರು.
ಅಷ್ಟೇ ಅಲ್ಲ ಈ ಹಿಂದಿನ ಸಂಬಳಕ್ಕಿಂತ ಹೆಚ್ಚಿನ ವೇತನ ಕೂಡ ದೊರೆಯಲಾರಂಭಿಸಿತು. ಮರಿಯಾನಾ ಕೊಬಯಾಶಿ ಈಗ ಗೂಗಲ್‌ನಲ್ಲಿ ಅಕೌಂಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅತ್ಯುತ್ತಮ ವಾಗ್ಮಿ ಕೂಡ ಹೌದು. ತಮ್ಮ ವೈಯಕ್ತಿಕ ಬದುಕಿನ ಬ್ರಾಂಡ್ ಅನ್ನು ಕೂಡ ಸಾರ್ವಜನಿಕ ವೇದಿಕೆಗಳಲ್ಲಿನ ಭಾಷಣಗಳ ಮೂಲಕ ರೂಪಿಸಿಕೊಳ್ಳುತ್ತಿದ್ದಾರೆ.


Click it and Unblock the Notifications