ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಯಶೋಗಾಥೆಯು ವಿಭಿನ್ನವಾದುದ್ದು. ಇಬ್ಬರೂ ಕೂಡಾ ಬರೀ ಕಾಲೇಜು ಡಿಗ್ರಿಯೇ ಯಶಸ್ವಿಗೆ ಕಾರಣವಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಈ ಸಹೋದರರು ಫಿನ್‌ಟೆಕ್ ಸಂಸ್ಥೆ ಜೆರೋಧಾವನ್ನು ಸ್ಥಾಪನೆ ಮಾಡಿದ್ದು ಸಂಸ್ಥೆಯು ಈ ವರ್ಷದಲ್ಲಿ 2000 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಪ್ರಸ್ತುತ ಸ್ಟಾರ್ಟ್‌ಅಪ್ ಸಂಸ್ಥೆಗಳಲ್ಲಿ ನಷ್ಟ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಬ್ಬರು ಸಹೋದರರು ಸ್ಥಾಪನೆ ಮಾಡಿದ ಈ ಸ್ಟಾರ್ಟ್ ಅಪ್ ಸಂಸ್ಥೆ ಬರೋಬ್ಬರಿ 2000 ಕೋಟಿ ರೂಪಾಯಿ ಲಾಭವನ್ನು ಪಡೆದಿದೆ.
ಸಂಸ್ಥೆಯಲ್ಲಿ ಅತೀ ಶೀಘ್ರವಾಗಿ ಬೆಳವಣಿಗೆ ಕಂಡು ಬಂದಿದೆ. ಸಹೋದರರು ಫಂಡಿಂಗ್ ಪಡೆಯುವ ಪ್ರಯತ್ನ ಮಾಡಿದ್ದಾರೆ, ಆದರೆ ಶಿಕ್ಷಣವಿಲ್ಲ ಎಂಬ ನೆಪದಲ್ಲಿ ಫಂಡಿಂಗ್ ನಿರಾಕರಣೆ ಮಾಡಲಾಗಿದೆ. ಆದರೆ ತಮಗೆ ಶಿಕ್ಷಣ ಇಲ್ಲದಿದ್ದರೂ, ತಮ್ಮ ಪ್ರತಿಭೆ, ತಮ್ಮದೇ ಆದ ಐಡಿಯಾ, ವಹಿವಾಟನ್ನು ಕಲಿಯುವ ಆಸಕ್ತಿ, ಅತೀ ಪವಿತ್ರವಾದ ಕಠಿಣ ಶ್ರಮದಿಂದ ಈ ಸಹೋದರರು ಒಂದು ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಹೆಚ್ಚು ಲಾಭ ಹೊಂದಿರುವ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ನಾವು ನಿತಿನ್ ಕಾಮತ್ ಬಗ್ಗೆ ಮಾಹಿತಿ ನೀಡಿದ್ದೇವೆ, ಈಗ ನಿಖಿಲ್ ಕಾಮತ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ನಿಖಿಲ್ ಕಾಮತ್ ಬಗ್ಗೆ ಈ ಮಾಹಿತಿ ತಿಳಿದಿರಲಿ
ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಪೈಕಿ ನಿಖಿಲ್ ಕಿರಿಯ ಸಹೋದರ ಆಗಿದ್ದಾರೆ. 2022ರ ಹುರುನ್ ಸ್ವಯಂ ಪ್ರಯತ್ನದಿಂದ ಶ್ರೀಮಂತರಾದ ವ್ಯಕ್ತಿಗಳ ಪಟ್ಟಿಯಲ್ಲಿ ನಿಖಿಲ್ ಕಾಮತ್ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ನಿಖಿಲ್ ಕಾಮತ್ ನಿವ್ವಳ ಆದಾಯವು 17,500 ಕೋಟಿ ರೂಪಾಯಿ ಆಗಿತ್ತು. ನಿಖಿಲ್ ಕಾಮತ್ 34 ವರ್ಷದವರಾಗಿದ್ದಾಗಲೇ 2021ರಲ್ಲಿ ಬಿಲಿಯನೇರ್ ಆಗಿದ್ದಾರೆ. ಬಹಳ ಕುತೂಹಲಕಾರಿ ಜೀವನ ಇವರದ್ದಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಶಾಲೆಯಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸಿದ್ದಾರೆ. ಅದು ಬಂಧನದಂತೆ ಎಂದು ಪ್ರತಿಪಾದಿಸಿದ್ದಾರೆ.
ಅತೀ ಸಣ್ಣ ವಯಸ್ಸಿನಲ್ಲಿಯೇ ಉದ್ಯೋಗ ಆರಂಭಿಸಿದ್ದಾರೆ. ತನ್ನ 14ನೇ ವಯಸ್ಸಿನಲ್ಲೇ ಈಗಾಗಲೇ ಬಳಸಿದ ಫೋನ್‌ಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದಾಗಿ ಅಸಮಾಧಾನಕ್ಕೆ ಒಳಗಾದ ತಾಯಿ ಎಲ್ಲ ಫೋನ್‌ಗಳನ್ನು ಟಾಯ್ಲೆಟ್‌ಗೆ ಹಾಕಿದ್ದರು. ಶಾಲೆಯಲ್ಲಿಯೂ ಕೂಡಾ ನಿಖಿಲ್ ಬಗ್ಗೆ ದೂರುಗಳು ಇದ್ದವು. 10ನೇ ತರಗತಿಯ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಾಲಾ ಆಡಳಿತವು ನಿರಾಕರಿಸಿತ್ತು. ಅದಾದ ಬಳಿಕ ನಿಖಿಲ್ ಕಾಮತ್ ಶಾಲೆಯನ್ನೇ ತೊರೆದಿದ್ದರು. ಆದರೆ ಈಗ ಮಾಹಿತಿ ಪ್ರಕಾರ ದಿನಕ್ಕೆ 27 ಲಕ್ಷ ರೂ ಆದಾಯ ಹೊಂದಿದ್ದಾರೆ.
ಪ್ರೇಯಸಿಯೊಂದಿಗಿರಲು ಮನೆ ತೊರೆದ ನಿಖಿಲ್
ನಿಖಿಲ್ ಕಾಮತ್ ತನ್ನ 17ನೇ ವಯಸ್ಸಿನಲ್ಲಿ ಕಾಲ್ ಸೆಂಟರ್‌ನಲ್ಲಿ 8 ಸಾವಿರ ಸಂಬಳಕ್ಕೆ ದುಡುಯುತ್ತಿದ್ದರು. ಅದಕ್ಕಾಗಿ ತನ್ನ ನಕಲಿ ಜನನ ಪ್ರಮಾಣಪತ್ರವನ್ನು ನೀಡಿದ್ದರು. ಅದಾದ ಬಳಿಕ ತನ್ನ ಪ್ರೇಯಸಿಯೊಂದಿಗೆ ಜೀವಿಸಲು ತನ್ನ ಮನೆಯನ್ನು ನಿಖಿಲ್ ಕಾಮತ್ ತೊರೆದರು. "ನನಗೆ ಪ್ರೇಯಸಿಯಿದ್ದಳು, ಅದಕ್ಕಾಗಿ ಮನೆಯನ್ನು ತೊರೆದು ಅವಳೊಂದಿಗೆ ಜೀವಿಸಲು ಆರಂಭಿಸಿದೆ. ನಾನು ಸಂಜೆ 4ರಿಂದ ರಾತ್ರಿ 1 ಗಂಟೆವರೆಗೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದೆ. ಹಗಲಿನಲ್ಲಿ ಟ್ರೇಡಿಂಗ್‌ನಲ್ಲಿ ತೊಡಗಿಸಿಕೊಂಡೆ. ಹಲವಾರು ವಿಚಾರಗಳನ್ನು ತಿಳಿದೆ. ನೀವು ಮನೆಯನ್ನು ತೊರೆದಾಗ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ," ಎಂದು ನಿಖಿಲ್ ತಿಳಿಸಿದ್ದಾರೆ.
ಆದರೆ ನಿಖಿಲ್ ತಂದೆಯು ಎಂದಿಗೂ ಕೂಡಾ ತನ್ನ ಮಗನ ಮೇಲೆ ನಂಬಿಕೆಯನ್ನು ಹೊಂದಿದ್ದರು. ತಾನು ಉಳಿತಾಯ ಮಾಡಿದ ಮೊತ್ತವನ್ನು ಹಣವನ್ನು ಉಳಿತಾಯ ಮಾಡಲು ಆರಂಭಿಸಿದರು. ತನ್ನ ಕಾಲ್ ಸೆಂಟರ್ ಉದ್ಯೋಗಿಗಳಿಗೂ ಇದನ್ನೇ ತಿಳಿಸಿದರು. ಅದಾದ ಬಳಿಕ ಸಹೋದರರಿಬ್ಬರೂ ಸೇರಿ 2010ರಲ್ಲಿ ಜೆರೋಧಾ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ತಾನು ಬಿಲಿಯನೇರ್ ಆಗಿದ್ದರೂ ನನ್ನ ಜೀವನದಲ್ಲಿ ಒಂದು ಅಂಶ ಇಂದಿಗೂ ಬದಲಾವಣೆಯಾಗಿಲ್ಲ. ನಾನು ಈಗಲೂ ಶೇಕಡ 85ರಷ್ಟು ಸಮಯ ಕೆಲಸವನ್ನು ಮಾಡುತ್ತೇವೆ ಎನ್ನುತ್ತಾರೆ.
ಜೆರೋಧಾ ಒಂದು ಟ್ರೇಡಿಂಗ್ ಅಪ್ಲಿಕೇಷನ್ ಆಗಿದ್ದು, ಅತೀ ಕಡಿಮೆ ಶುಲ್ಕವನ್ನು ಹೊಂದಿದೆ. ಇದು ಸುಮಾರು 2094 ಕೋಟಿ ಲಾಭವನ್ನು ಪಡೆದಿದೆ. ಸಂಸ್ಥೆಯು ಐಐಟಿ ಮತ್ತು ಐಐಎಂನಿಂದ ಯಾವುದೇ ಉದ್ಯೋಗಿಗಳನ್ನು ಹೊಂದಿರಲಿಲ್ಲ. ಇದು ಯಾಕೆ ಎಂದು ನಿತಿನ್ ಕಾಮತ್ ವಿವರಿಸಿದ್ದಾರೆ. ಪ್ರತಿಷ್ಠಿತ ಪದವಿಗಳನ್ನು ಹೊಂದಿರುವ ಜನರು ಕಂಪನಿಗೆ ಯಾವುದು ಉತ್ತಮ ಎನ್ನುವುದಕ್ಕಿಂತ ವೃತ್ತಿ ಬೆಳವಣಿಗೆಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದರು.


Click it and Unblock the Notifications