ಜೀವನದಲ್ಲಿ ಯಾರು ಅಧಿಕ ಹಣವನ್ನು ಪಡೆಯಲು ಬಯಸಲ್ಲ ಹೇಳಿ?, ಅದು ಕೂಡಾ ಈ ಹಣದುಬ್ಬರ ಅಧಿಕವಾಗಿರುವ ಸಂದರ್ಭದಲ್ಲಿ ಹಣ ಅತೀ ಅಗತ್ಯವಾಗಿದೆ. ಹಾಗಿರುವಾಗ ನೀವು ಮುಂದೊಂದು ದಿನ ಕೋಟ್ಯಧಿಪತಿ ಆಗಲು ಬಯಸಿದರೆ ಏನು ಮಾಡಬೇಕು, ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬುವುದರ ಬಗ್ಗೆ ನಾವು ನಿಮಗೆ ಇಲ್ಲಿ ಸಲಹೆ ನೀಡುತ್ತೇವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಜನರಿಗೆ ಹಣ ಉಳಿತಾಯ ಮಾಡಲು ಸಹಾಯವಾಗಲಿ ಎಂದು ವರ್ಷದ ಹಿಂದೆ ಸರ್ಕಾರವು ಆರಂಭ ಮಾಡಿದೆ. ಇದು ಸಣ್ಣ ಉಳಿತಾಯ ಮಾಡುವವರಿಗೆ ಸಹಾಯಕವಾಗಿದೆ. ಹಾಗೆಯೇ ಈ ಹೂಡಿಕೆಯಲ್ಲಿ ಯಾವುದೇ ಅಪಾಯ ಕೂಡಾ ಇಲ್ಲ ಎಂಬುವುದು ಗಮನಾರ್ಹ ವಿಚಾರವಾಗಿದೆ.
ನೀವು ನಿಮ್ಮ ನಿವೃತ್ತಿ ಸಂದರ್ಭಕ್ಕಾಗಿ ಯಾವುದೇ ತೆರಿಗೆ ಇಲ್ಲದೆ, ಅಪಾಯವಿಲ್ಲದೆ ಮಾಡಬಹುದಾದ ಉಳಿತಾಯವೇ ಈ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಆಗಿದೆ. ದೀರ್ಘ ಕಾಲದವರೆಗೆ ನಿಮ್ಮ ಹಣವನ್ನು ಉಳಿತಾಯ ಮಾಡಲು ಹಾಗೂ ತೆರಿಗೆ ಇಲ್ಲದೆಯೇ ಹಣವನ್ನು ರಿಟರ್ನ್ ಪಡೆಯಲು ಇದು ಸಹಕಾರಿಯಾಗುವ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ. ಇದು ನಮ್ಮ ತೆರಿಗೆಯನ್ನು ನಾವು ಉಳಿತಾಯ ಮಾಡಲು ಸಹಾಯಕವಾದ ಯೋಜನೆ ಕುಡಾ ಹೌದು. ಈ ಯೋಜನೆ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಬಡ್ಡಿದರ, ಮೆಚ್ಯೂರಿಟಿ ಮೊದಲಾದ ಮಾಹಿತಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಯಾವುದೇ ಅಪಾಯವಿಲ್ಲದ, ಅತೀ ಅಧಿಕ ಬಡ್ಡಿದರ ನೀಡುವ ಭಾರತದಲ್ಲಿರುವ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ ಪಿಪಿಎಫ್‌ಗೆ ವಾರ್ಷಿಕವಾಗಿ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇದನ್ನು ಮಾಸಿಕ ಆಧಾರದಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ. ಮಾರ್ಗಸೂಚಿ ಪ್ರಕಾರ ಸುಮಾರು 15 ವರ್ಷಗಳ ಕಾಲ ಜನರು ತಮ್ಮ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಈ 15 ವರ್ಷ ಆದ ಬಳಿಕವೂ ನಾವು ಈ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡಲು ಬಯಸಿದರೆ ಅದಕ್ಕೆ ಅವಕಾಶವಿದೆ. ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲು ಕೋರಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ನಾವು ವಾರ್ಷಿಕವಾಗಿ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡುವ ಅವಕಾಶ ನಮಗೆ ಇದೆ.
ದಿನಕ್ಕೆ 417 ರೂಪಾಯಿ ಹೂಡಿಕೆ ಮಾಡಿ ಕೋಟ್ಯಧಿಪತಿಯಾಗಿ!
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿ ನಾವು ದಿನಕ್ಕೆ 417 ರೂಪಾಯಿ ಹೂಡಿಕೆ ಮಾಡಿದರೆ ನಾವು ಕೋಟ್ಯಧಿಪತಿಯಾಗಲು ಸಾಧ್ಯವಾಗಲಿದೆ. ಪ್ರತಿ ದಿನ 417 ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕವಾಗಿ 12,500 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಅಂದರೆ ನಾವು ವಾರ್ಷಿಕವಾಗಿ 1,50,000 ರೂಪಾಯಿಗಿಂತ ಕೊಂಚ ಅಧಿಕವೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತೇವೆ. 15 ವರ್ಷಗಳ ಅವಧಿಯಲ್ಲಿ ಇದು 40.58 ಲಕ್ಷ ರೂಪಾಯಿ ಆಗಲಿದೆ. ಆ ಬಳಿಕ ನಾವು ಮತ್ತೆ ಎರಡು ಬಾರಿ ಅವಧಿ ವಿಸ್ತರಣೆ ಮಾಡಿದರೆ, ಕೋಟ್ಯಧಿಪತಿಯಾಗುವುದು ಖಂಡಿತ.
ಎಷ್ಟು ವರ್ಷ ಹೂಡಿಕೆ ಮಾಡಬೇಕಾಗುತ್ತದೆ?
ನಿಮಗೆ 35 ವರ್ಷ ಆದಾಗ ಈ ಹೂಡಿಕೆಯನ್ನು ನೀವು ಆರಂಭ ಮಾಡಿದರೆ, ಸುಮಾರು 60 ವರ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಒಟ್ಟಾಗಿ 25 ವರ್ಷಗಳ ಕಾಲ ನೀವು ಹೂಡಿಕೆ ಮಾಡಬೇಕಾಗುತ್ತದೆ. ಅಷ್ಟು ವರ್ಷದ ಬಳಿಕ ನಿಮ್ಮ ಕೈಗೆ 1.03 ಕೋಟಿ ರೂಪಾಯಿ ಲಭ್ಯವಾಗಲಿದೆ. ಸುಮಾರು 66 ಲಕ್ಷ ರೂಪಾಯಿವರೆಗೆ ನೀವು ಬಡ್ಡಿಯಾಗಿಯೇ ಪಡೆಯಲಿದ್ದೀರಿ. ಅದು ಕೂಡಾ ಇದು ಸಂಪೂರ್ಣವಾಗಿ ತೆರಿಗೆ ರಹಿತವಾಗಿದೆ. 25 ವರ್ಷದಲ್ಲಿ ನೀವು ನಿವೃತ್ತಿ ಜೀವನಕ್ಕೆ ತಲುಪುವಾಗ, ನೀವು 37 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಂತೆ ಆಗುತ್ತದೆ. ಆದರೆ ಇದಕ್ಕೆ ಬಡ್ಡಿ ಸೇರಿ ಕೋಟಿ ಆಗಲಿದೆ. ನೀವು ಅಧಿಕ ಬಡ್ಡಿದರ ಪಡೆಯಬೇಕಾದರೆ ಹಣ ಹೂಡಿಕೆ ಮಾಡಲು ತಿಂಗಳ ಮೊದಲ ದಿನದಿಂದ ಐದು ದಿನಗಳ ಕಾಲದ ಅವಧಿ ಉತ್ತಮ ಎಂದು ತಜ್ಞರು ಹೇಳುತ್ತಾರೆ.


Click it and Unblock the Notifications