ಮಹಾರಾಷ್ಟ್ರದ ಸೋಲಾಪುರದ ಪ್ರಕಾಶ್ ಇಮ್ಡೆ ಎಂಬ ಈ ರೈತ ತಮ್ಮ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಲೆಯಿಂದಾಗಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಮನೆ ಕಟ್ಟಿರುವುದಕ್ಕೆ ಅವರು ಪ್ರಶಂಸೆಗೆ ಪಾತ್ರರಾಗಿಲ್ಲ; ಬದಲಿಗೆ ಈ ಬಂಗಲೆಯನ್ನು ಅವರು ದನದ ಹಾಲು ಹಾಗೂ ಸೆಗಣಿ ಮಾರಾಟ ಮಾಡಿ ನಿರ್ಮಿಸಿದ್ದಾರೆ.
ಹಲವು ಸಂಕಷ್ಟ- ಸವಾಲುಗಳ ನಡುವೆ ಪ್ರಕಾಶ್ ಇಮ್ಡೆ ಅವರು ಬದುಕಿನಲ್ಲಿ ಮಾಡಿರುವ ಸಾಧನೆಯು ಮಹಾರಾಷ್ಟ್ರದಲ್ಲಿ ಹಲವು ಉದ್ಯಮಿಗಳಿಗೆ ಸ್ಫೂರ್ತಿದಾಯಕವಾಗಿದೆ. ಹಾಗಾದರೆ, ಪ್ರಕಾಶ್ ಇಮ್ಡೆ ಅವರ ಯಶಸ್ವಿನ ಕಥೆ, ಆದಾಯ, ಉದ್ಯಮ, ಶಿಕ್ಷಣ ಇತರೆ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

ಪ್ರಕಾಶ್ ಇಮ್ಡೆ ಬಗ್ಗೆ ಇಲ್ಲಿದೆ ವಿವರ
ಪ್ರಕಾಶ್ ಇಮ್ಡೆ ಅವರು ಕೇವಲ ಒಂದು ಹಸು ಮತ್ತು ನಾಲ್ಕು ಎಕರೆ ಪೂರ್ವಜರಿಂದ ಬಂದ ಜಮೀನಿನಲ್ಲಿ ಬಹಳ ಕಠಿಣವಾದ ಕೃಷಿ ಬದುಕನ್ನು ಪ್ರಾರಂಭಿಸಿದ್ದರು. ಆ ಜಮೀನು ಕೃಷಿಗೆ ಯೋಗ್ಯವಾಗಿಲ್ಲದ ಕಾರಣ ಪ್ರಕಾಶ್ ಇಮ್ಡೆ ಅವರು ಕೃಷಿಯನ್ನು ತೊರೆದು ಹಾಲು ಮತ್ತು ಸೆಗಣಿ ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರಕಾಶ್ ಇಮ್ಡೆ ಅವರು 1998ರಲ್ಲಿ ಈ ಹಾಲು ಮಾರಾಟದ ವ್ಯವಹಾರವನ್ನು ಪ್ರಾರಂಭಿಸಿದ್ದರು.
ಹೈನುಗಾರಿಕೆಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಪ್ರಕಾಶ್ ಅವರ ಹಾಲಿನ ವ್ಯಾಪಾರ ಎತ್ತರಕ್ಕೆ ಬೆಳೆದಿದೆ. ಪ್ರಕಾಶ್ ಇಮ್ಡೆ ಅವರ ಫಾರ್ಮ್ ಈಗ ದಿನಕ್ಕೆ 1,000 ಲೀಟರ್ ಉತ್ಪಾದಿಸುತ್ತಿದೆ. ಪ್ರಕಾಶ್ ಇಮ್ಡೆ ವಾರ್ಷಿಕ 1.5 ಕೋಟಿ ರೂಪಾಯಿಯನ್ನು ಹಾಲು ಹಾಗೂ ಸೆಗಣಿಯಿಂದ ಸಂಪಾದಿಸುತ್ತಿದ್ದಾರೆ. ಪ್ರಕಾಶ್ ಇಮ್ಡೆ ಅವರ ಇಡೀ ಕುಟುಂಬವು ಈ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಕಾಶ್ ಇಮ್ಡೆ ಅವರ ಕುಟುಂಬವು ಕರುವಿಗೆ ಹಾಲುಣಿಸುವುದು, ಹಾಲು ಕರೆಯುವುದು, ಆರೈಕೆ ಮಾಡುವ ಎಲ್ಲ ಕೆಲಸಗಳನ್ನು ಮಾಡುವುದರ ಜತೆಗೆ ತೋಟದ ಕೆಲಸವನ್ನು ನಿರ್ವಹಿಸುತ್ತಿದೆ. ಪ್ರಕಾಶ್ ಅವರು ತಮ್ಮ ವ್ಯಾಪಾರ ಪ್ರಾರಂಭಿಸಿದಾಗ ಇದ್ದ ಹಸುವಿಗೆ ಲಕ್ಷ್ಮಿ ಎಂದು ಹೆಸರಿಟ್ಟಿದ್ದರು. ಆ ಹಸುವು 2006ರಲ್ಲಿ ಸಾವನ್ನಪ್ಪಿತ್ತು. ಅದರ ಸಾವಿನ ನಂತರ ಪ್ರಕಾಶ್ ಇಮ್ಡೆ ಅವರು ಇಲ್ಲಿವರೆಗೆ ಲಕ್ಷ್ಮಿಯ ತಳಿಯನ್ನೇ ಬೆಳೆಸಿದ್ದಾರೆ.
ಇಮ್ಡೆ ಅವರು ಇದುವರೆಗೆ ಒಂದೇ ಒಂದು ಕರುವನ್ನು ಕೂಡ ಮಾರಾಟ ಮಾಡಿಲ್ಲ. ಪ್ರಕಾಶ್ ಇಮ್ಡೆ ಅವರ ಡೈರಿ ಫಾರ್ಮ್‌ನಲ್ಲಿ ಇಲ್ಲಿವರೆಗೆ ಒಟ್ಟು 150 ಹಸುಗಳಿವೆ. ಪ್ರಕಾಶ್ ಅವರನ್ನು ಗ್ರಾಮಸ್ಥರು ಪ್ರೀತಿಯಿಂದ ಬಾಪು ಎಂದು ಕರೆಯುತ್ತಾರೆ. ಬಾಪು ಅವರು ಹಸು ಹಾಗೂ ಲಕ್ಷ್ಮಿ ದೇವತೆಯನ್ನು ಪೂಜಿಸುವ ಮೂಲಕ ತಮ್ಮ ದಿನದ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೇಅಲ್ಲ, ಅವರ ಮನೆಯ ದೇವರ ಕೋಣೆಯಲ್ಲಿ ಗೋವಿನ ಫೋಟೊವನ್ನು ಇಡಲಾಗಿದೆ.
ಜತೆಗೆ ತಾವು ಕಟ್ಟಿದ ಬಂಗಲೆಗೆ ಗೋಧನ್ ನಿವಾಸ್ ಎಂದು ಹೆಸರು ಕೂಡ ಇಡಲಾಗಿದೆ. ಅವರ ಮನೆಯ ತಾರಸಿಯ ಮೇಲೆ ಹಸುವಿನ ಪ್ರತಿಮೆ ಹಾಗೂ ಹಾಲಿನ ಕೆಟಲ್ ಅನ್ನು ಸ್ಥಾಪಿಸಲಾಗಿದ್ದು, ಅದು ಹಳ್ಳಿ ಮತ್ತು ಸುತ್ತಮುತ್ತಲಿನ ಜನರ ಗಮನವನ್ನು ಕೂಡ ಸೆಳೆಯುತ್ತಿದೆ. ಪ್ರಕಾಶ್ ಇಮ್ಡೆ ಅವರು ಹೈನುಗಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ.
ಆ ಮೂಲಕ, ತಮ್ಮ ಗ್ರಾಮದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸಿದ್ದಾರೆ. ಪ್ರಕಾಶ್ ಇಮ್ಡೆ ಅವರ ಫಾರ್ಮ್‌ನಲ್ಲಿರುವ ದನ-ಕರುಗಳಿಗೆ ನಾಲ್ಕರಿಂದ ಐದು ಟನ್ ಹಸಿರು ಮೇವು ಬೇಕಾಗಿದ್ದು, ಹೆಚ್ಚಿನ ಹುಲ್ಲನ್ನು ತಮ್ಮ ತೋಟದಲ್ಲೇ ಬೆಳೆಸುತ್ತಿದ್ದಾರೆ. ಹೆಚ್ಚುವರಿ ಪಶು ಆಹಾರವನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ತಮ್ಮ ಸಾಕು ಪ್ರಾಣಿಗಳಿಗೆ ಬೇಕಾದ ನೀರಿಗೆ ಪ್ರತ್ಯೇಕ ದೊಡ್ಡ ಟ್ಯಾಂಕ್‌ನ್ನು ನಿರ್ಮಿಸಿಕೊಂಡಿದ್ದಾರೆ.
ಪ್ರಕಾಶ್ ಇಮ್ಡೆ ಅವರ ಹೈನುಗಾರಿಕೆಯಲ್ಲಿನ ಈ ಯಶಸ್ಸಿನ ಯಶೋಗಾಥೆಯು ಪಟ್ಟಣದ ಸುತ್ತಲಿನ ಹಲವಾರು ಉದ್ಯಮಿಗಳಿಗೆ ಸ್ಫೂರ್ತಿ ನೀಡಿದೆ. ಪ್ರಕಾಶ್ ಇಮ್ಡೆ ಅವರ ಈ ಸಾಧನೆಯನ್ನು ನೋಡುವುದಕ್ಕೆ ರಾಜ್ಯದ ಹಾಗೂ ಹೊರ ರಾಜ್ಯದಿಂದಲೂ ಪ್ರತಿದಿನವೂ ಹಲವು ಹೈನುಗಾರಿಕೆ ಆಸಕ್ತರು ಡೈರಿ ಫಾರ್ಮ್‌ಗೆ ಬಂದು ಹೋಗುತ್ತಿದ್ದಾರೆ. ಇಡೀ ತೋಟದಲ್ಲಿ ಸುತ್ತಾಡಿ ಆಸಕ್ತರಿಗೆ ಪ್ರಕಾಶ್ ಇಮ್ಡೆ ಅವರು ತಮ್ಮ ಅನುಭವನ್ನು ಹಂಚಿಕೊಕೊಳ್ಳುತ್ತಿದ್ದಾರೆ.


Click it and Unblock the Notifications