ನೋಯ್ಡಾ ಮೂಲದ ಭಾರತದ ಸ್ಟೇಷನರಿ ಉತ್ಪನ್ನಗಳ ತಯಾರಿಕಾ ಕಂಪೆನಿಯಾದ ಲಕ್ಸರ್ ಇಂಟರ್‌ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಬಗ್ಗೆ ಬಹುಶಃ ಎಲ್ಲರೂ ಕೇಳಿರಬಹುದು. ಈ ಕಂಪನಿಯು ಈಗಾಗಲೇ ಯಶಸ್ವಿ ಕಾರ್ಯಾಚರಣೆ ಮೂಲಕ 60 ವರ್ಷಗಳನ್ನು ಪೂರ್ಣಗೊಳಿಸಿದೆ. ಕೇವಲ 5,000 ರೂ. ಹೂಡಿಕೆ ಹಾಗೂ ಐದು ಮಂದಿ ಉದ್ಯೋಗಿಗಳೊಂದಿಗೆ 1963ರಲ್ಲಿ ದೇವಿಂದರ್ ಕುಮಾರ್ ಜೈನ್ ಅವರು ಲಕ್ಸರ್ ಕಂಪೆನಿಯನ್ನು ಸ್ಥಾಪಿಸಿದ್ದರು.
ಪ್ರಸ್ತುತ ಲಕ್ಸರ್ ಕಂಪೆನಿಯು ಜಗತ್ತಿನ 95 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಪಡೆದುಕೊಂಡು 4,000 ಉದ್ಯೋಗಿಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಅಷ್ಟೇಅಲ್ಲ ಲಕ್ಸರ್ ಈಗ ಒಂಬತ್ತು ಹೈಟೆಕ್ ಉತ್ಪಾದನಾ ಘಟಕಗಳನ್ನು ಕೂಡ ಹೊಂದಿವೆ. ದೇವಿಂದರ್ ಕುಮಾರ್ ಜೈನ್ ಅವರು 2014ರಲ್ಲಿ ನಿಧನ ಹೊಂದಿದ್ದು, ಆ ಬಳಿಕ ಅವರ ಪತ್ನಿ ಉಷಾ ಹಾಗೂ ಮಗಳು ಪೂಜಾ ಜೈನ್ ಅವರು ಕಂಪೆನಿಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ 1975ರಲ್ಲಿ ಫೈಬರ್ ಟಿಪ್ ತಂತ್ರಜ್ಞಾನವನ್ನು ಪರಿಚಯಿಸಿದ ಕಂಪೆನಿ ಲಕ್ಸರ್. ಆ ಬಳಿಕ 1976ರಲ್ಲಿ ಮಾರ್ಕರ್ ಹಾಗೂ ಹೈಲೈಟರ್‌ಗಳನ್ನು ಕೂಡ ಪ್ರಾರಂಭಿಸಿತ್ತು. 1980ರಲ್ಲಿ ಕಂಪೆನಿಯು ಅಂತಾರಾಷ್ಟ್ರೀಯ ವ್ಯಾಪಾರ ವಿಭಾಗವನ್ನು ಪ್ರಾರಂಭಿಸಿದ್ದು, ಆ ಮೂಲಕ ಜಪಾನ್‌ನ ಪೈಲಟ್ ಬ್ರಾಂಡ್ ಮಾರಾಟದ ವಿತರಣೆಯನ್ನು ಪಡೆದುಕೊಂಡಿತ್ತು.
ಆದರೆ ಕಂಪೆನಿಯ ಬೆಳವಣಿಗೆಯು ಅಲ್ಲಿಗೇ ನಿಲ್ಲಲಿಲ್ಲ. 1986ರಲ್ಲಿ ಜಾಗತಿಕ ಮಾರುಕಟ್ಟೆಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಲವು ಉತ್ಪನ್ನಗಳನ್ನು ಲಾಂಚ್ ಮಾಡಿತ್ತು. ಅವುಗಳಲ್ಲಿ ಪರ್ಮನೆಂಟ್ ಮಾರ್ಕರ್, ಡ್ರೈ ಸೇಫ್ ಇಂಕ್ ಮಾರ್ಕರ್, ಫ್ಲೋರ್‌ಸೆಂಟ್ ಹೈಲೈಟರ್‌ಗಳು ಸೇರಿದಂತೆ ಅನೇಕ ಹೊಸ ವಸ್ತುಗಳನ್ನು ಪರಿಚಯಿಸಲಾಯಿತು. ಆ ಮೂಲಕ ಅವುಗಳೆಲ್ಲವೂ ಆಫೀಸ್‌ಗಳಲ್ಲಿ ಅಗತ್ಯ ವಸ್ತುಗಳಾಗಿ ಬದಲಾದವು. ಇದರ ಹೊರತಾಗಿ ಡ್ರಾಯಿಂಗ್, ಸ್ಕೆಚಿಂಗ್, ಕಲರ್ಸ್‌ಗಳನ್ನು ಕೂಡ ಮಾರುಕಟ್ಟೆಗೆ ಲಕ್ಸರ್ ಬ್ರಾಂಡ್‌ನಡಿ ಪರಿಚಯಿಸಲಾಯಿತು.
ಲಕ್ಸರ್ ಕಂಪೆನಿಯು ತನ್ನ ಉತ್ಪನ್ನಗಳಲ್ಲಿ ನ್ಯಾನೋ ತಂತ್ರಜ್ಞಾನವನ್ನು ಬಳಸುತ್ತಿದೆ. ಅಷ್ಟೇಅಲ್ಲದೆ ತನ್ನ ಹಲವು ವಸ್ತುಗಳನ್ನು ಕೂಡ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗುತ್ತಿದೆ. ಆ ಮೂಲಕ ಅವುಗಳಿಗೆ ಲಕ್ಸರ್ ನ್ಯಾನೋ ಕ್ಲೀನ್ ಎನ್ನುವ ಹೆಸರನ್ನು ಇಡಲಾಯಿತು. ಲಕ್ಸರ್ ಪ್ರಸ್ತುತ ಕೇವಲ ಸ್ಟೇಷನರಿ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಮಾತ್ರ ಸೀಮಿತಗೊಂಡಿಲ್ಲ.
ಜತೆಗೆ ಲಕ್ಸರ್ ಗ್ರೂಪ್ ತನ್ನ ಉದ್ಯಮವನ್ನು ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್ ಹಾಗೂ ನ್ಯಾನೋ ಕ್ಲೀನ್ ತಂತ್ರಜ್ಞಾನ ವ್ಯವಹಾರಗಳಿಗೂ ವಿಸ್ತರಿಸುವ ಮೂಲಕ ಎತ್ತರಕ್ಕೆ ಬೆಳೆಯುತ್ತಿದೆ. ಆ ಮೂಲಕ ಕಂಪೆನಿಯು ಈ ಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. 2023ರ ಮಾರ್ಚ್ ಅಂತ್ಯದ ವರದಿ ಪ್ರಕಾರ ಲಕ್ಸರ್ ಕಂಪೆನಿಯು 750 ಕೋಟಿ ರೂ.ಗಳಷ್ಟು ಆದಾಯವನ್ನು ಹೊಂದಿದೆ. ಇದನ್ನು 1,000 ಕೋಟಿ ರೂ.ಗೆ ತಲುಪಿಸುವ ಗುರಿಯನ್ನು ಕೂಡ ಕಂಪೆನಿಯು ಹೊಂದಿದೆ.


Click it and Unblock the Notifications