ನಮ್ಮ ಜೀವನದಲ್ಲಿ ಮನೆ ಊಟದಷ್ಟು ಖುಷಿ ನೀಡುವ ವಿಚಾರ ಬೇರೊಂದು ಇರಲು ಸಾಧ್ಯವೇ? ಈ ಮನೆ ಊಟದ ಮಹತ್ವ ಹಾಗೂ ಅದು ನೀಡುವ ಖುಷಿಯು ಬಹುಶಃ ಮನೆಯಿಂದ ಹೊರಗಡೆ ದೂರದ ಊರಿನಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಹೀಗಿರುವಾಗ, ಮಹಾರಾಷ್ಟ್ರದ ಥಾಣೆ ಮೂಲದ ಮಹಿಳೆಯು ಉದ್ಯಮಿ ಆಗುವ ಸಂಕಲ್ಪ ಮಾಡಿದ್ದು, ಅದರಂತೆ ಅವರ ಫುಡ್ ವೆಂಚರ್ ಮೂಲಕ 'ಘರಾಚಿ ಆಥ್ವಾನ್' ಎನ್ನುವ ರೆಸ್ಟೊರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಅದು ಮನೆ ಆಧಾರಿತ ಆಹಾರವನ್ನು ಪೂರೈಕೆ ಮಾಡುತ್ತಿದೆ. ಘರಾಚಿ ಆಥ್ವಾನ್ ಅಂದರೆ ಮನೆಯನ್ನು ನೆನಪಿಸುವುದು ಎಂದರ್ಥ. ಆ ಮೂಲಕ ನಿಮಗೆ ಕೈಗೆಟಕುವ ದರ ಹಾಗೂ ಮನೆಯಲ್ಲಿನ ಅಡುಗೆ ರುಚಿಯನ್ನು ಹೊಂದಿರುವ ಆಹಾರವನ್ನು ನೀಡುತ್ತಿದ್ದಾರೆ.

ಥಾಣೆಯಲ್ಲಿ ಹುಟ್ಟಿ ಬೆಳೆದ 37 ವರ್ಷದ ಲಲಿತಾ ಪಟೇಲ್ ಅವರು ಫಿಸಿಕ್ಸ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಲಲಿತಾ ಅವರು 20ನೇ ವರ್ಷಕ್ಕೆ ಮದುವೆಯಾಗಿದ್ದು, ಆರ್ಥಿಕವಾಗಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಬಯಸಿದ್ದರು. ಪತಿಯ ವ್ಯಾಪಾರವು ವಿಫಲಗೊಂಡಾಗ ಲಲಿತಾ ಅವರು ಅಡುಗೆಯ ತ್ತ ತಮ್ಮ ಹೆಚ್ಚಿನ ಗಮನವನ್ನು ಹರಿಸಿದರು.
ಸ್ವಂತ ಉದ್ಯಮ ಪ್ರಾರಂಭ
ಭೌತಶಾಸ್ತ್ರದ ಪದವೀಧರೆ ಆಗಿರುವ ಕಾರಣ ಮೊದಲು ಟ್ಯೂಷನ್ ನೀಡಲು ಪ್ರಾರಂಭಿಸಿದರು. ಬಳಿಕ ಮೆಡಿಕಲ್ಸ್‌ಗೆ ಔಷಧವನ್ನು ಮಾರಾಟ ಮಾಡುವ ಕೆಲಸ ಮಾಡಿದರು. ಆದರೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದು ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ ಎಂಬುದನ್ನು ಅವರು ಮನಗಂಡಿದ್ದರು. ಹೀಗಾಗಿ, 2016ರಲ್ಲಿ 2000ರೂ. ಖರ್ಚು ಮಾಡಿ 15 ಟಿಫನ್ ಬಾಕ್ಸ್ ಖರೀದಿಸಿದ್ದರು. ಜತೆಗೆ ಜಾಹೀರಾತಿಗಾಗಿ ಕರಪತ್ರಗಳನ್ನು ಹಂಚಲು 500 ರೂಪಾಯಿ ವಿನಿಯೋಗಿಸಿದ್ದರು. ಆ ಮೂಲಕ ಮನೆಯಲ್ಲಿ ತಮ್ಮ ಟಿಫಿನ್ ವ್ಯಾಪಾರವನ್ನು ಪ್ರಾರಂಭಿಸಿದರು.
ಆದರೆ, ಉದ್ಯಮ ಪ್ರಾರಂಭಿಸಿರುವುದರ ಹೊರತಾಗಿಯೂ ಜನರು ತಮ್ಮನ್ನು ಗೃಹಿಣಿಯಾಗಿ ನೋಡುತ್ತಾರೆ ಎಂಬುದನ್ನು ಅರಿತುಕೊಂಡರು. ಆ ಮೂಲಕ ಸಮಾಜದಲ್ಲಿ ಗೌರವ ಗಳಿಸುವುದಕ್ಕೆ ಮನೆಯ ನಾಲ್ಕು ಗೋಡೆಗಳಿಂದ ಆಚೆ ಬಂದು ಕೆಲಸ ಮಾಡಬೇಕಾಗುತ್ತದೆ ಎನ್ನುವುದು ಅವರಿಗೆ ಅರಿವಿಗೆ ಬಂದಿತ್ತು.
ಯಶಸ್ವಿ ಉದ್ಯಮಿ ಮಹಿಳೆ ಹೇಳುವುದೇನು?
"ನಾನು ಮನೆಯಿಂದಲೇ ವ್ಯಾಪಾರ ನಡೆಸುತ್ತಿದ್ದೇನೆ ಎಂಬ ಕಾರಣಕ್ಕಾಗಿ, ಜನರು ನನ್ನನ್ನು ಉದ್ಯಮಿ ಎಂದು ಪರಿಗಣಿಸಲಿಲ್ಲ. ಆಗ ನಾನು ನಿರಾಶೆಗೊಂಡಿದ್ದು, ಸಮಾಜದಲ್ಲಿ ಇತರ ಕೆಲಸ ಮಾಡುವ ಮಹಿಳೆಯರಂತೆ ಅದೇ ಗೌರವವನ್ನು ಗಳಿಸಲು ಬಯಸುತ್ತೇನೆ," ಎಂದು ಲಲಿತಾ ಪಟೇಲ್ ಅವರು ಬೆಟರ್ ಇಂಡಿಯಾಗೆ ತಿಳಿಸಿದ್ದರು.
ಆದರೆ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಸುವುದಕ್ಕೆ ಹೂಡಲು ಅವರ ಬಳಿ ಬಂಡವಾಳ ಇರಲಿಲ್ಲ. ಹೀಗಿರುವಾಗ 2019ರಲ್ಲಿ ಒಂದು ದಿನ, ಅವರು ಬ್ರಿಟಾನಿಯಾ ಮೇರಿ ಗೋಲ್ಡ್‌ನ ಮೈ ಸ್ಟಾರ್ಟ್-ಅಪ್ ಸ್ಪರ್ಧೆಯ ಜಾಹೀರಾತನ್ನು ನೋಡಿದ್ದರು. ಅದರಲ್ಲಿ ಅವರು ಗೆಲುವು ಸಾಧಿಸಿದ್ದು, ತೆರಿಗೆ ಕಡಿತದ ನಂತರ ಕೈಗೆ 7 ಲಕ್ಷ ರೂಪಾಯಿ ಬಂದಿತ್ತು. ಅದರಲ್ಲಿ 6 ಲಕ್ಷ ರೂಪಾಯಿಯನ್ನು ರೆಸ್ಟೋರೆಂಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
2019ರಲ್ಲಿ ರೆಸ್ಟೋರೆಂಟ್ ಆರಂಭ
ಅದರಂತೆ 2019ರ ಜುಲೈ 9ರಂದು ಸಣ್ಣ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದರು. ಆ ದಿನ ಅವರು 1,200ರೂ. ಗಳಿಸಿದ್ದರು. ಅಂದಿನಿಂದ ನಿಧಾನಕ್ಕೆ ಆದಾಯವು ಹೆಚ್ಚುತ್ತಾ ಹೋಗಿದ್ದು, 2020ರ ಕೊರೊನಾ ಲಾಕ್‌ಡೌನ್ ನಡುವೆಯೂ ಉದ್ಯಮ ಎತ್ತರಕ್ಕೆ ಬೆಳೆದಿದೆ. ಪ್ರಸ್ತುತ ವಾರ್ಷಿಕ ಒಂದು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 6-7 ಲಕ್ಷ ರೂಪಾಯಿ ವ್ಯಾಪಾರ ಮಾಡುತ್ತಿದ್ದಾರೆ.
ಈಗ ಪತಿ ಕೂಡ ಲಲಿತಾ ಅವರನ್ನು ಬೆಂಬಲಿಸುವುದಕ್ಕೆ ತಮ್ಮ ಕೆಲಸವನ್ನು ಕೂಡ ತೊರೆದಿದ್ದಾರೆ. ತಮ್ಮ ಉದ್ಯಮಕ್ಕೆ ಈಗ ಪೂರ್ಣಾವಧಿಯ 10 ಉದ್ಯೋಗಿಗಳನ್ನು ಕೂಡ ನೇಮಿಸಿಕೊಂಡಿದ್ದಾರೆ. ಘರಾಚಿ ಆಥ್ವಾನ್ ಮೆನುವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳನ್ನು ಒಳಗೊಂಡಿದೆ. ಇದು ರೋಟಿ, ತರಕಾರಿಗಳು, ದಾಲ್ ಮತ್ತು ಸಿಹಿ ಖಾದ್ಯವನ್ನು ಒಳಗೊಂಡಿದೆ. ಲಲಿತಾ ಅವರು ದಾಲ್ ಖಿಚಡಿಯನ್ನು ಕೂಡ ನೀಡುತ್ತಿದ್ದು, ಫುಡ್‌ಗೆ 90ರಿಂದ 180ರೂ.ವರೆಗೆ ದರ ನಿಗದಿಪಡಿಸಲಾಗಿದೆ.


Click it and Unblock the Notifications