ಬಿಜಿನೆಸ್ ಮಾಡಬೇಕು ಎಂಬುದು ಎಂಥವರ ಕಣ್ಣಲ್ಲೂ ಸ್ವತಂತ್ರ ಚಿಂತನೆಯಂತೆ ಕಾಣುತ್ತದೆ. ಜತೆಗೆ ಯಶೋಗಾಥೆಗಳನ್ನು ಕೇಳಿ ರೂಢಿ ಇರುತ್ತದೆ ಆದ್ದರಿಂದ ಬಿಜಿನೆಸ್ ಯಾವುದು, ಅದರ ರಿಸ್ಕ್ ಗಳು ಏನು ಎಂಬುದನ್ನು ವಾಸ್ತವ ನೆಲೆಗಟ್ಟಿನಲ್ಲಿ ಆಲೋಚಿಸುವುದನ್ನೇ ಬಿಟ್ಟು, ಲಾಭವನ್ನು ಲೆಕ್ಕ ಹಾಕುವುದರಲ್ಲಿ ಬಿಜಿ ಆಗಿಬಿಡುತ್ತೇವೆ.
ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ. ನೀವು ಬಿಜಿನೆಸ್ ಆರಂಭಿಸುವ ಉದ್ದೇಶ ಇರುವುದಾದರೆ ಈ ಅಂಶಗಳನ್ನು ಗಮನಿಸಿ. ಆ ನಂತರ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಕಾಲ ಮಿಂಚಿ ಹೋದ ಮೇಲೆ ಚಿಂತಿಸುವಂತಾಗುತ್ತದೆ.
ಮಾರ್ಕೆಟ್ ನಲ್ಲಿ ಎಷ್ಟು ಸಮಯ ಬೇಡಿಕೆ ಇರುತ್ತದೆ
ಯಾವುದೇ ವ್ಯಾಪಾರ ಶುರು ಮಾಡುವ ಮುನ್ನ ಅದರ ಭವಿಷ್ಯ ಎಷ್ಟು ಕಾಲ ಇರಬಹುದು ಎಂಬುದನ್ನು ಯೋಚಿಸಬೇಕು. ಹಾಗೇ ಯೋಚನೆ ಮಾಡಿ ನೋಡಿ. ಎಸ್ ಟಿಡಿ ಬೂತ್, ಕಾಯಿನ್ ಬಾಕ್ಸ್, ವಿಸಿಡಿ/ಡಿವಿಡಿ ಪ್ಲೇಯರ್ ಗಳ ಬಾಡಿಗೆ ನೀಡುವ ವ್ಯವಹಾರ, ಸೈಬರ್ ಸೆಂಟರ್ ಇವೆಲ್ಲ ಒಂದು ಕಾಲಕ್ಕೆ ಆಕರ್ಷಕವಾಗಿ ಕಾಣುತ್ತಿದ್ದ ಬಿಜಿನೆಸ್. ಆದರೆ ಈಗ ನೋಡಬೇಕು ಅಂದರೂ ಸಿಗುವುದು ಕಷ್ಟ. ಏಕೆಂದರೆ ಅವುಗಳಿಗೆ ಪರ್ಯಾಯ ಬಂದುಬಿಟ್ಟಿತು. ಇದಕ್ಕೆ ಮತ್ತೊಂದು ಉದಾಹರಣೆ ಅಂದರೆ ಫೋಟೋ ಸ್ಟುಡಿಯೋಗಳು. ಈಚೆಗೆ ಫೋಟೋ ಸ್ಟುಡಿಯೋಗಳ ಸಂಖ್ಯೆಯಲ್ಲೂ ಕಡಿಮೆ ಆಗುತ್ತಿದೆ. ದೊಡ್ಡ ಮಟ್ಟದ ಬಂಡವಾಳ ಹಾಕಿ, ಅದಕ್ಕಾಗಿಯೇ ಸಾಲ ತಂದವರು ಈಗ ಚಿಂತಿಸುವಂತಾಗಿದೆ. ಆದ್ದರಿಂದ ಶುರು ಮಾಡಬೇಕು ಅಂದುಕೊಂಡ ಬಿಜಿನೆಸ್ ಎಷ್ಟು ಸಮಯ ಮಾರ್ಕೆಟ್ ನಲ್ಲಿ ಬೇಡಿಕೆಯಲ್ಲಿ ಇರುತ್ತದೆ ಎಂಬುದನ್ನು ಮುಂಚಿತವಾಗಿ ತೀರ್ಮಾನಿಸಿ.
ವ್ಯಾಪಾರ ಶುರು ಮಾಡುವ ಸ್ಥಳ ಬಹಳ ಮುಖ್ಯ
ಯಾವ ವ್ಯಾಪಾರ ಮಾಡುವುದು ಎಂದು ನಿಶ್ಚಯಿಸಿಕೊಂಡ ಮೇಲೆ ಅದನ್ನು ನಡೆಸಲು ಆಯ್ಕೆ ಮಾಡಿಕೊಳ್ಳುವ ಸ್ಥಳ ಬಹಳ ಮುಖ್ಯ. ಮನೆಗೆ ಹತ್ತಿರ ಇದೆ ಅಂತಲೋ, ಬಾಡಿಗೆ ಕಡಿಮೆ ಇದೆ ಅಂತಲೋ, ಸ್ನೇಹಿತರು ಸುತ್ತಮುತ್ತ ಇದ್ದಾರೆ ಎಂಬ ಕಾರಣಕ್ಕೋ ಅಂಥ ಸ್ಥಳದಲ್ಲಿ ವ್ಯಾಪಾರ ಶುರು ಮಾಡುವ ಬದಲು ಎಲ್ಲಿ ಅಗತ್ಯ ಇರುತ್ತದೋ ಅಲ್ಲೇ ವ್ಯಾಪಾರ ಶುರು ಮಾಡಿ. ಸ್ಟೇಷನರಿ ಅಂಗಡಿ ಮಾಡುವಂತಿದ್ದರೆ ಶಾಲೆ- ಕಾಲೇಜಿನ ಹತ್ತಿರವೇ ಮಾಡಿದರೆ ಉತ್ತಮ. ಹೂವಿನ ಅಂಗಡಿಯನ್ನು ದೇವಸ್ಥಾನದ ಹತ್ತಿರ ಇಟ್ಟರೆ ಸರಿ. ಅದೇ ಉಲ್ಟಾ ಆದರೆ ಏನು ಆಗಬಹುದು ನೀವೇ ಯೋಚಿಸಿ. ಮೇಲ್ನೋಟಕ್ಕೆ ಇವೆಲ್ಲ ಸರಳ ಸಂಗತಿಗಳು ಅನಿಸಬಹುದು. ಆದರೆ ತಪ್ಪು ತೀರ್ಮಾನಕ್ಕೆ ದೊಡ್ಡ ಬೆಲೆ ಕೊಡಬೇಕಾಗುತ್ತದೆ.
ದೀಪಾವಳಿಯಲ್ಲಿ ಗಣೇಶ ಮಾರಬಾರದು
ಟ್ರೆಂಡ್ ಅರ್ಥ ಮಾಡಿಕೊಂಡು ಅದರಂತೆ ವ್ಯಾಪಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಫ್ಲೆಕ್ಸಿಬಲ್ ಆಗಿರಬೇಕು. ದೀಪಾವಳಿಯಲ್ಲಿ ಗಣೇಶ ಮೂರ್ತಿಗಳನ್ನು ಮಾರಿದರೆ ಕೊಳ್ಳುವವರು ಯಾರು? ಗಣೇಶನ ಹಬ್ಬದಲ್ಲಿ ಆಕಾಶಬುಟ್ಟಿಯನ್ನು ಮಾರಲು ಹೊರಟರೆ ಹೇಗೆ? ಆದ್ದರಿಂದ ಬೇಡಿಕೆ ಸಮಯದಲ್ಲಿ ಆಯಾ ಪದಾರ್ಥಗಳನ್ನು ಮಾರಾಟ ಮಾಡುವಷ್ಟು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಬಿಜಿನೆಸ್ ಇರಬೇಕು. ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ ತನಕ ಮಾತ್ರ ಎಂದು ಎಷ್ಟು ಅದ್ಭುತವಾಗಿ ಮಸಾಲೆಪುರಿ, ಪಾನಿಪೂರಿ ಮಾಡಿದರೂ ಏನು ಪ್ರಯೋಜನ? ಆದ್ದರಿಂದ ಟ್ರೆಂಡ್, ಟೈಮ್ ಬಗ್ಗೆ ಕೂಡ ಗಮನ ಇರಲಿ.
ಸ್ವಭಾವ, ಆಸಕ್ತಿ, ವ್ಯಕ್ತಿತ್ವಕ್ಕೆ ಪೂರಕ ಬಿಜಿನೆಸ್
ಆಯಾ ವ್ಯಕ್ತಿಗೆ ಒಂದು ಸ್ವಭಾವ, ವ್ಯಕ್ತಿತ್ವ, ನಂಬಿಕೆ, ಸಿದ್ಧಾಂತ, ಆಚರಣೆ, ಆಸಕ್ತಿ, ಆಸೆ ಇರುತ್ತದೆ. ಮಾಡುವ ವ್ಯಾಪಾರವು ಅದಕ್ಕೆ ಪೂರಕವಾಗಿದ್ದರೆ ಆತ್ಮಪೂರ್ವಕವಾಗಿ ತೊಡಗಿಕೊಳ್ಳಬಹುದು. ತದ್ವಿರುದ್ಧವಾದ ಗುಣ- ಸ್ವಭಾವದ ವ್ಯಾಪಾರ ಶುರು ಮಾಡಿದರೆ ಅದಕ್ಕೆ ಹೊಂದಿಕೊಳ್ಳುವ ಮನಸ್ತತ್ವವಾದರೂ ಇರಬೇಕು. ಜನರ ಜತೆ ಹೆಚ್ಚು ಬೆರೆಯದ, ಸಂಕೋಚ ಸ್ವಭಾವದ, ಯಾರನ್ನೂ ಏನೂ ಕೇಳದ ವ್ಯಕ್ತಿ ಇನ್ಷೂರೆನ್ಸ್ ಮಾರಾಟಕ್ಕೆ ಹೊರಟರೆ ಬಹಳ ಕಷ್ಟ. ಇನ್ನು ಶತಾಯಗತಾಯ ಬೆಳಗ್ಗೆ ಬೇಗ ಏಳಲು ಸಾಧ್ಯವಾಗಲ್ಲ ಅನ್ನುವಂಥವರು ಹಾಲು ಮಾರುವುದಕ್ಕೋ ಅಥವಾ ಬೆಳಗಿನ ದಿನಪತ್ರಿಕೆ ಮನೆಗಳಿಗೆ ತಲುಪಿಸುವುದಕ್ಕೋ ಹೊರಟರೆ ಯಶಸ್ಸು ಕಾಣಲು ಕಷ್ಟಸಾಧ್ಯ. ಆದರೆ ಮೊದಲೇ ಹೇಳಿದಂತೆ ಸ್ವಭಾವವನ್ನು ಬದಲಿಸಿಕೊಳ್ಳಬೇಕು.
ಒಂದೇ ಸಲಕ್ಕೆ ಖರ್ಚು- ವೆಚ್ಚಗಳನ್ನು ಮೈ ಮೇಲೆ ಎಳೆದುಕೊಳ್ಳಬಾರದು
ಯಾವುದೇ ಬಿಜಿನೆಸ್ ನಲ್ಲಿ ಆರಂಭದ ಒಂದೆರಡು ವರ್ಷ ಬಹಳ ಸವಾಲು ಇರುತ್ತದೆ. ಆಗ ಹೆಚ್ಚಿನ ಲಾಭಕ್ಕಿಂತ ಬಿಜಿನೆಸ್ ನಡೆಸಿಕೊಂಡು ಹೋಗುವುದೇ ಸವಾಲಾಗಿರುತ್ತದೆ. ಆಗ ಹಣಕಾಸಿನ ಮುಗ್ಗಟ್ಟು ಬರುವುದು ಸಾಮಾನ್ಯ. ಆದ್ದರಿಂದ ಅಗತ್ಯ ಇಲ್ಲದಿದ್ದರೂ ದುಬಾರಿ ಬಾಡಿಗೆ, ಅವಶ್ಯಕತೆ ಮೀರಿದ ಪೀಠೋಪಕರಣಗಳ ಖರೀದಿ, ಸಂಬಳಕ್ಕೆ ತುಂಬ ಜನರ ನೇಮಕ ಮಾಡಿಕೊಳ್ಳುವುದು ಬುದ್ಧಿವಂತಿಕೆ ಇಲ್ಲ. ವ್ಯಾಪಾರದ ಅಗತ್ಯ ಮತ್ತು ಬೆಳವಣಿಗೆಯ ಅಗತ್ಯ ನೋಡಿಕೊಂಡು ಮುಂದುವರಿಯುತ್ತಾ ಹೋಗಬೇಕು ವಿನಾ ಒಂದೇ ಸಲಕ್ಕೆ ಖರ್ಚು- ವೆಚ್ಚಗಳನ್ನು ಮೈ ಮೇಲೆ ಎಳೆದುಕೊಳ್ಳಬಾರದು.
SWOT ಅನಾಲಿಸಿಸ್ ಮಾಡಬೇಕು
ಯಾವುದೇ ಬಿಜಿನೆಸ್ ಆರಂಭಿಸುವ ಮುನ್ನ. ಆದರ SWOT ಅನಾಲಿಸಿಸ್ ಮಾಡಬೇಕು. ಹಾಗಂದರೆ ಆ ವ್ಯಾಪಾರದ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಹಾಗೂ ಅಪಾಯ ಏನು ಎಂಬುದರ ವಿಶ್ಲೇಷಣೆ. SWOT ಅಂದರೆ S- Strength, W- Weakness, O- Opportunity ಹಾಗೂ T- Threat. ಇಷ್ಟೆಲ್ಲ ಆದ ಮೇಲೆ. ಸಂಬಂಧಪಟ್ಟ ವ್ಯಾಪಾರದಲ್ಲಿ ಈಗಾಗಲೇ ಯಶಸ್ಸು ಪಡೆದವರ ಮಾರ್ಗದರ್ಶನ ಪಡೆಯುವುದು ಉತ್ತಮ. ಸಾಧ್ಯವಾದರೆ ಅಂಥಲ್ಲಿ ಕೆಲ ಸಮಯವಾದರೂ ಉದ್ಯೋಗ ಮಾಡಿದರೆ ಮತ್ತೂ ಉತ್ತಮ.


Click it and Unblock the Notifications