ಬೆಂಗಳೂರು, ಜುಲೈ 26: ಬ್ಯಾಂಕ್ ನಿಂದ ಕರೆ ಮಾಡಿ ನಿಮಗೆ ಸಾಲ ಬೇಕಾ ಎಂದು ಕೇಳಿದಾಗ ಏಕಾಏಕಿ ಒಪ್ಪಿಕೊಂಡರೆ ಮುಂದೆ ಸಂಕಷ್ಟ ಪಡಬೇಕಾಗಿ ಬರಬಹುದು. ಹಿಂದೆ ಮುಂದೆ ನೋಡದೆ ಡಾಕ್ಯೂಮೆಂಟ್ ಗಳಿಗೆ ಸಹಿ ಮಾಡಿದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರಬಹುದು.
ಲೋನ್ ಪ್ರೋಸೆಸಿಂಗ್ ಫೀ, ಡಾಕ್ಯುಮೆಂಟೇಶನ್ ಶುಲ್ಕಗಳ ಬಗ್ಗೆ ನಿಮಗೆ ಗೊತ್ತಿರಬೇಕು. ಕಾರ್ ಲೋನ್, ಹೋಮ್ ಲೋನ್ ಅಥವಾ ಯಾವುದೇ ಪರ್ಸನಲ್ ಲೋನ್ ಆಗಿರಲಿ. ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಅನ್ನು ನೀವು ಓದಲೇ ಬೇಕು. ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಅನ್ನು ಓದುವುದು ಬಿಡಿ, ಹಾಗೆಂದರೇನು ಎಂದೇ ಹಲವು ಜನರಿಗೆ ಗೊತ್ತಿರೋದಿಲ್ಲ.

ಸಾಲ ಸುಲಭವಾಗಿ ಸಿಗುತ್ತಿರಬಹುದು. ಆದರೆ, ಅದನ್ನು ರೀಪೇ ಮಾಡುವುದು ಅಷ್ಟು ಸುಲಭವಾಗಿರೋದಿಲ್ಲ. ಬಡ್ಡಿ ದರ ಹೆಚ್ಚಿದ್ದರೆ ರಿಪೇಮೆಂಟ್ ಮಾಡುವ ಕಷ್ಟವೂ ಹೆಚ್ಚಾಗುತ್ತದೆ. ಬರಿ ಬಡ್ಡಿಯಷ್ಟೇ ಅಲ್ಲ, ಇತರ ಹಲವು ಫೀಗಳೂ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ವಿಷಯದ ಬಗ್ಗೆ ನಿಮಗೆ ತಿಳಿವಳಿಕೆಯೇ ಇರೋದಿಲ್ಲ. ಹೀಗಾಗಿ, ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ಇಂದ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದನ್ನು ಗಮನವಿಟ್ಟು ಓದಿಕೊಳ್ಳೋದು ಮುಖ್ಯವಾಗಿರುತ್ತೆ.
ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಎಂದರೇನು?
ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಅಥವಾ ಕೆಎಫ್‌ಎಸ್ ಎಂದರೆ ಒಂದು ಸಣ್ಣ ಡಾಕ್ಯುಮೆಂಟ್. ಇದರಲ್ಲಿ ಸಾಲಕ್ಕೆ ಹಾಕಲಾಗುವ ಎಲ್ಲ ರೀತಿಯ ಶುಲ್ಕಗಳ ವಿವರವೂ ಇರುತ್ತದೆ. ಸಾಲ ತೆಗೆದುಕೊಳ್ಳುವಾಗ, ಹಲವು ಪೇಜ್‌ಗಳಿರುವ ಒಂದು ಡಾಕ್ಯುಮೆಂಟ್ ಅನ್ನು ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ನಿಮಗೆ ಕೊಡುತ್ತದೆ. ಆದರೆ, ನಿಮಗೆ ಅದನ್ನು ಓದುವುದಕ್ಕೆ ತುಂಬಾ ಬೇಸರ ಬರುತ್ತದೆ ಎಂಬ ಕಾರಣಕ್ಕೆ ನೀವು ಓದದೇ ಬಿಟ್ಟಿರುತ್ತೀರಿ. ಆದರೆ, ಇಂಥ ಸಮಯದಲ್ಲಿ ಈ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಪ್ರಾಮುಖ್ಯತೆ ಪಡೆಯುತ್ತದೆ. ಇದರಲ್ಲಿ ಒಂದೇ ಪೇಜ್ ಇರುತ್ತದೆ. ಸುಲಭವಾಗಿ ಇದನ್ನು ಓದಬಹುದು. ಇದರಲ್ಲಿ ಎಲ್ಲ ಚಾರ್ಜ್‌ಗಳು ಮತ್ತು ಫೀಗಳ ಮಾಹಿತಿ ಇರುತ್ತವೆ. ಇದರಲ್ಲಿ ಬಡ್ಡಿ ದರ, ಸಾಲದ ಮೊತ್ತ, ಸಾಲದ ಅವಧಿ, ಪ್ರೋಸೆಸಿಂಗ್ ಫೀ, ಫೋರ್‌ಕ್ಲೋಶರ್ ಚಾರ್ಜ್‌ಗಳು, ಲೇಟ್ ಪೇಮೆಂಟ್ ಫೀ ಸೇರಿದಂತೆ ಎಲ್ಲ ಚಾರ್ಜ್ ಗಳ ವಿವರ ಇರುತ್ತದೆ.
ಈ ಡಾಕ್ಯೂಮೆಂಟ್ ನ್ನು ಸಾಲ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮೊದಲೇ ಕೆಲವು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಕೊಡಬೇಕು. ಆದರೆ, ಎಲ್ಲ ಬ್ಯಾಂಕ್‌ಗಳೂ ಇದನ್ನು ಕೊಡುತ್ತಿರಲಿಲ್ಲ. ಇದೇ ಕಾರಣಕ್ಕೆ ಆರ್‌ಬಿಐ ಇತ್ತೀಚೆಗೆ ಒಂದು ಪ್ರಮುಖ ಕ್ರಮ ತೆಗೆದುಕೊಂಡಿದೆ. ಸಾಲಗಾರರಿಗೆ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಕೊಡುವುದು ಕಡ್ಡಾಯ ಎಂದು ಆರ್‌ಬಿಐ ಹೇಳಿದೆ. ಇಲ್ಲಿಯವರೆಗೆ ಡಿಜಿಟಲ್ ಸಾಲ ಮತ್ತು ಸಣ್ಣ ಸಾಲವನ್ನು ಕೊಡುವ ಸಂಸ್ಥೆಗಳಿಗೆ ಮಾತ್ರ ಇದು ಕಡ್ಡಾಯವಾಗಿತ್ತು. ಆದರೆ, ಈ ಎಲ್ಲ ಸಾಲ ನೀಡುವ ಸಂಸ್ಥೆಗಳು ಮತ್ತು ಎನ್‌ಬಿಎಫ್‌ಸಿಗಳು ಈ ಸ್ಟೇಟ್‌ಮೆಂಟ್ ಕೊಡಬೇಕಾಗಿದೆ.
ಬಹುತೇಕ ಗ್ರಾಹಕರಿಗೆ ಸಾಲದ ವೆಚ್ಚವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಡ್ಡಿ ದರವನ್ನು ಸಾಮಾನ್ಯವಾಗಿ ಸ್ಪಷ್ಟವಾಗಿ ಹೇಳಲಾಗುತ್ತದೆ. ಆದರೆ, ಇತರ ಫೀಗಳು ಸಾಮಾನ್ಯವಾಗಿ ಒಟ್ಟಾರೆ ವೆಚ್ಚದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆಯಾದರೂ, ಇದನ್ನು ಸ್ಪಷ್ಟವಾಗಿ ಹೇಳಲಾಗಿರುವುದಿಲ್ಲ. ಇದರಿಂದಾಗಿ, ಸಣ್ಣ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳುವ ಸಾಲಗಾರರಿಗೆ ಬೇರೆ ಲೋನ್‌ಗೂ ಇದಕ್ಕೂ ಯಾವ ವ್ಯತ್ಯಾಸ ಇದೆ ಎಂದು ತಿಳಿದುಕೊಳ್ಳಲು ಮತ್ತು ಅದರ ನಿಜವಾದ ವೆಚ್ಚ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಫೀ, ಚಾರ್ಜ್‌ಗಳು ಮತ್ತು ಪೆನಾಲ್ಟಿಗಳಿಗೆ ಸಂಬಂಧಿಸಿದ ಹಲವು ಸೆಕ್ಷನ್‌ಗಳು ಲೋನ್ ಅಗ್ರೀಮೆಂಟ್‌ಗಳಲ್ಲಿ ಮರೆ ಮಾಡಲಾಗಿರುತ್ತದೆ ಎಂದು ಪರಿಣಿತರು ಹೇಳುತ್ತಾರೆ. ಕೆಎಫ್‌ಎಸ್ ಅಂದರೆ ಕೀ ಫ್ಯಾಕ್ಟ್‌ಶೀಟ್ ಈ ಎಲ್ಲ ಮಾಹಿತಿಯ ಸಾರಾಂಶವನ್ನು ಸಾಲಗಾರರಿಗೆ ನೀಡುತ್ತದೆ. ಇದು ಸುಲಭವಾಗಿ ಅರ್ಥವಾಗಿ ಟೇಬಲ್ ಫಾರ್ಮ್ಯಾಟ್‌ನಲ್ಲಿರುತ್ತದೆ. ಹೀಗಾಗಿ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಕೊಡಿ ಎಂದು ಕೇಳುವುದು ಅತ್ಯಂತ ಮುಖ್ಯ. ಆರ್‌ಬಿಐ ಆದೇಶದ ನಂತರ ಕೆಎಫ್‌ಎಸ್ ಕೊಡುವುದು ಕಡ್ಡಾಯವಾಗಿದ್ದರೂ, ಕೆಲವು ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ಇದನ್ನು ಕೊಡಲು ಹಿಂದೆಮುಂದೆಡ ನೋಡಬಹುದು ಅಥವಾ ನೆಪ ಹೇಳಿ ತಪ್ಪಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಸಾಲಗಾರರು ಏನು ಮಾಡಬೇಕು ಎಂಬುದನ್ನೂ ತಿಳಿದುಕೊಂಡಿರಬೇಕು.
ಹೀಗಾಗಿ, ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಬೇಕು ಎಂದು ನೀವು ಕೇಳಬೇಕು, ಅದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಈ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್‌ನಲ್ಲಿ ಎಲ್ಲ ವಿಧದ ಶುಲ್ಕಗಳೂ ಇರುತ್ತವೆ. ನಿಮಗೆ ಸಾಲದ ಎಲ್ಲ ವಿವರಗಳೂ ಸರಿಯಾಗಿ ಗೊತ್ತಿದ್ದರೆ, ಮರುಪಾವತಿ ಮಾಡುವುದು ತುಂಬಾ ಸುಲಭವಾಗುತ್ತದೆ. ನಿಮ್ಮ ಹಣದ ಜವಾಬ್ದಾರಿ ನಿಮ್ಮದೆ ಆಗಿರುತ್ತದೆ.


Click it and Unblock the Notifications