ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ. ಹಾಗೆಯೇ 000 ರೂಪಾಯಿ ನೋಟನ್ನು ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆದೇಶಿಸಿದೆ. ಆದರೆ ಈ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಮುಂದುವರಿಯಲಿದೆ.
ಶುಕ್ರವಾರ ಈ ಬಗ್ಗೆ ಆರ್‌ಬಿಐ ಹೇಳಿಕೆಯನ್ನು ನೀಡಿದೆ. "ಭಾರತೀಯ ರಿಸರ್ವ್ ಬ್ಯಾಂಕ್ 'ಕ್ಲೀನ್ ನೋಟ್ ಪಾಲಿಸಿ'ಯ ಅನುಸಾರವಾಗಿ, 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಆದರೆ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ," ಎಂದು ತಿಳಿಸಿದೆ. ಹಾಗಾದರೆ ನೋಟು ಬದಲಾವಣೆ ಮಾಡುವುದು ಎಲ್ಲಿ, ಯಾವಾಗ, ಹೇಗೆ ಎಂದು ತಿಳಿಯೋಣ ಮುಂದೆ ಓದಿ...

2000 ರೂಪಾಯಿ ನೋಟು ಬದಲಾವಣೆ ಎಲ್ಲಿ, ಹೇಗೆ ಮಾಡುವುದು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023ರಂದು ಹೊರಡಿಸಿದ ಸುತ್ತೋಲೆಯಲ್ಲಿ, "ಸೆಪ್ಟೆಂಬರ್ 30, 2023ರವರೆಗೆ ಸಾರ್ವಜನಿಕರು 2000 ರೂಪಾಯಿ ನೋಟನ್ನು ಜಮೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ," ಎಂದು ಉಲ್ಲೇಖಿಸಲಾಗಿದೆ.
"ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಖಾತೆಗಳಿಗೆ ನಾವು 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ಜಮೆ ಮಾಡಬಹುದಾಗಿದೆ. ನಾವು ಸಾಮಾನ್ಯ ರೀತಿಯಲ್ಲಿಯೇ ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ, ನಾವು ಯಾವಾಗಲೂ ಹೇಗೆ ನಗದನ್ನು ನಮ್ಮ ಖಾತೆಗೆ ಜಮೆ ಮಾಡುತ್ತೇವೆಯೋ ಹಾಗೆಯೆ ಜಮೆ ಮಾಡಬಹುದಾಗಿದೆ," ಎಂದು ಆರ್‌ಬಿಐ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಒಂದು ಬಾರಿಗೆ ಎಷ್ಟು ನೋಟುಗಳನ್ನು ಬದಲಾಯಿಸಬಹುದು?
ಇನ್ನು ಜನರು ತಮ್ಮ ಖಾತೆಯಿರುವ ಬ್ಯಾಂಕ್‌ನ ಬ್ರ್ಯಾಂಚ್‌ಗಳಲ್ಲಿ 2000 ರೂಪಾಯಿ ಬ್ಯಾಂಕ್ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ಬ್ಯಾಂಕ್‌ಗಳಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿಗೆ 20,000 ರೂಪಾಯಿ ಮಿತಿಯವರೆಗೆ 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.
ಇನ್ನು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು, ಕಾರ್ಯಾಚರಣೆ ವೇಳೆ ಅನುಕೂಲಕರ ಸ್ಥಿತಿ ಸೃಷ್ಟಿ ಮಾಡಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ನಿರ್ಬಂಧ ಜಾರಿ ಮಾಡಲಾಗಿದೆ. ವ್ಯಾಪಾರ ಸಂಸ್ಥೆಗಳು ಕೂಡಾ 2000 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬಹುದು. ಇದೇ ರೀತಿ ವಿನಿಮಿಯ ಮಿತಿಗೆ ಅನುಗುಣವಾಗಿ ನೋಟು ಬದಲಾವಣೆ ಮಾಡಿಕೊಳ್ಳಬಹುದು.
ನೋಟು ಬದಲಾವಣೆ ಆರಂಭ, ಕೊನೆಯ ದಿನಾಂಕ ಯಾವಾಗ ?
ನಾವು ನಮ್ಮ ಬ್ಯಾಂಕ್‌ಗಳಲ್ಲಿ ಅಥವಾ ಬ್ರ್ಯಾಂಚ್‌ಗಳಲ್ಲಿ ಮೇ 23, 2023ರಿಂದ ಅಂದರೆ ಮಂಗಳವಾರದಿಂದ 2000 ರೂಪಾಯಿ ನೋಟು ಬದಲಾವಣೆ ಮಾಡಲು ಆರಂಭ ಮಾಡಬಹುದಾಗಿದೆ. "ಬ್ಯಾಂಕುಗಳಿಗೆ, ಬ್ಯಾಂಕ್‌ನ ಸಿಬ್ಬಂದಿಗಳಿಗೆ ಎಲ್ಲ ತಯಾರಿ ಮಾಡಲು ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಜನರು ಬ್ಯಾಂಕು ಅಥವಾ ಬ್ರ್ಯಾಂಚ್‌ಗಳಲ್ಲಿ ಮಂಗಳವಾರದಿಂದ 2000 ರೂಪಾಯಿಯ ನೋಟುಗಳನ್ನು ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಆರಂಭ ಮಾಡಬಹುದಾಗಿದೆ," ಎಂದು ಆರ್‌ಬಿಐ ಹೇಳಿದೆ.
"2000 ರೂಪಾಯಿ ನೋಟು ಡೆಪಾಸಿಟ್ ಪ್ರಕ್ರಿಯೆ ಸಾಮಾನ್ಯ ರೀತಿಯಲ್ಲಿಯೇ ನಡೆಯಲಿದೆ," ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಒತ್ತಿ ಹೇಳಿದೆ. 2000 ರೂಪಾಯಿಯ ನೋಟುಗಳನ್ನು ಜನರು ಸೆಪ್ಟೆಂಬರ್ 30, 2023ರ ಒಳಗಾಗಿ ಡೆಪಾಸಿಟ್ ಮಾಡುವಂತೆ ಕೇಂದ್ರ ಬ್ಯಾಂಕ್ ಜನರಿಗೆ ತಿಳಿಸಿದೆ. ಅಂದರೆ 2000 ರೂಪಾಯಿ ನೋಟು ಜಮೆ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ.


Click it and Unblock the Notifications