ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಭಾರತೀಯ ಬಿಲಿಯನೇರ್, ಗಣಿ ಉದ್ಯಮಿ ಹರ್ಪಾಲ್ ರಾಂಧವಾರ ಖಾಸಗಿ ವಿಮಾನ ಪತನಗೊಂಡು ಉದ್ಯಮಿ ಸೇರಿ ಒಟ್ಟು ಆರು ಮಂದಿ ಅಸುನೀಗಿದ್ದಾರೆ. ಗಣಿ ಉದ್ಯಮಿ ಹರ್ಪಾಲ್ ಅವರ 22 ವರ್ಷದ ಮಗ ಅಮೇರ್ ರಾಂಧವಾ ಕೂಡಾ ಈ ಭೀಕರ ವಿಮಾನ ಅಪಘಾತದಲ್ಲಿ ನಿಧನಗೊಂಡಿದ್ದಾರೆ.
"ಜಿಂಬಾಬ್ವೆ ರಿಪಬ್ಲಿಕ್ ಪೊಲೀಸರು ಸೆಪ್ಟೆಂಬರ್ 29 ರಂದು ಬೆಳಿಗ್ಗೆ 7.30 ರಿಂದ 8 ರ ನಡುವೆ ಸಂಭವಿಸಿದ ವಿಮಾನ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ," ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಹೆಸರನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಆದರೆ ರಾಂಧವಾ ಅವರ ಸ್ನೇಹಿತರಾಗಿದ್ದ ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಹೋಪ್‌ವೆಲ್ ಚಿನೋನೊ, ಗಣಿ ಉದ್ಯಮಿ ಹರ್ಪಾಲ್ ರಾಂಧವಾರ ಸಾವನ್ನು ಖಚಿತಪಡಿಸಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿದೆ ಎಂಬ ಮಾಹಿತಿಯಿದೆ.
ತಾಂತ್ರಿಕ ದೋಷದಿಂದಾಗಿ ಜ್ವಾಮಹಂಡೆ ಪ್ರದೇಶದ ಪೀಟರ್ ಫಾರ್ಮ್‌ಗೆ ವಿಮಾನ ಬೀಳುವ ಮುನ್ನ ಗಾಳಿಯಲ್ಲಿಯೇ ಸ್ಪೋಟಗೊಂಡಿರಬಹುದು ಅಂದು ಅಂದಾಜಿಸಲಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ ಹರಾರೆಯಿಂದ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಿಯೊಝಿಮ್‌ನ ಭಾಗಶಃ ಒಡೆತನದಲ್ಲಿರುವ ಮುರೊವಾ ಡೈಮಂಡ್ಸ್ ಗಣಿ ಬಳಿ ಸಿಂಗಲ್ ಇಂಜಿನ್ ವಿಮಾನವು ಪತನಗೊಂಡಿದೆ. ಹಾಗಾದರೆ ರಾಂಧವಾ ಯಾರು ಎಂದು ತಿಳಿಯೋಣ ಮುಂದೆ ಓದಿ...
ಹರ್ಪಾಲ್ ರಾಂಧವಾ ಯಾರು?
* ಹರ್ಪಾಲ್ ರಾಂಧವಾ ಅವರು ಜಿಂಬಾಬ್ವೆಯಲ್ಲಿ ಚಿನ್ನ ಮತ್ತು ಕಲ್ಲಿದ್ದಲನ್ನು ಉತ್ಪಾದಿಸುವ ಜೊತೆಗೆ ನಿಕಲ್ ಮತ್ತು ತಾಮ್ರವನ್ನು ಸಂಸ್ಕರಿಸುವ ಸಂಪೂರ್ಣ ಸ್ವಾಮ್ಯದ ವೈವಿಧ್ಯಮಯ ಗಣಿಗಾರಿಕೆ ಕಂಪನಿಯಾದ ರಿಯೊಜಿಮ್‌ನ (RioZim) ಮಾಲೀಕರಾಗಿದ್ದರು. 60 ವರ್ಷದ ರಾಂಧವಾ 4 ಬಿಲಿಯನ್ ಡಾಲರ್ ಮೌಲ್ಯದ ಖಾಸಗಿ ಇಕ್ವಿಟಿ ಸಂಸ್ಥೆ ಜೆಮ್ (GEM) ಹೋಲ್ಡಿಂಗ್ಸ್ ಸಂಸ್ಥಾಪಕರಾಗಿದ್ದರು.
* ಹರ್ಪಾಲ್ ರಾಂಧವಾ ಜಿಂಬಾಬ್ವೆಯಲ್ಲಿ ಅಪಾರ ಚಿನ್ನ, ವಜ್ರ ಮತ್ತು ಕಲ್ಲಿದ್ದಲು ಗಣಿಗಾರಿಕೆಯಿಂದ ಹೆಸರುವಾಸಿಯಾಗಿದ್ದಾರೆ, ಹಾಗೆಯೇ ದೇಶದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
* ಹರ್ಪಾಲ್ ರಾಂಧವಾ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಜುಲೈ 1993 ರಲ್ಲಿ ಜೆಮ್ (GEM) ಗ್ರೂಪ್ ರಚನೆಯಾದ ನಂತರ 30 ವರ್ಷಗಳ ಕಾಲ ರಾಂಧವಾ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅದರ ಹೊರತಾಗಿ, ರಾಂಧವಾ 12 ವರ್ಷಗಳ ಕಾಲ ಸೇಬರ್ ಕ್ಯಾಪಿಟಲ್ ವರ್ಲ್ಡ್‌ವೈಡ್‌ನಲ್ಲಿ ಪಾಲುದಾರರಾಗಿದ್ದರು. ಮೂರು ವರ್ಷಗಳ ಕಾಲ ರಿಯಲ್ ಎಸ್ಟೇಟ್ ಸಂಸ್ಥೆ ಸಫನಾಡ್‌ನಲ್ಲಿ ಹಿರಿಯ ಸಲಹೆಗಾರರಾಗಿದ್ದರು.
* ಹರ್ಪಾಲ್ ರಾಂಧವಾ ತಮ್ಮ ಶಿಕ್ಷಣವನ್ನು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಇಂಗ್ಲೆಂಡ್ ಆಂಡ್ ವೇಲ್ಸ್‌ನಲ್ಲಿ (ಐಸಿಎಇಡಬ್ಲ್ಯೂ) ನಲ್ಲಿ ಮತ್ತು ಲಂಡನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ವರದಿಗಳ ಪ್ರಕಾರ, ರಾಂಧವಾ ತಮ್ಮ ಮುಂದಿನ ವ್ಯವಹಾರದ ಪ್ಲ್ಯಾನ್ ಮಾಡುತ್ತಿದ್ದರು. ಅವರ ಪತ್ನಿಯ ಹೆಸರು ಎಲ್ಲಿಯೂ ಬಹಿರಂಗವಾಗಿಲ್ಲ.
* ಬಿಲಿಯನೇರ್ ಹರ್ಪಾಲ್ ರಾಂಧವಾ ಮಗ, 22 ವರ್ಷದ ಅಮೇರ್ ಕಬೀರ್ ಸಿಂಗ್ ರಾಂಧವಾ ತರಬೇತಿ ಪಡೆದ ಪೈಲಟ್ ಆಗಿದ್ದು, ಶುಕ್ರವಾರ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇತರೆ ಮೃತರ ಹೆಸರುಗಳನ್ನು ಪೊಲೀಸರು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.


Click it and Unblock the Notifications