ರತನ್ ಟಾಟಾ ದೇಶದ ದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಜೆಆರ್ ಡಿ ನಂತರ ಇವರು ಟಾಟಾ ಗ್ರೂಪ್ ಆಫ್ ಕಂಪನಿಗಳನ್ನು ಮುನ್ನಡೆಸಿದರು. ರತನ್ ಟಾಟಾ ಅವರ ಬಗ್ಗೆ ಹೆಚ್ಚಿನ ಪರಿಚಯ ಹೇಳುವ ಅಗತ್ಯವಿಲ್ಲ. ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷರಾಗಿರುವ ರತನ್ ಟಾಟಾ ತಮ್ಮ ಲೋಕೋಪಕಾರಿ ಕೆಲಸದಿಂದಲೂ ಹೆಸರುವಾಸಿಯಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲದೇ ತಮ್ಮ ಸಮಾಜಮುಖಿ ಕೆಲಸಗಳಿಂದ ಭಾರತೀಯರ ಪ್ರೀತಿಯನ್ನು ಗಳಿಸಿದ್ದಾರೆ.
ಡಿಸೆಂಬರ್ 28, 1937ರಲ್ಲಿ ಜನಿಸಿದ ರತನ್ ನವಲ್ ಟಾಟಾ ಅವರು ಓರ್ವ ಪ್ರಮುಖ ಭಾರತೀಯ ಉದ್ಯಮಿ, ಸಮಾಜ ಸೇವಕ ಹಾಗೂ ಟಾಟಾ ಸನ್ಸ್ ಸಮೂಹದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. 2021 ರ ಸಮಯದಲ್ಲಿ ಅಂದಾಜು $103 ಬಿಲಿಯನ್ ಆದಾಯವಿದ್ದ, ಟಾಟಾ ಗ್ರೂಪ್ ವಿಶ್ವದ ಅತಿದೊಡ್ಡ ಗ್ರೂಪ್ ಆಫ್ ಕಂಪನಿಗಳಲ್ಲಿ ಒಂದಾಗಿದೆ. ಯಶಸ್ವಿ ಉದ್ಯಮಿಯಾಗಿ, ಹಲವಾರು ವರ್ಷಗಳಿಂದ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದರೂ, 85 ವರ್ಷದ ಹಿರಿಯರಾಗಿರುವ ರತನ್ ಟಾಟಾ ಅವರ ಹೆಸರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇಲ್ಲ ಎನ್ನುವುದನ್ನು ನಂಬಲೇಬೇಕು.

IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಭಾರತೀಯ ಕೈಗಾರಿಕೋದ್ಯಮಿಗಳ ಪೈಕಿ ರತನ್ ಟಾಟಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಟ್ವಿಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳಿದ್ದಾರೆ. ಅವರ ಟ್ವಿಟ್ಟರ್ ಅನುಯಾಯಿಗಳ ಸಂಖ್ಯೆ 2022 ರಲ್ಲಿ 18 ಲಕ್ಷದಷ್ಟು ಹೆಚ್ಚಾಗಿತ್ತು. ಸದ್ಯ ಅವರ ಟ್ವಿಟ್ಟರ್ ನಲ್ಲಿ ಫಾಲೋವರ್ಸ ಗಳ ಸಂಖ್ಯೆ 12.6 ಮಿಲಿಯನ್ ದಾಟಿದೆ.
ರತನ್ ಟಾಟಾ 3,800 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಹೆಚ್ಚಾಗಿ ಇದು ಟಾಟಾ ಸನ್ಸ್‌ನಿಂದ ಪಡೆಯಲಾಗಿದೆ. 2022 ರ IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ ಅವರು ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 421 ನೇ ಸ್ಥಾನದಲ್ಲಿದ್ದರು. ಅದಕ್ಕೂ ಹಿಂದೆ ಅಂದರೆ 2021 ರಲ್ಲಿ, ಅವರು 3,500 ಕೋಟಿ ರೂಪಾಯಿ ನಿವ್ವಳ ಸಂಪತ್ತನ್ನು ಹೊಂದಿ 433 ನೇ ಸ್ಥಾನದಲ್ಲಿದ್ದರು. ಇದು ಹೇಗೆ ಎಂದು ಗಮನಿಸಿದರೆ ಟಾಟಾ ಸನ್ಸ್‌ನ ಸುಮಾರು ಶೇಕಡ 66 ಈಕ್ವಿಟಿಯನ್ನು ಟಾಟಾ ಟ್ರಸ್ಟ್‌ಗಳು ಹೊಂದಿದೆ. ಇದರ ಲಾಭಾಂಶಗಳು ನೇರವಾಗಿ ಲೋಕೋಪಕಾರಿ ಕೆಲಸಕ್ಕೆ ಸಹಾಯ ಮಾಡಲೆಂದು ಟ್ರಸ್ಟ್‌ಗೆ ಹೋಗುತ್ತದೆ.
ರತನ್ ಟಾಟಾ ಅವರು ಕೈಗೊಂಡಿರುವ ಲೋಕೋಪಕಾರಿ ಕೆಲಸದಿಂದಾಗಿ, ಕಂಪನಿಯು ಗಳಿಸಿದ ಲಾಭವು ರತನ್ ಟಾಟಾ ಅವರ ವೈಯಕ್ತಿಕ ಹಣಕಾಸು ಲೆಕ್ಕಪತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ಟಾಟಾ ಹೆಚ್ಚಿನ ಕಂಪನಿಯ ಷೇರುಗಳನ್ನು ಹೊಂದಿರಲಿಲ್ಲ ಮಾತ್ರವಲ್ಲದೇ ಟಾಟಾ ಸನ್ಸ್‌ನಲ್ಲಿ ಅವರು ಗಳಿಸಿದ ಹೆಚ್ಚಿನ ಭಾಗವನ್ನು ಟಾಟಾ ಟ್ರಸ್ಟ್‌ಗಳಿಗೆ ದಾನ ಮಾಡಿದ್ದಾರೆ.
ರತನ್ ಟಾಟಾ ಮತ್ತು ಅವರ ಕುಟುಂಬವು ಕಳೆದ ಐವತತ್ತು ವರ್ಷಗಳಿಂದ ಪರೋಪಕಾರ ಕೆಲಸಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದನ್ನು ಅವರ ಮುತ್ತಜ್ಜ ಜಮ್‍ಸೆಟ್ ಟಾಟಾ ಪ್ರಾರಂಭಿಸಿದರು. 2021-22 ರಲ್ಲಿ, ಟಾಟಾದ ಅಧಿಕೃತ ವೆಬ್‌ಸೈಟ್ ಪ್ರಕಾರ, 935,000 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ ಟಾಟಾ ಕಂಪನಿಗಳ ಒಟ್ಟು ಆದಾಯವು 128 ಶತಕೋಟಿ ಡಾಲರ್ (9.6 ಟ್ರಿಲಿಯನ್ ರೂಪಾಯಿ) ಆಗಿತ್ತು. ರತನ್ ಟಾಟಾ ಅವರು 2012 ರಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು.


Click it and Unblock the Notifications