ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 12 ರಂದು ಶಿವಮೊಗ್ಗದಲ್ಲಿ ಆರಂಭ ಮಾಡಲಾಗಿದೆ. ಯುವನಿಧಿ ಯೋಜನೆಗೆ ಅಂದಾಜು 5.29 ಲಕ್ಷ ಪದವೀಧರರು ಮತ್ತು ಡಿಪ್ಲೋಮಾದಾರರು ಅರ್ಹರಾಗಿದ್ದಾರೆ.
ಆದರೆ ಇದುವರೆಗೆ 85,000 ಮಂದಿ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಆಶ್ಚರ್ಯವೇನೆಂದರೆ ಅರ್ಜಿ ಸಲ್ಲಿಸಿದ 85 ಸಾವಿರ ಜನರ ಪೈಕಿ ಕೇವಲ 3,000 ಅರ್ಜಿದಾರರು ಅಥವಾ ಶೇಕಡ 3.5 ಅರ್ಜಿದಾರರು ಮಾತ್ರ ಇದುವರೆಗೆ ಸಿದ್ದರಾಮಯ್ಯ ಸರ್ಕಾರವು ನಿಗದಿಪಡಿಸಿದ ಅರ್ಹತಾ ಮಾನದಂಡವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಐದು ಚುನಾವಣಾ ಭರವಸೆಗಳಲ್ಲಿ ಯುವ ನಿಧಿಯೂ ಒಂದಾಗಿದೆ. ಈಗಾಗಲೇ ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಯು ಜಾರಿಗೆ ಬಂದಿದ್ದು, ಯೋಜನೆಯು ಬಹುತೇಕ ಯಶಸ್ವಿಯಾಗಿದೆ.
ಯುವನಿಧಿ ಯೋಜನೆಯು ಪದವೀಧರರಿಗೆ ಮಾಸಿಕ ಮೂರು ಸಾವಿರ ರೂಪಾಯಿ ಮತ್ತು ಡಿಪ್ಲೊಮಾ ಹೊಂದಿರುವವರಿಗೆ 1500 ರೂಪಾಯಿ ನೀಡುವ ನಿರುದ್ಯೋಗ ಭತ್ಯೆ ಯೋಜನೆಯಾಗಿದೆ. ಅರ್ಜಿಯು ನಿಧಾನವಾಗಿ ಬರುತ್ತಿದೆ ಎಂದು ವರದಿಯು ಉಲ್ಲೇಖಿಸಿದೆ. ಅರ್ಹರ ಪೈಕಿ ಇನ್ನೂ ಹಲವಾರು ಮಂದಿ ಸರ್ಕಾರದ ಈ ಪ್ರಯೋಜನಕ್ಕೆ ಅರ್ಜಿ ಸಲ್ಲಿಸಿಲ್ಲ.
ನೀವು ಅರ್ಹರೆ ತಿಳಿಯಿರಿ
* ಅರ್ಜಿದಾರರು ಕರ್ನಾಟಕದ ನಿವಾಸಿಗಳು ಆಗಿರಬೇಕು.
* ಡಿಪ್ಲೋಮಾ ಅಥವಾ ಪದವಿ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳಬೇಕು.
* ಇಂತಹ ಇತರೆ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
* ಇದರ ಅಡಿಯಲ್ಲಿ 2023 ರಲ್ಲಿ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಯುವ ನಿಧಿಗಾಗಿ ನೋಂದಣಿ ಪ್ರಾರಂಭವಾದ ಸುಮಾರು 10 ದಿನಗಳ ನಂತರ, ಯೋಜನೆಗೆ ಪದವೀಧರರಿಂದ ಒಟ್ಟು 32,184 ಅರ್ಜಿಗಳನ್ನು ಪಡೆಯಲಾಗಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇದ್ದರೂ ಕೂಡಾ 24 ಗಂಟೆಗಳಲ್ಲಿ 2000 ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಹತ್ತು ದಿನದ ಬಳಿಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಬೆಳಗಾವಿಯಲ್ಲಿ 3,900 ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಂಗಳೂರು ನಗರದಲ್ಲಿ 2,853 ಅರ್ಜಿಗಳು ಸಲ್ಲಿಕೆಯಾಗಿವೆ.


Click it and Unblock the Notifications