ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಈ ಐದು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈಗಾಗಲೇ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯೋಜನೆ ಜಾರಿ ಮಾಡಲಾಗಿದೆ. ಈಗ ಯುವ ನಿಧಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.
ಯುವನಿಧಿ ಯೋಜನೆಯ ಜಾರಿಗಾಗಿ ಸರ್ಕಾರವು ಈಗಾಗಲೇ ತಯಾರಿಯನ್ನು ಮಾಡಿಕೊಂಡಿದ್ದು, ಜನವರಿ 2024ರಿಂದಲೇ ಈ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಶನಿವಾರ ತಿಳಿಸಿದರು. ಹಾಗೆಯೇ ನೋಂದಣಿ ಪ್ರಕ್ರಿಯೆ ಆರಂಭದ ದಿನಾಂಕವನ್ನು ಕೂಡಾ ಘೋಷಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ನೋಂದಣಿ ದಿನಾಂಕ, ಆರಂಭ ದಿನಾಂಕ
ಕಾಂಗ್ರೆಸ್ ಸರ್ಕಾರದ ಐದನೇ ಖಾತರಿಯಾದ ಯುವ ನಿಧಿ ಯೋಜನೆಯ ನೋಂದಣಿ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಯೋಜನೆಯನ್ನು ಜನವರಿ 2024 ರಿಂದಲೇ ಜಾರಿ ಮಾಡಲಾಗುತ್ತದೆ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ.
"ಈ ಯೋಜನೆಯನ್ನು ಜನವರಿ 2024ರಿಂದ ಆರಂಭ ಮಾಡಲಾಗುತ್ತದೆ. ಯೋಜನೆಯನ್ನು ನಿಗದಿತವಾಗಿ ಯಾವ ದಿನ ಆರಂಭಿಸಲಾಗುತ್ತದೆ ಎಂದು ಶೀಘ್ರವೇ ತಿಳಿಸುತ್ತೇವೆ. ಈ ಯೋಜನೆಯಿಂದ ನಿರುದ್ಯೋಗಿ ಯುವಜನರು ಹಣಕಾಸು ನೆರವು ಪಡೆಯಬಹುದು. ಸುಮಾರು ಐದು ಲಕ್ಷ ಯುವಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.
ಯುವನಿಧಿ ಯೋಜನೆ ಮಾಹಿತಿ
ಕರ್ನಾಟಕ ಯುವ ನಿಧಿ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಭರವಸೆಯಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸಿದರೆ ಅದನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಯೋಜನೆ ಇದಾಗಿದೆ. ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ಈ ಯೋಜನೆಯ ಅರ್ಹತೆ
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರು ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.
* ಅರ್ಜಿದಾರರು 2022-2023 ರಲ್ಲಿ ಅವನ / ಅವಳ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.
* ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.
ಯಾರು ಈ ಯೋಜನೆಗೆ ಅನರ್ಹರು?
* ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣವನ್ನು ಮುಂದುವರಿಸುವ ಯುವಕರು.
* ಅಪ್ರೆಂಟಿಸ್ ವೇತನದ ಫಲಾನುಭವಿ.
* ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.
* ಸ್ವಯಂ ಉದ್ಯೋಗಿಗಳಾಗಿರುವ ಯುವಕರು.
* ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿ.
ಎಷ್ಟು ಮೊತ್ತ ನೀಡಲಾಗುತ್ತದೆ?
ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ, ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.


Click it and Unblock the Notifications