ನವದೆಹಲಿ, ಜೂನ್ 15: ''ಪ್ರಸ್ತುತ ಸನ್ನಿವೇಶದಲ್ಲಿ ಉದ್ಯೋಗ ಸೃಷ್ಟಿ ಒಂದು ಸವಾಲು. ಆದರೆ, ಸರಿಯಾದ ಆರ್ಥಿಕ ನೀತಿ ನಿಯಮಗಳ ಮೂಲಕ ಅದನ್ನು ಸಾಧಿಸಬಹುದು'' ಎಂದು ಕೇಂದ್ರದ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬುಸಿನೆಸ್ ಲೈನ್ ಪತ್ರಿಕೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ''ಉದ್ಯೋಗಗಳು ಮತ್ತು ಉದ್ಯೋಗ ಎರಡು ವಿಭಿನ್ನ ವಿಷಯಗಳು ಎಂಬುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಎಲ್ಲರೂ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಇದು ದೊಡ್ಡ ಸವಾಲಾಗಿದೆ. ನಾವು ಸರಿಯಾದ ರೀತಿಯ ನೀತಿಗಳೊಂದಿಗೆ ಮುಂದೆ ಹೋದರೆ ಸಾಧಿಸಲು ಅಸಾಧ್ಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಉದ್ಯೋಗ ಸೃಷ್ಠಿಯ ಅಸಲಿ ಸಮಸ್ಯೆಗಳ ಬಗ್ಗೆ ನಾವು ಜಿಲ್ಲಾ ಮಟ್ಟದಿಂದ ಕೆಲಸ ಮಾಡಬೇಕಿದೆ. ಆ ಕೆಲಸವನ್ನು ನಮ್ಮ ಸರ್ಕಾರ ಈಗಾಗಲೇ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಬಯಸುತ್ತೇವೆ
''ನಮ್ಮ ಜಿಡಿಪಿಗೆ ಸಣ್ಣ ಉದ್ಯಮಗಳ ಕೊಡುಗೆ ಶೇಕಡಾ 29. ನಾವು ಅದನ್ನು ಶೇ 50 ಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇವೆ. ರಫ್ತುಗಳಲ್ಲಿ ಎಂಎಸ್‌ಎಂಇ ಪಾಲು ಶೇ 40 ರಷ್ಟಿದ್ದು, ಅದನ್ನು ಶೇ 60 ಕ್ಕೆ ತೆಗೆದುಕೊಳ್ಳಲು ನಾವು ಬಯಸುತ್ತೇವೆ. ಇಲ್ಲಿಯವರೆಗೆ, ಈ ವಲಯವು 11 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ನಾವು 5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಬಯಸುತ್ತೇವೆ'' ಎಂದು ನಿತಿನ್ ಗಡ್ಕರಿ ಹೇಳುತ್ತಾರೆ.
ಹಣಕಾಸಿನ ದ್ರವ್ಯತೆಯನ್ನು ಹೆಚ್ಚಿಸುವುದು
''ಮಾರುಕಟ್ಟೆಯಲ್ಲಿ ಹಣಕಾಸಿನ ದ್ರವ್ಯತೆಯನ್ನು ಹೆಚ್ಚಿಸುವುದು ಬಹಳ ಮುಖ್ಯ, ಏಕೆಂದರೆ ಅದು ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬೇಡಿಕೆ ಮತ್ತು ಪೂರೈಕೆಯನ್ನು ಸುಧಾರಿಸುತ್ತದೆ. ಅಂತಿಮವಾಗಿ ಉದ್ಯೋಗಕ್ಕೆ ಉತ್ತೇಜನ ನೀಡುತ್ತದೆ. ಅದು ತಲಾ ಆದಾಯದ ಬೆಳವಣಿಗೆಗೆ ಕಾರಣವಾಗುತ್ತದೆ'' ಎನ್ನುತ್ತಾರೆ ನಿತಿನ್ ಗಡ್ಕರಿ.
ಗ್ರಾಮ ಉದ್ಯಮದ ವಹಿವಾಟು, 88,000 ಕೋಟಿ ರು ಇದೆ
''ನಮ್ಮ ಗ್ರಾಮ ಉದ್ಯಮದ ವಹಿವಾಟು, 88,000 ಕೋಟಿ ರುಪಾಯಿ ಇದೆ. ನಾವು ಕೃಷಿ ಆಧಾರಿತ ಎಂಎಸ್‌ಎಂಇಗಳನ್ನು ಮುನ್ನಡೆಸುವುದು. ಹಳ್ಳಿಗಳಲ್ಲಿ ಈ ಮೂಲಕ ಏನು ಮಾಡಬಹುದು ಎಂದು ನಾವು ಯೋಚಿಸುತ್ತಿದ್ದೇವೆ. ಉದಾಹರಣೆಗೆ, ನಮ್ಮ ದೇಶದಲ್ಲಿ ಎಥೆನಾಲ್ ಅವಶ್ಯಕತೆಯು ತುಂಬಾ ಇದೆ. ಇದು ನಮ್ಮ ತೈಲ ಆಮದನ್ನು ಶೇಕಡಾ 75 ರಷ್ಟು ಕಡಿಮೆ ಮಾಡಬಹುದು'' ಎನ್ನುತ್ತಾರೆ.
7 ಲಕ್ಷ ಕೋಟಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳ ಆಮದು
''ಭಾರತದಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆ ಹೆಚ್ಚುವರಿ ಪ್ರಮಾಣದಲ್ಲಿವೆ. ಆದ್ದರಿಂದ, ನಾವು ಸಕ್ಕರೆ ಮತ್ತು ಅಕ್ಕಿಯಿಂದ ಎಥೆನಾಲ್ ತಯಾರಿಸಲು ನಿರ್ಧರಿಸಿದ್ದೇವೆ. ನಾವು 7 ಲಕ್ಷ ಕೋಟಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತೇವೆ. ನಾವು ಇದನ್ನು 1 ಲಕ್ಷ ಕೋಟಿ ಇಳಿಸಿ ಕೃಷಿಗೆ ಖರ್ಚು ಮಾಡಬಹುದು'' ಎನ್ನುತ್ತಾರೆ ಗಡ್ಕರಿ.


Click it and Unblock the Notifications