ಈ ವರ್ಷದ ಮಾರ್ಚ್ ನಿಂದ ಈಚೆಗೆ 27107.39 ಕೋಟಿ ರುಪಾಯಿ ಮೌಲ್ಯದ ಬಂಡವಾಳವನ್ನು ಆಕರ್ಷಿಸಲಾಗಿದೆ ಎಂದು ಬುಧವಾರ ಕರ್ನಾಟಕ ಸರ್ಕಾರ ಹೇಳಿದೆ. ಹೊಸ ಯೋಜನೆಗಳು ಮತ್ತು ಈಗಾಗಲೇ ಇರುವ ಯೋಜನೆಗಳ ವಿಸ್ತರಣೆಯಿಂದಾಗಿ 46 ಸಾವಿರದಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ ಎಂದು ಹೇಳಲಾಗಿದೆ.
ಈ ಜುಲೈನಲ್ಲಿ 37 ಯೋಜನೆಗಳಿಗೆ ಭೂ ಸರ್ವೇಕ್ಷಣಾ ಸಮಿತಿ ಸಮ್ಮತಿ ಸೂಚಿಸಿದೆ. ಅದರ ಮೌಲ್ಯ 1981.4 ಕೋಟಿ ರುಪಾಯಿ ಆಗುತ್ತದೆ. ಇದರಿಂದ 4000ದಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಕರ್ನಾಟಕ ಸರ್ಕಾರದಿಂದ ಕೈಗಾರಿಕೆ, ಭೂಮಿ ಹಾಗೂ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು, ಬಂಡವಾಳವನ್ನು ಆಕರ್ಷಿಸಲು ಪ್ರಯತ್ನಿಸಲಾಗುತ್ತಿದೆ.
ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಸಮಿತಿ
85ರಷ್ಟು ಯೋಜನೆಗಳ ಮೌಲ್ಯ 6136.97 ಕೋಟಿಗಳಿದ್ದು, 31648 ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ರಾಜ್ಯ ಮಟ್ಟದ ಏಕಗವಾಕ್ಷಿ ವಿಲೇವಾರಿ ಸಮಿತಿ (SLSWCC) ಒಪ್ಪಿಗೆ ನೀಡಿದೆ. ಮತ್ತು 16 ಯೋಜನೆಗಳ ಮೌಲ್ಯ 18989.02 ಕೋಟಿ ಇದ್ದು, 10000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದಕ್ಕೆ ರಾಜ್ಯ ಉನ್ನತ ಮಟ್ಟದ ವಿಲೇವಾರಿ ಸಮಿತಿಯು ಮಂಜೂರು ಮಾಡಿದೆ. ಆ ಸಮಿತಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು.
ಟಿಸಿಎಸ್ ನಿಂದ ದಕ್ಷಿಣ ಕನ್ನಡದಲ್ಲಿ ಸ್ಥಾಪನೆ
ದೊಡ್ಡ ಯೋಜನೆಗಳು ಎಂದಲ್ಲಿ, ಬಳ್ಳಾರಿಯಲ್ಲಿ ಜೆಎಸ್ ಡಬ್ಲ್ಯು ವಿಜಯನಗರ್ ಮೆಟಾಲಿಕ್ಸ್ ಲಿಮಿಟೆಡ್ ನಿಂದ 13,026 ಕೋಟಿ ಹೂಡಿಕೆ, ಸೀಮನ್ಸ್ ಹೆಲ್ತ್ ಕೇರ್ ನಿಂದ ಬೆಂಗಳೂರಿನಲ್ಲಿ 1,085.30 ಕೋಟಿ ವೆಚ್ಚದಲ್ಲಿ ರೀಸರ್ಚ್ ಅಂಡ್ ಎಕ್ಸ್ ಪೆರಿಮೆಂಟಲ್ ಡೆವಲಪ್ ಮೆಂಟ್ ಸರ್ವೀಸಸ್ ಸೆಂಟರ್, ಟಿಸಿಎಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 495 ಕೋಟಿ ರುಪಾಯಿ ಹೂಡಿಕೆ ಸೇರಿದಂತೆ ಇತರ ಯೋಜನೆಗಳು ಮಂಜೂರಾಗಿವೆ.
ಮುಂದಿನ ಐದು ವರ್ಷದಲ್ಲಿ ಒಂದು ಸಾವಿರ ಕೋಟಿ
ಸ್ಯಾಪ್ ಲ್ಯಾಬ್ಸ್ ಇಂಡಿಯಾದಿಂದ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರಕ್ಕಾಗಿ 499 ಕೋಟಿ ಹೂಡಲು ಪ್ರಸ್ತಾವ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಒಂದು ಸಾವಿರ ಕೋಟಿ ರುಪಾಯಿಗೆ ವಿಸ್ತರಣೆ ಮಾಡುವಂಥ ಯೋಜನೆ ಇದು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.


Click it and Unblock the Notifications