ಕೊರೊನಾ ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಿದ ನಿರ್ಧಾರವನ್ನು ಬೆಂಬಲಿಸಿರುವ ಹೋಟೆಲ್ಸ್ ಮತ್ತು ರೆಸ್ಟೋರೆಂಟ್ ಗಳ ರಾಷ್ಟ್ರಮಟ್ಟದ ಒಕ್ಕೂಟವು, ಅದೇ ವೇಳೆ ಈ ರೀತಿಯ ಪ್ರತಿ ಲಾಕ್ ಡೌನ್ ಅವಧಿಯೂ ಹೊಟೆಲ್ ವ್ಯಾಪಾರದ ಚೇತರಿಕೆ ಅವಕಾಶವನ್ನು ಇನ್ನಷ್ಟು ಕಠಿಣಗೊಳಿಸುತ್ತದೆ. ಆದ್ದರಿಂದ ಲಾಕ್ ಡೌನ್ ಜತೆಗೆ ನಿರ್ದಿಷ್ಟ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೇಳಿಕೊಂಡಿದೆ.
ಆತಿಥ್ಯ ಪ್ರವಾಸೋದ್ಯಮ ವಲಯದ ಮೇಲೆ ಒಟ್ಟಾರೆಯಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅವಲಂಬಿತರಾಗಿರುವವರ ಪೈಕಿ 3.8 ಕೋಟಿ ಮಂದಿ ಅಥವಾ ಶೇಕಡಾ 70ರಷ್ಟು ಮಂದಿ ಕೊರೊನಾ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಈಗಿನ ಹೊಸ ಲಾಕ್ ಡೌನ್ ವಿಸ್ತರಣೆಯಿಂದ ಹೊಟೆಲ್ ಉದ್ಯಮ ಹಾಗೂ ಸರ್ಕಾರದ ಆದಾಯಕ್ಕೆ ಖೋತಾ ಆಗುವ ಜತೆಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಕೂಡ ಆಗಲಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವಿಶ್ವದ 7.5 ಕೋಟಿ ಮಂದಿ ಉದ್ಯೋಗ ಅಪಾಯದಲ್ಲಿದೆ. ಆ ಪೈಕಿ ಪ್ರತಿ ಎಂಟು ಮಂದಿಯಲ್ಲಿ ಒಬ್ಬರು ಭಾರತದವರು ಎಂದು ಹೇಳಲಾಗಿದೆ.

ಸರ್ಕಾರ ಮಧ್ಯಪ್ರವೇಶಿಸಿ ಚೇತರಿಕೆಗೆ ಅವಕಾಶ ಮಾಡಿಕೊಡದಿದ್ದರೆ ಈ ವಲಯವು ಮತ್ತೆ ತಲೆ ಎತ್ತಲಾಗದ ಮಟ್ಟಕ್ಕೆ ಕುಸಿಯಲಿದೆ ಎಂದು ಕೂಡ ತಿಳಿಸಲಾಗಿದೆ. ಒಕ್ಕೂಟದಿಂದ ಕೇಳಿರುವ ಬೇಡಿಕೆಗಳು ಹೀಗಿವೆ:
* ಕಾನೂನು ಬದ್ಧವಾಗಿ ಕಟ್ಟಬೇಕಾದ ಶುಲ್ಕಗಳನ್ನು ಕನಿಷ್ಠ ಆರರಿಂದ ಹನ್ನೆರಡು ತಿಂಗಳು ಮುಂದಕ್ಕೆ ಹಾಕಬೇಕು.
* ಸಾಲ ಮರುಪಾವತಿ, ಬಡ್ಡಿ ಮತ್ತು ಬ್ಯಾಂಕ್ ಇಎಂಐಗಳು ಹಾಗೂ ತಕ್ಷಣದಿಂದಲೇ ಬ್ಯಾಂಕ್ ಬಡ್ಡಿದರವನ್ನು ಎರಡು ಪರ್ಸೆಂಟ್ ಇಳಿಸಬೇಕು. ಆರು ತಿಂಗಳ ಕಾಲ ಜಿಎಸ್ ಟಿ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು.
* ಕೊರೊನಾ ಪೂರ್ತಿ ತೊಲಗುವ ತನಕ ಬೋಗ್ಯ, ಬಾಡಿಗೆ, ಆಸ್ತಿ ತೆರಿಗೆ ಮತ್ತು ಅಬಕಾರಿ ಶುಲ್ಕ, ವಿದ್ಯುತ್ ದರ, ನೀರಿನ ಬಿಲ್ ಗಳನ್ನು ರದ್ದುಪಡಿಸಬೇಕು.
ಇನ್ನಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಇನ್ನು ಏಪ್ರಿಲ್ ನಲ್ಲಿ ರೆಸ್ಟೋರೆಂಟ್, ಹೋಟೆಲ್ ಗಳವರು ಹೇಗೋ ಉಳಿದುಕೊಳ್ಳಬಹುದು. ಆದರೆ ಆ ನಂತರ ಸಾಧ್ಯವಿಲ್ಲ. ಈಗಾಗಲೇ ಹಲವಾರು ರೆಸ್ಟೋರೆಂಟ್ ಗಳಿಂದ ಸಾಲ ಮರುಪಾವತಿ ಆಗಿಲ್ಲ. ಮೇ ತಿಂಗಳ ವೇತನ ನೀಡುವ ಸ್ಥಿತಿಯಲ್ಲಿ ಇಲ್ಲ. ಸಂಘಟಿತ ವಲಯದಲ್ಲಿನ ಹದಿನೈದರಿಂದ ಇಪ್ಪತ್ತು ಪರ್ಸೆಂಟ್ ರೆಸ್ಟೋರೆಂಟ್ ಗಳನ್ನು ಮುಚ್ಚಬಹುದು ಎಂದು ಸಂಘಟನೆ ಅಧ್ಯಕ್ಷರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


Click it and Unblock the Notifications