ತುಟ್ಟಿಭತ್ಯೆ ಏರಿಕೆಗಾಗಿ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಕೊನೆಗೂ ಕರ್ನಾಟಕ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ. ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಶೇಕಡ 4ರಷ್ಟು ತುಟ್ಟಿಭತ್ಯೆ ಅಥವಾ ಡಿಎ ಏರಿಕೆ ಮಾಡಿದೆ. ಪಿಂಚಣಿದಾರರಿಗೂ ಕೂಡಾ ಡಿಎ ದರ ಹೆಚ್ಚಳ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಶೇಕಡ 4ರಷ್ಟು ಡಿಎ ಏರಿಕೆ ಮಾಡಿದ ಬಳಿಕ ಪ್ರಸ್ತುತ ರಾಜ್ಯದಲ್ಲಿ ಡಿಎ ಪ್ರಮಾಣವು ಶೇಕಡ 31ರಿಂದ ಶೇಕಡ 35ಕ್ಕೆ ತಲುಪಿದೆ. ಜನವರಿ 1, 2023ರಿಂದ ಈ ನೂತನ, ಪರಿಷ್ಕೃತ ಡಿಎ ದರವು ಜಾರಿಗೆ ಬರಲಿದೆ ಎಂದು ಸರ್ಕಾರವು ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಿಗಳು ಶೇಕಡ 31ರಷ್ಟು ಡಿಎ ಪಡೆಯುತ್ತಿದ್ದಾರೆ.

ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿ ಏರಿಕೆ
ಈ ನಡುವೆ ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯನ್ನು ಕೂಡಾ ಏರಿಕೆ ಮಾಡಲಾಗಿದೆ. ಈ ಪಿಂಚಣಿ ಏರಿಕೆಯು ರಾಜ್ಯದ ಕನ್ಸಾಲಿಡೇಟೆಡ್ ಫಂಡ್‌ನಿಂದ ಪಿಂಚಣಿ/ ಕುಟುಂಬ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಪಿಂಚಣಿದಾರರಿಗೂ ಕೂಡಾ ಅನ್ವಯವಾಗುತ್ತದೆ ಎಂದು ವರದಿಯು ಉಲ್ಲೇಖ ಮಾಡಿದೆ.
"2018ರ ಪರಿಷ್ಕೃತ ಪಾವತಿ ಮಾನದಂಡದ ಅಡಿಯಲ್ಲಿ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತಿದೆ ಎಂದು ಘೋಷಣೆ ಮಾಡಲಾಗುತ್ತಿದೆ. ಪ್ರಸ್ತುತ ತುಟ್ಟಿಭತ್ಯೆಯು ಶೇಕಡ 31ರಷ್ಟಿದ್ದು ಇದು ಶೇಕಡ 35ಕ್ಕೆ ಹೆಚ್ಚಳವಾಗುತ್ತದೆ. ಈ ನೂತನ ಡಿಎ ದರವು ಜನವರಿ 1, 2023ರಿಂದ ಜಾರಿಗೆ ಬರುತ್ತದೆ," ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ತುಟ್ಟಿಭತ್ಯೆ ಏರಿಕೆ ಯಾರಿಗೆ ಅನ್ವಯ?
ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಿಗಳಾಗಿರುವವರಿಗೆ, ಜಿಲ್ಲಾ ಪಂಚಾಯತ್ ಉದ್ಯೋಗಿಗಳಿಗೆ, ನಿಯಮಿತ ಸಮಯದ ವೇತನ ಆಧಾರದಲ್ಲಿ ಉದ್ಯೋಗ ಮಾಡುವ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಪೂರ್ಣ ಸಮಯದ ಉದ್ಯೋಗಿಗಳಿಗೆ ಈ ನೂತನ ಪರಿಷ್ಕರಣೆಯು ಅನ್ವಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನು ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ಅಡಿಯಲ್ಲಿ ಉದ್ಯೋಗ ಪಡೆಯುವ ಉದ್ಯೋಗಿಗಳಿಗೆ, ಎನ್‌ಜೆಪಿಸಿ ಪಿಂಚಣಿದಾರರಿಗೆ ತುಟ್ಟಿಭತ್ಯೆ ಏರಿಕೆಗೆ ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಕೂಡಾ ಸರ್ಕಾರ ಹೇಳಿದೆ. "ಮೇ 2023 ರ ವೇತನವನ್ನು ಬಿಡುಗಡೆ ಮಾಡುವ ದಿನಾಂಕದ ಮೊದಲು ತುಟ್ಟಿಭತ್ಯೆಯ ಬಾಕಿ ಪಾವತಿಯನ್ನು ಮಾಡಬಾರದು," ಎಂದು ಕೂಡಾ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ತುಟ್ಟಿಭತ್ಯೆ ಏರಿಸಿದ್ದ ರಾಜ್ಯಗಳು
ಇನ್ನು ಇತ್ತೀಚೆಗೆ ಹಿಮಾಚಲ ಪ್ರದೇಶ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ತುಟ್ಟಿಭತ್ಯೆ ಏರಿಕೆ ಘೋಷಣೆ ಮಾಡಿದೆ. ಅದರಲ್ಲೂ ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ ಮೊದಲಾದ ರಾಜ್ಯಗಳು ಒಂದು ತಿಂಗಳ ಹಿಂದೆಯೇ ತುಟ್ಟಿಭತ್ಯೆ ಏರಿಕೆ ಘೋಷಣೆ ಮಾಡಿದೆ.
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಏರಿಕೆಯು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತದೆ. ಅದರ ಅನ್ವಯವಾಗಿ ಸಾಮಾನ್ಯವಾಗಿಯೇ ಕರ್ನಾಟಕ ಸರ್ಕಾರ ಈಗ ಘೋಷಣೆ ಮಾಡಿದ ತುಟ್ಟಿಭತ್ಯೆಯು ಜನವರಿ 1ರಿಂದ ಜಾರಿಗೆ ಬರುತ್ತದೆ.
ಕೇಂದ್ರ ಸರ್ಕಾರವು ಕಳೆದ ಬಾರಿಗೆ ಡಿಎಯನ್ನು ಮಾರ್ಚ್‌ನಲ್ಲಿ ಶೇಕಡ 4ರಷ್ಟು ಏರಿಕೆ ಮಾಡಲಾಗಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ. ಇದಕ್ಕೂ ಮೊದಲು, ಡಿಎಯನ್ನು ಸೆಪ್ಟೆಂಬರ್ 2022 ರಲ್ಲಿ ಶೇಕಡ 4ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಜುಲೈ 2022 ರಿಂದ ಜಾರಿಗೆ ಬಂದಿದೆ.


Click it and Unblock the Notifications