ರಷ್ಯಾ -ಉಕ್ರೇನ್ ನಡುವಿನ ಯುದ್ಧದ ಪರಿಣಾಮ, ಆಮದು -ರಫ್ತು ನಿರ್ಬಂಧಗಳಿಂದ ಭಾರತದ ಅಡುಗೆ ಮನೆಯಲ್ಲಿ ನಿತ್ಯ ಬಳಕೆಯ ಖಾದ್ಯ ತೈಲ ಬೆಲೆ ಏರುಪೇರಾಗಿದೆ. ಖಾದ್ಯ ತೈಲಗಳ ಪೂರೈಕೆ ವ್ಯತ್ಯಯದಿಂದಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗಿತ್ತು. ಆದರೆ, ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಖಾಸಗಿ ಸಂಸ್ಥೆಗಳು ಕೂಡಾ ಬೆಲೆ ಇಳಿಕೆ ಮಾಡಲು ಮುಂದಾಗಿವೆ.
ಜೂನ್ ತಿಂಗಳಲ್ಲಿ ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಪ್ರಮುಖ ಸಂಸ್ಥೆ ಅದಾನಿ ವಿಲ್ಮಾರ್ ಕೂಡಾ ಬೆಲೆ ಇಳಿಕೆ ಘೋಷಿಸಿತ್ತು. ಜುಲೈ ತಿಂಗಳಲ್ಲಿ ಮತ್ತೊಮ್ಮೆ ಅದಾನಿ ಸಂಸ್ಥೆ ಭಾರಿ ಪ್ರಮಾಣದಲ್ಲಿ ಬೆಲೆ ಇಳಿಕೆ ಘೋಷಿಸಿದೆ.
ಕಳೆದ ತಿಂಗಳು ಅದಾನಿ ಸಂಸ್ಥೆ ಒಡೆತನದ ಬ್ರ್ಯಾಂಡ್ ಫಾರ್ಚ್ಯೂನ್ ಸನ್ ಫ್ಲವರ್ ತೈಲದ 1 ಲೀಟರ್ ಬೆಲೆ(MRP) 220 ರಿಂದ 210 ರುಗೆ ಇಳಿಕೆಯಾಗಿತ್ತು. ಜುಲೈ 18ರಂದು ಪ್ರತಿ ಲೀಟರ್ ಮೇಲೆ 30 ರು ಕಡಿತ ಘೋಷಿಸಿದೆ. ಹೀಗಾಗಿ ಖಾದ್ಯ ತೈಲ ಬೆಲೆ ಇನ್ನಷ್ಟು ಅಗ್ಗವಾಗಲಿದ್ದು, ಗ್ರಾಹಕರಿಗೆ ಸಂತಸ ತರಲಿದೆ.

ತೈಲಬೀಜಗಳ ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ವೆಚ್ಚದಿಂದಾಗಿ 2021-22ರ ಅವಧಿಯಲ್ಲಿ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಮತ್ತು ದೇಶೀಯ ಬೆಲೆಗಳು ಏರಿಕೆಯಾಗಿತ್ತು. ಆದರೆ, ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದು ಬೆಲೆಗಳ ಇಳಿಕೆಗೆ ಕಾರಣವಾಗಿದೆ.
ಸೂರ್ಯಕಾಂತಿ ಎಣ್ಣೆ ಬದಲಿಯಾಗಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಬಳಕೆಯತ್ತ ಜನ ವಾಲುತ್ತಿದ್ದಾರೆ. ರಿಫೈಂಡ್ ಕಡ್ಲೇಕಾಯಿ ಎಣ್ಣೆ, ರೈಸ್ ಬ್ರಾನ್ ಎಣ್ಣೆ(ಭತ್ತದ ತೌಡಿನಿಂದ ಮಾಡಿದ ಖಾದ್ಯ ತೈಲ) ಬಳಕೆಗೆ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಈ ಖಾದ್ಯತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ತೈಲಕ್ಕಿಂತ ಕಡಿಮೆ ಇದೆ ಎಂದು ಅದಾನಿ ವಿಲ್ಮಾರ್ ಸಂಸ್ಥೆ ಮುಖ್ಯಸ್ಥ ಅಂಗ್ಶು ಮಲಿಕ್ ತಿಳಿಸಿದ್ದಾರೆ.
ಧಾರಾ ಬ್ರ್ಯಾಂಡ್ ಅಡಿಯಲ್ಲಿ ಖಾದ್ಯ ತೈಲ ಮಾರಾಟ ಮಾಡುವ ಮದರ್ ಡೇರಿ ಜುಲೈ 7ರಂದು ಸೋಯಾಬಿನ್ ಹಾಗೂ ರೈಸ್ ಬ್ರಾನ್ ತೈಲ ಬೆಲೆಯನ್ನು ಪ್ರತಿ ಲೀಟರ್ ಮೇಲೆ 14 ರು ನಷ್ಟು ಇಳಿಕೆ ಮಾಡಿತ್ತು. ಜುಲೈ 6ರಂದು ಆಹಾರ ಇಲಾಖೆಯ ಅಧಿಕಾರಿಗಳು ಜೊತೆ ನಡೆದ ಸಭೆ ಬಳಿಕ ಖಾದ್ಯ ತೈಲ ಮಾರಾಟ ಸಂಸ್ಥೆಗಳು ಬೆಲೆ ಇಳಿಕೆಗೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
"ಜಾಗತಿಕ ಬೆಲೆ ಕಡಿತ ಮತ್ತು ಕಡಿಮೆಯಾದ ಖಾದ್ಯ ತೈಲ ಬೆಲೆಗಳ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಸರ್ಕಾರದ ಪ್ರಯತ್ನದ ಮುಂದುವರಿಕೆಯಾಗಿ, ಅದಾನಿ ವಿಲ್ಮರ್ ಕಂಪನಿಯು ಕಳೆದ ತಿಂಗಳ ಕಡಿತದಿಂದ ಖಾದ್ಯ ತೈಲ ಬೆಲೆಗಳನ್ನು ಮತ್ತಷ್ಟು ಕಡಿತಗೊಳಿಸಿದೆ" ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಿದೆ.
ಎಷ್ಟು ಬೆಲೆ ಇಳಿಕೆ?:
ಫಾರ್ಚೂನ್ ಸೋಯಾಬೀನ್ ತೈಲ ಬೆಲೆಯನ್ನು ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಪರಿಷ್ಕರಿಸಲಾಗಿದೆ. ಸೂರ್ಯಕಾಂತಿ ಎಣ್ಣೆ ದರವನ್ನು ಪ್ರತಿ ಲೀಟರ್‌ಗೆ 210 ರೂ.ನಿಂದ 199 ರೂ.ಗೆ ಪರಿಷ್ಕರಿಸಲಾಗಿದೆ. ಸಾಸಿವೆ ಎಣ್ಣೆ ಎಂಆರ್‌ಪಿ (ಗರಿಷ್ಠ ಚಿಲ್ಲರೆ ಬೆಲೆ) ಲೀಟರ್‌ಗೆ 195 ರೂ.ನಿಂದ 190 ರೂ. ಫಾರ್ಚೂನ್ ರೈಸ್ ಬ್ರಾನ್ ಆಯಿಲ್ ಬೆಲೆಯನ್ನು ಲೀಟರ್‌ಗೆ 225 ರೂ.ನಿಂದ 210 ರೂ.ಗೆ ಪರಿಷ್ಕರಿಸಲಾಗಿದ್ದು, ಶೇಂಗಾ ಎಣ್ಣೆಯ ಎಂಆರ್‌ಪಿ ಲೀಟರ್‌ಗೆ 220 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ.
ರಾಗ್ ವನಸ್ಪತಿಯ ಬೆಲೆ ಲೀಟರ್‌ಗೆ 200 ರೂ.ನಿಂದ 185 ರೂ.ಗೆ ಮತ್ತು ರಾಗ್ ಪಾಮೋಲಿನ್ ತೈಲದ ಬೆಲೆ ಲೀಟರ್‌ಗೆ 170 ರೂ.ನಿಂದ 144 ರೂ.ಗೆ ಇಳಿಕೆಯಾಗಿದೆ. "ನಾವು ಜಾಗತಿಕ ಬೆಲೆ ಇಳಿಕೆಯ ಪ್ರಯೋಜನಗಳನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸಿದ್ದೇವೆ ಮತ್ತು ಹೊಸ ಬೆಲೆಗಳೊಂದಿಗೆ ಷೇರುಗಳು ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿವೆ" ಎಂದು ಅದಾನಿ ವಿಲ್ಮಾರ್‌ನ ಎಂಡಿ ಮತ್ತು ಸಿಇಒ ಆಂಗ್ಶು ಮಲ್ಲಿಕ್ ಹೇಳಿದರು.
ಅದಾನಿ ವಿಲ್ಮಾರ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ FMCG ಕಂಪನಿಗಳಲ್ಲಿ ಒಂದಾಗಿದೆ. ಖಾದ್ಯ ತೈಲಗಳ ಶ್ರೇಣಿಯ ಜೊತೆಗೆ, ಅದರ ಕೊಡುಗೆಗಳಲ್ಲಿ ಅಕ್ಕಿ, ಅಟ್ಟಾ, ಸಕ್ಕರೆ, ಬೇಸನ್, ರೆಡಿ-ಟು-ಕುಕ್ ಖಿಚಡಿ, ಸೋಯಾ ತುಂಡುಗಳು ಮತ್ತು ಇತರವು ಸೇರಿವೆ. ಪಿಟಿಐ


Click it and Unblock the Notifications