ದೇಶದಲ್ಲಿ ಕೊರೊನಾದಿಂದ ಜನರು ಪಡಬಾರದ ಕಷ್ಟವನ್ನು ಎದುರಿಸುತ್ತಿದ್ದಾರೆ. ಜನರ ಆರ್ಥಿಕ ಸ್ಥಿತಿಯು ಅದೋಗತಿಯಂತಾಗಿದೆ. ಹೀಗಾಗಿ ಗ್ರಾಹಕರ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಬೆಂಗಳೂರಿನ ಬ್ಯಾಂಕ್‌ವೊಂದು ನಿರ್ಧರಿಸಿದೆ.
ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ಗಾರ್ಡಿಯನ್ ಬ್ಯಾಂಕ್ ಸಾಲ ಪಡೆದಿರುವ ಗ್ರಾಹಕರ ಬಡ್ಡಿಯಲ್ಲಿ 50 ಪರ್ಸೆಂಟ್ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದೆ. 45 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಿ ಅರ್ಧದಷ್ಟು ಬಡ್ಡಿ ಮನ್ನಾ ಮಾಡುವುದಾಗಿ ತಿಳಿಸಿದೆ. ಅಸ್ತಿತ್ವದಲ್ಲಿರುವ ಎನ್‌ಪಿಎ ಖಾತೆಗಳಿಗೆ ಈ ಬಡ್ಡಿ ಮನ್ನಾ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ಮಾರ್ಚ್ 27 ರಂದು ರಿಸರ್ವ್ ಬ್ಯಾಂಕ್ ಇಂಡಿಯಾ ಬಿಡುಗಡೆ ಮಾಡಿದ ಸುತ್ತೋಲೆ ಅನ್ವಯ ಆರ್ ಬಿಐ ನಿರ್ದೇಶನಗಳನ್ನು ಪಾಲಿಸುತ್ತಿರುವುದಾಗಿ ಬ್ಯಾಂಕ್ ಅಧ್ಯಕ್ಷ ಕೊಲಿನ್ ಟಿಮ್ಸ್ ಹೇಳಿದ್ದಾರೆ. ಆದಾಗ್ಯೂ, ಗಾರ್ಡಿಯನ್ ಬ್ಯಾಂಕಿನ ನಿರ್ವಹಣೆ ಮತ್ತು ಮಂಡಳಿಯು ಈ ನಿಷೇಧವನ್ನು ಮೀರಿ ಪರಿಹಾರವನ್ನು ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಗಾರ್ಡಿಯನ್ ಬ್ಯಾಂಕ್ ನ ಆರು ಶಾಖೆಗಳಿದ್ದು 60 ಸಿಬ್ಬಂದಿಯಿದ್ದು, 30ಸಾವಿರ ಗ್ರಾಹಕರು ಮತ್ತು 3 ಸಾವಿರ ಸಾಲಗಾರರಿದ್ದಾರೆ. ''67.87 ಲಕ್ಷ ರೂ.ಗಳನ್ನು ಮನ್ನಾ ಮಾಡಲಾಗುವುದು'' ಎಂದು ಸಿಇಒ ಶರೋನ್ ಜೋಸೆಫ್ ಹೇಳಿದ್ದಾರೆ. ಜೊತೆಗೆ ಸಿಬ್ಬಂದಿಗಳ ವೇತನ ಕಡಿತಗೊಳಿಸುವುದಿಲ್ಲ, ಯಾರನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.
''ಸಾಮಾನ್ಯವಾಗಿ, ಬ್ಯಾಂಕುಗಳು ಲಾಭದ ಬಗ್ಗೆ ಮಾತ್ರ ಆಸಕ್ತಿ ಹೊಂದಿರುವ ಸಂಸ್ಥೆಗಳಾಗಿರುತ್ತವೆ. ನಾವು ಆ ಚಿತ್ರಣವನ್ನು ಬದಲಾಯಿಸಲು ಬಯಸುತ್ತೇವೆ. ಇದು ಜನರಿಗೆ ಕಷ್ಟದ ಸಮಯ ಮತ್ತು ಸಾಲಗಾರರ ದುಃಸ್ಥಿತಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ನಾವು ಸಹಾಯ ಮಾಡಲು ನಿರ್ಧರಿಸಿದ್ದೇವೆ. ಈ ನಿರ್ಧಾರವನ್ನು ನಾವು ಆರ್‌ಬಿಐಗೆ ತಿಳಿಸುತ್ತಿದ್ದೇವೆ "ಎಂದು ಅವರು ಹೇಳಿದರು.


Click it and Unblock the Notifications