ಬೆಂಗಳೂರು, ಡಿಸೆಂಬರ್ 20: ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು ನಗರವು ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹೊಂದಲಿದೆ. ಈ ರೈಲು ತಮಿಳುನಾಡಿನ ಕೊಯಮತ್ತೂರುಗೆ ಸಂಪರ್ಕಿಸ ಹೊಂದಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅಧಿಕಾರಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷಣ್‌ನಿಂದ ಹೊರಡುವ ರೈಲು ಕೊಯಮತ್ತೂರು ಸೆಂಟ್ರಲ್ ಜಂಕ್ಷಣ್‌ಗೆ ಸಂಪರ್ಕ ಸಾಧಿಸಲಿದೆ. ಇದು ತಮಿಳುನಾಡಿನ ಮತ್ತೊಂದು ನಗರವಾದ ಸೇಲಂ ಮೂಲಕ ಹಾದು ಹೋಗಲಿದೆ. ಇದಕ್ಕೆ ರೈಲ್ವೆ ಅಧಿಕಾರಿಗಳು ತಾತ್ಕಾಲಿಕವಾಗಿ ಅನುಮೋದನೆ ನೀಡಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ಎರಡು ನಗರಗಳ ನಡುವೆ ಸೆಮಿ-ಹೈ-ಸ್ಪೀಡ್ ರೈಲನ್ನು ( ವಂದೇ ಭಾರತ್ ರೈಲು ) ಓಡಿಸುವ ಕುರಿತು ರೈಲ್ವೆ ಮಂಡಳಿಯು ವರದಿ ಕೇಳಿತ್ತು. ಈ ಮಾರ್ಗದ ವಾಣಿಜ್ಯ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕಿದ್ದರು. ಈ ವರದಿಯನ್ನು ಇತ್ತೀಚೆಗೆ ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿಯ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಮಂಡಳಿಯು ಅನುಮೋದನೆ ನೀಡಿದ ನಂತರವೇ ಪ್ರಯಾಣ ದರ, ನಿಲುಗಡೆ ಮತ್ತು ಪ್ರಯಾಣದ ಸಮಯದ ವಿವರಗಳು ಸ್ಪಷ್ಟವಾಗುತ್ತವೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಪ್ರಸ್ತುತ ಅತಿ ವೇಗದ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕ್ರಮಿಸಲು 6 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ರೈಲಿಗೆ ಸುಮಾರು ಐದು ಗಂಟೆ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಕೊಯಮತ್ತೂರಿಗೆ ಎರಡು ರೈಲು ಮಾರ್ಗಗಳಿವೆ. ಮೊದಲನೇ ಮಾರ್ಗ ಹೊಸೂರು ಮತ್ತು ಸೇಲಂ ಮೂಲಕ (379 ಕಿಮೀ) ಹಾದು ಹೋಗುತ್ತದೆ. ಎರಡನೆಯದ್ದು ಕುಪ್ಪಂ ಮತ್ತು ಸೇಲಂ ಮೂಲಕ (420 ಕಿಮೀ) ಹಾದು ಹೋಗುತ್ತದೆ.
ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವ ಮಾರ್ಗದಲ್ಲಿ ಚಲಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಪ್ಪಂ ಮತ್ತು ಸೇಲಂ ನಡುವಿನ ಮಾರ್ಗವನ್ನು ದ್ವಿಗುಣಗೊಳಿಸಲಾಗಿದೆ ಮತ್ತು ವಿದ್ಯುದ್ದೀಕರಿಸಲಾಗಿದೆ. ಇದರಿಂದಾಗಿ ಈ ಮಾರ್ಗವು ವಂದೇ ಭಾರತ್ ರೈಲಿಗೆ ಸೂಕ್ತವೆಂದು ಹೇಳಲಾಗುತ್ತದೆ. ಹೊಸೂರು ಮತ್ತು ಸೇಲಂ ನಡುವಿನ ಮಾರ್ಗವು ಏಕ ಮಾರ್ಗವಾಗಿ ಉಳಿದುಕೊಂಡಿದೆ.

ಬೈಯಪ್ಪನಹಳ್ಳಿ-ಕಾರ್ಮೆಲಾರಂ ಮತ್ತು ಹೀಲಳಿಗೆ-ಹೊಸೂರು ಭಾಗಗಳನ್ನು ದ್ವಿಗುಣಗೊಳಿಸುವ ಕೆಲಸ ಇನ್ನೂ ನಡೆಯುತ್ತಿದೆ. ಅದೇ ರೀತಿ ಹೊಸೂರು-ಸೇಲಂ ನಡುವಿನ ಮಾರ್ಗವನ್ನೂ ಸಹ ದ್ವಿಗುಣಗೊಳಿಸುವ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರೈಲ್ವೆ ವೇದಿಕೆಯ ಕೆಎನ್ ಕೃಷ್ಣ ಪ್ರಸಾದ್, 'ಬಂಗಾರಪೇಟೆ ಮತ್ತು ಕುಪ್ಪಂ ಮಾರ್ಗವಾಗಿ ವಂದೇ ಭಾರತ್ ಓಡಬೇಕು. ಕೆಆರ್ ಪುರಂ ಮತ್ತು ಬಂಗಾರಪೇಟೆಯಲ್ಲಿ ನಿಲುಗಡೆ ಇರಬೇಕು. ಈ ಮಾರ್ಗವನ್ನು ದ್ವಿಗುಣಗೊಳಿಸುವುದು ಮತ್ತು ವಿದ್ಯುದ್ದೀಕರಿಸುವುದು ಮಾತ್ರವಲ್ಲದೆ, ತಿರುಪತ್ತೂರಿನ ನಂತರ ರೈಲುಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸಬಹುದು' ಎಂದು ಅವರು ಹೇಳಿದ್ದಾರೆ.
ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಅನ್ನು ದಕ್ಷಿಣ ರೈಲ್ವೆಯ ಸೇಲಂ ವಿಭಾಗವು ನಿರ್ವಹಿಸುವ ಸಾಧ್ಯತೆಯಿದೆ. ಇದು ಬೆಳಿಗ್ಗೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪುವ ಮೊದಲು ಹಿಂದಿರುಗುವ ನಿರೀಕ್ಷೆಯಿದೆ. ಪ್ರಾಥಮಿಕ ನಿರ್ವಹಣೆ ಕೊಯಮತ್ತೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications