ವ್ಯಾಪಾರದ ನಡುವೆ ಪೈಪೋಟಿಗಳು ಇರುವುದು ಸಾಮಾನ್ಯ. ನಮ್ಮ ಸಂಸ್ಥೆಯು ಇನ್ನೊಂದು ಸಂಸ್ಥೆಗಿಂತ ಅಧಿಕ ಲಾಭವನ್ನು ಗಳಿಸಬೇಕು, ಆ ಸಂಸ್ಥೆಗಿಂತ ಹೆಚ್ಚು ಬೆಳವಣಿಗೆ ಕಾಣಬೇಕು ಎಂಬ ಬಯಕೆ ಇರುವುದು ಸಾಮಾನ್ಯ ವಿಚಾರ ಹೌದು. ಆದರೆ ಆ ವಿಚಾರಕ್ಕಾಗಿಯೇ ಕೊಲೆ!. ಹೌದು ಬೆಂಗಳೂರಿನಲ್ಲಿ ಇಬ್ಬರ ನಡುವೆ ವ್ಯಾಪಾರದಲ್ಲಿನ ಪೈಪೋಟಿಯು ಈಗ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ.
ಕಂಪನಿಯೊಂದರ ಮಾಜಿ ಉದ್ಯೋಗಿಯು ತಾನು ಈ ಹಿಂದೆ ಉದ್ಯೋಗ ಮಾಡಿದ್ದ ಹಳೇ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಹಾಡು ಹಗಲಲ್ಲೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ (ಜುಲೈ 12) ನಡೆದಿದೆ. ಅಮೃತಹಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ಈ ಜೋಡಿ ಹತ್ಯೆ ನಡೆದಿದೆ. ಹಾಡು ಹಗಲಲ್ಲೇ ನಡೆದ ಈ ಕೊಲೆಯು ಬೆಂಗಳೂರಿನ ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ.

ಪ್ರಕರಣವೇನು, ಏನಾಗಿದೆ?
ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿನುಕುಮಾರ್‌ರನ್ನು ಮಂಗಳವಾರ ಕೊಲೆ ಮಾಡಿದ್ದಾನೆ. ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಈ ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ಕಚೇರಿಗೆ ಮಂಗಳವಾರ ಸಂಜೆ 4.30ರ ಹೊತ್ತಿಗೆ ಭೇಟಿ ನೀಡಿದ ಫೆಲಿಕ್ಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಫೆನಿಕ್ಸ್ ಕಂಪನಿ ಬಿಟ್ಟು ಹೋದ ಬಳಿಕ ತಾನು ಒಂದು ಸ್ವಂತ ಕಂಪನಿ ಇಟ್ಟುಕೊಂಡಿದ್ದ. ಆರಂಭಿಕವಾಗಿ ಈ ಕೊಲೆಯು ಫೆನಿಕ್ಸ್ ತಾನು ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವವರೊಂದಿಗೆ ಯಾವುದೋ ವಿಚಾರದಲ್ಲಿ ಜಗಳವಾಡಿ, ಮಾತಿಗೆ ಮಾತು ಬೆಳೆದು ಕೊಲೆ ನಡೆದಿದೆ ಎಂಬ ಮಾಹಿತಿ ಲಭಿಸಿತ್ತು. ಅದಾದ ಬಳಿಕ ಈಗ ವ್ಯಾಪಾರದ ವಿಚಾರದಲ್ಲಿಯೇ ಈ ಜೋಡಿ ಕೊಲೆ ನಡೆದಿದೆ ಎಂಬ ಮಾಹಿತಿಯಿದೆ.
ಈ ಪ್ರಕರಣದಲ್ಲಿ ಗ್ನೆಟ್ ಬ್ರಾಡ್‌ಬ್ಯಾಂಡ್‌ನ ಮಾಲೀಕ ಅರುಣ್ ಕುಮಾರ್ ಆಜಾದ್‌ರನ್ನು ಪೊಲೀಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡರಾತ್ರಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಫೈಬರ್‌ನೆಟ್ ಕಂಪನಿ ಐರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯರನ್ನು ಕೊಲೆ ಮಾಡಲು ಕನ್ನಡ ರಾಪರ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ 'ಜೋಕರ್' ಫೆಲಿಕ್ಸ್ ಸೇರಿದಂತೆ ಇನ್ನೂ ಮೂವರನ್ನು ಅರುಣ್ ಕುಮಾರ್ ಆಜಾದ್ ನೇಮಿಸಿಕೊಂಡಿದ್ದರು ಎಂದು ಆರೋಪ ಮಾಡಲಾಗಿದೆ.
ಇನ್ನು ಡಬಲ್ ಮರ್ಡರ್ ಕೇಸ್ ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಕೊಲೆ ನಡೆದ ಕೇವಲ 4 ಗಂಟೆಯಲ್ಲಿ ಬಂಧಿಸಿದ್ದಾರೆ. ಪ್ರಸ್ತುತ ಒಟ್ಟಾಗಿ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳನ್ನು ಶಬರೀಶ್ ಅಲಿಯಾಸ್ ಫೆಲಿಕ್ಸ್ (27), ವಿನಯ್ ರೆಡ್ಡಿ (23) ಮತ್ತು ಸಂತೋಷ್ ಅಲಿಯಾಸ್ ಸಂತು (26) ಎಂದು ಗುರುತಿಸಲಾಗಿದೆ.


Click it and Unblock the Notifications