ವಿಶ್ವದ ಅತ್ಯಂತ ಸಂಚಾರ ದಟ್ಟಣೆಯ ನಗರ ಬೆಂಗಳೂರು ಎಂಬ ಹಣೆಪಟ್ಟಿ ಈಗ ಅಧಿಕೃತವಾಗಿದೆ. ನೆದರ್ಲೆಂಡ್ ಮೂಲದ ಟಾಮ್ ಟಾಮ್ ಈ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿದೆ. 2019ರಲ್ಲಿ 57 ದೇಶಗಳಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. 415 ನಗರಗಳನ್ನು ಮೀರಿಸಿ, ಬೆಂಗಳೂರು ನಗರ ಅತ್ಯಂತ ಸಂಚಾರ ದಟ್ಟಣೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಚಾಲಕರು ಮಾಮೂಲಿಗಿಂತ ಸರಾಸರಿ 71 ಪರ್ಸೆಂಟ್ ಹೆಚ್ಚು ಸಮಯವನ್ನು ಪ್ರಯಾಣದಲ್ಲೇ ಕಳೆಯುತ್ತಾರೆ. ಪೀಕ್ ಅವರ್ ನಲ್ಲಿ ಹೆಚ್ಚುವರಿಯಾಗಿ ಇನ್ನೂರು ನಲವತ್ಮೂರು ಗಂಟೆ ಸಮಯವನ್ನು ಪ್ರಯಾಣದಲ್ಲೇ ಕಳೆದಿರುವುದು ಲೆಕ್ಕದಲ್ಲಿ ಗೊತ್ತಾಗಿದೆ.
ವರದಿ ಪ್ರಕಾರ, ರಸ್ತೆಯಲ್ಲಿ ಪ್ರಯಾಣಕ್ಕೆ ಮೀಸಲಿಟ್ಟ ಈ ಸಮಯದಲ್ಲಿ 244 ಗಿಡ ನೆಡಬಹುದಿತ್ತು, ಗೇಮ್ ಆಫ್ ಥ್ರೋನ್ಸ್ ನ 215 ಸಂಚಿಕೆಗಳನ್ನು ನೋಡಬಹುದಿತ್ತು ಮತ್ತು 139 ಫುಟ್ಬಾಲ್ ಮ್ಯಾಚ್ ಗಳನ್ನು ವೀಕ್ಷಿಸಬಹುದಿತ್ತು ಎಂಬ ಲೆಕ್ಕಾಚಾರ ಮುಂದಿಡಲಾಗಿದೆ. ಇಷ್ಟೇ ಪ್ರಮಾಣದ ಸಂಚಾರ ದಟ್ಟಣೆ ಮೂಲಕ ಫಿಲಿಪ್ಪೈನ್ಸ್ ನ ಮನಿಲಾ ಎರಡನೇ ಸ್ಥಾನದಲ್ಲಿದೆ. ಇನ್ನು ಟಾಪ್ ಟೆನ್ ಪಟ್ಟಿಯಲ್ಲಿ ಮುಂಬೈ, ಪುಣೆ ಮತ್ತು ನವದೆಹಲಿ ಇದೆ.

ಕಳೆದ ವರ್ಷ ಬೆಂಗಳೂರಲ್ಲಿ ಅತ್ಯಂತ ಕನಿಷ್ಠ ಪ್ರಮಾಣದ ಟ್ರಾಫಿಕ್ ಇದ್ದದ್ದು ಏಪ್ರಿಲ್ ಆರನೇ ತಾರೀಕು, ಅತಿ ಹೆಚ್ಚು ಟ್ರಾಫಿಕ್ ಇದ್ದದ್ದು ಆಗಸ್ಟ್ ಇಪ್ಪತ್ತು. ವಿಪರೀತ ಒತ್ತಡದ ಸಮಯ ಎಂದು ಶುಕ್ರವಾರ ರಾತ್ರಿ ಏಳರಿಂದ ಎಂಟು ಗಂಟೆಯನ್ನು ಘೋಷಿಸಲಾಗಿದೆ. ಮೂಲಸೌಕರ್ಯಕ್ಕಾಗಿ ನಿರ್ಮಾಣ ಕಾಮಗಾರಿ, ಧೂಳು, ವಿಪರೀತ ಜನಸಂಖ್ಯೆ, ಹಸಿರು ನಾಶ, ಕಲುಷಿತ ಕೆರೆಗಳು.. ಇವೆಲ್ಲ ಬೆಂಗಳೂರು ಜನರ ಜೀವನ ಗುಣಮಟ್ಟ ಕುಸಿಯುತ್ತಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ಕಳೆದ ಹತ್ತು ವರ್ಷದಲ್ಲೇ ಜಾಗತಿಕ ಮಟ್ಟದಲ್ಲೂ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಿದೆ.


Click it and Unblock the Notifications