ಭಾರತದ ನಂಬರ್ ಒನ್ ಪ್ಯಾಕೇಜ್ಡ್ ಮಿನರಲ್ ವಾಟರ್ ಕಂಪನಿ ಎನಿಸಿದ ಬಿಸ್ಲೇರಿಯ ಮಾರಾಟ ವಿಚಾರ ಸುದ್ದಿಯಲ್ಲಿದೆ. ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಿತಿಯಲ್ಲಿರುವ ಮತ್ತು ಲಾಭದಾಯಕ ಉದ್ದಿಮೆಯಾಗಿ ಸೈ ಎನಿಸಿರುವ ಬಿಸ್ಲೇರಿಯನ್ನು 7 ಸಾವಿರ ಕೋಟಿ ರೂಪಾಯಿಗೆ ಟಾಟಾ ಮಾರಲು ಹೊರಟಿರುವುದು ಬಹಳ ಮಂದಿಗೆ ಅಚ್ಚರಿ ಮೂಡಿಸಿದೆ. ಬಿಸ್ಲೇರಿಯ ಬ್ರ್ಯಾಂಡ್ ಮೌಲ್ಯ ಪರಿಗಣಿಸಿದರೆ ಈ ಮೊತ್ತ ಕಡಿಮೆ ಆಯಿತು. ಟಾಟಾಗೆ ಜಾಕ್‌ಪಾಟ್ ಸಿಕ್ಕಿತು ಎಂಬುದು ಹಲವರ ಅನಿಸಿಕೆ. ಅದರೆ ತಮ್ಮ ಕುಟುಂಬದಲ್ಲಿ ಬಿಸ್ಲೇರಿ ವ್ಯವಹಾರ ಮುಂದುವರಿಸಲು ಇಚ್ಛಿಸುವವರು ಯಾರೂ ಇಲ್ಲದ ಕಾರಣ ಕಂಪನಿಯನ್ನು ಮಾರಲಾಗುತ್ತಿದೆ ಎಂದು ಬಿಸ್ಲೇರಿಯ ಛೇರ್ಮನ್ ರಮೇಶ್ ಜೆ ಚೌಹಾಣ್ ಹೇಳಿದ್ದಾರೆ.
ಅಂದಹಾಗೆ, 82 ವರ್ಷದ ರಮೇಶ್ ಚೌಹಾಣ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡುತ್ತಿದೆ. ವ್ಯವಹಾರವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ರಮೇಶ್ ಅವರಿಗೆ ಜಯಂತಿ ಎಂಬ ಮಗಳಿದ್ದು, ಅವರಿಗೆ ಈ ಉದ್ದಿಮೆಯಲ್ಲಿ ಆಸಕ್ತಿ ಇಲ್ಲ. ಈ ಸಂಗತಿಯನ್ನು ಸ್ವತಃ ರಮೇಶ್ ಚೌಹಾಣ್ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಜಯಂತಿಗೆ ಫ್ಯಾಷನ್, ಪ್ರವಾಸವೆಂದರೆ ಪ್ರೀತಿ
ರಮೇಶ್ ಚೌಹಾಣ್ ಅವರ ಮಗಳು ಜಯಂತಿ ಚೌಹಾಣ್ ಬಿಸ್ಲೇರಿ ಕಂಪನಿಯ ವ್ಯವಹಾರ ಮುಂದುವರಿಸಲು ನಿರಾಸಕ್ತಿ ತೋರುತ್ತಿರುವುದು ಯಾಕೆ ಎಂಬ ಕಾರಣ ಗೊತ್ತಾಗಿಲ್ಲ.
ರಮೇಶ್ ಚೌಹಾಣ್‌ಗೆ ಏಕೈಕ ಮಗಳಾಗಿರುವ ಅವರು ಪ್ರಾಡಕ್ಟ್ ಡೆವಲಪ್ಮೆಂಟ್ ಶಿಕ್ಷಣ ಪಡೆದಿದ್ದಾರೆ. ಅಮೆರಿಕದ ಲಾಸ್ ಏಂಜಲಿಸ್‌ನ ಫ್ಯಾಷನ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಮರ್ಚಾಂಡೈಸಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈಸಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ಲಂಡನ್‌ನಲ್ಲಿ ಫ್ಯಾಷನ್ ಸ್ಟೈಸಿಂಗ್ ಮತ್ತು ಫೋಟೋಗ್ರಫಿ ಕಲಿತಿದ್ದಾರೆ.
ಅಮೆಚ್ಯೂರ್ ಫೋಟೋಗ್ರಾಫರ್ ಆಗಿರುವ ಅವರು ಪ್ರಾಣಿ ಪ್ರಿಯೆಯಾಗಿದ್ದಾರೆ. ಹಾಗೆಯೇ, ಪ್ರವಾಸ ಎಂದರೆ ಬಹಳ ಆನಂದಿಸುವ ವ್ಯಕ್ತಿ ಎಂದು ಹೇಳಲಾಗುತ್ತದೆ.
ಬಿಸ್ಲೇರಿಯ ಭಾಗವಾಗಿರುವ ಜಯಂತಿ
ಇನ್ನೂ ಕೇವಲ 37 ವರ್ಷದ ವಯಸ್ಸಿನ ಜಯಂತಿ ಚೌಹಾಣ್ ಸದ್ಯ ಬಿಸ್ಲೇರಿ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಸ್ಥಾನ ನಿರ್ವಹಿಸುತ್ತಿರುವುದು ಹೌದು. ಫ್ಯಾಷನ್ ಕ್ಷೇತ್ರದಲ್ಲಿ ಶಿಕ್ಷಣ ಪಡೆದರೂ ಅವರು ಬಿಸ್ಲೇರಿಯ ಜಾಹೀರಾತು ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಕಾರ್ಯಗಳ ಮೇಲೆ ಗಮನ ಹರಿಸಿದ್ದಾರೆ. ಬಿಸ್ಲೇರಿಯ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಬೆಳೆಸಲು ಜಯಂತಿ ಶ್ರಮ ಇದೆ.
24ನೇ ವಯಸ್ಸಿನಲ್ಲಿ ಬಿಸ್ಲೇರಿ ಕಂಪನಿಯ ವ್ಯವಹಾರಗಳಲ್ಲಿ ಭಾಗಿಯಾಗಲು ಮೊದಲುಗಂಡ ಅವರು ಇಲ್ಲಿನ ಆಟೊಮೇಶನ್ ವಿಭಾಗಕ್ಕೆ ಪುಷ್ಟಿ ಕೊಡುವ ಕೆಲಸ ಮಾಡಿದ್ದಾರೆ. ಇಷ್ಟು ನಿಕಟವಾಗಿ ಬಿಸ್ಲೇರಿ ಕಂಪನಿಯೊಂದಿಗೆ ಜೋಡಿತಗೊಂಡಿರುವ ಮತ್ತು ಈಗಲೂ ಉಪಾಧ್ಯಕ್ಷೆಯಾಗಿರುವ ಜಯಂತಿ ಅವರಿಗೆ ಬಿಸ್ಲೇರಿ ವ್ಯವಹಾರ ಮುಂದುವರಿಸುವ ಆಸಕ್ತಿ ಯಾಕೆ ಇಲ್ಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು.
ಸುದ್ದಿಗಳನ್ನು ನಂಬುವುದಾದರೆ, ಒಂದು ವೇಳೆ ಟಾಟಾ ಸಂಸ್ಥೆಗೆ ಬಿಸ್ಲೇರಿ ಮಾರಾಟವಾದರೆ ಈಗಿರುವ ಆಡಳಿತ ಮಂಡಳಿಯೇ 2 ವರ್ಷ ಮುಂದುವರಿಯಲಿದೆ. ರಮೇಶ್ ಚೌಹಾಣ್ ಅವರೆಯೇ ಈಗಲೂ ಬಿಸ್ಲೇರಿಯ ಛೇರ್ಮನ್ ಆಗಿದ್ದಾರೆ. ರಮೇಶ್ ಅವರ ಪತ್ನಿ ಜೈನಬ್ ಅವರು ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಏಂಜೆಲೋ ಜಾರ್ಜ್ ಸಿಇಒ ಆಗಿದ್ದಾರೆ. ಜಯಂತಿ ಚೌಹಾಣ್ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಟಾಟಾಗೆ ಮಾರಾಟವಾದ ಬಳಿಕ ಎರಡು ವರ್ಷ ಏಂಜೆಲೋ ಜಾರ್ಮ್ ಮತ್ತು ಜಯಂತಿ ಚೌಹಾಣ್ ಅದೇ ಹುದ್ದೆಯಲ್ಲಿ ಮುಂದುವರಿಯಬಹುದು.
ಟಾಟಾಗೆ ಸಿಕ್ಕಿತಾ ಓಡುವ ಕುದರೆ?
ಟಾಟಾ ಗ್ರೂಪ್ ಸಂಸ್ಥೆ ಹಲವಾರು ಗ್ರಾಹಕ ಬಳಕೆ ಉತ್ಪನ್ನಗಳನ್ನು ಹೊಂದಿದೆ. ಪ್ಯಾಕೇಜ್ ನೀರಿನ ಕ್ಷೇತ್ರದಲ್ಲೂ ಇದೆ. ಟಾಟಾ ಕಾಪರ್ ಪ್ಲಸ್ ವಾಟರ್, ಟಾಟಾ ಗ್ಲೂಕೋ ಪ್ಲಸ್ ಮೊದಲಾದ ಬ್ರ್ಯಾಂಡ್‌ನಲ್ಲಿ ಪ್ಯಾಕೇಜ್ಡ್ ವಾಟರ್ ಮಾರುತ್ತಿದೆ. ಆದರೆ, ಇಲ್ಲಿ ಭದ್ರವಾಗಿ ಅಡಿ ಇಡಲು ಟಾಟಾಗೆ ಸಾಧ್ಯವಾಗಿಲ್ಲ.
ಇತ್ತ, ಬಿಸ್ಲೇರಿ ಎಂಬ ಬ್ರ್ಯಾಂಡ್ ಎಷ್ಟು ಪ್ರಬಲವಾಗಿದೆ ಎಂದರೆ ಮಿನರಲ್ ವಾಟರ್ ಎಂಬುದಕ್ಕೆ ಬಿಸ್ಲೇರಿ ಅನ್ವರ್ಥ ನಾಮವೇ ಆಗಿ ಹೋಗಿದೆ. ಹೇಗೆ ಫೋಟೋಕಾಪಿಗೆ ಜೆರಾಕ್ಸ್ ಹೆಸರಿದೆಯೋ, ಹಾಗೇ ಮಿನರಲ್ ವಾಟರ್ ಎಂದರೆ ಬಿಸ್ಲೇರಿ ಎಂದನ್ನುವಷ್ಟು ಬ್ರ್ಯಾಂಡ್ ವ್ಯಾಲ್ಯೂ ಇದೆ.
ಇದರ ಜೊತೆಗೆ ಬಿಸ್ಲೇರಿ ದೇಶಾದ್ಯಂತ ನೂರಕ್ಕೂ ಹೆಚ್ಚು ಉತ್ಪಾದಕ ಘಟಕಗಳನ್ನು ಹೊಂದಿದೆ. 3 ಸಾವಿರಕ್ಕೂ ಹೆಚ್ಚು ಡಿಸ್ಟ್ರಿಬ್ಯೂಟರ್‌ಗಳು ಮತ್ತು 5 ಸಾವಿರಕ್ಕೂ ಹೆಚ್ಚು ಡಿಸ್ಟ್ರಿಬ್ಯೂಷನ್ ಟ್ರಕ್‌ಗಳನ್ನು ಹೊಂದಿದೆ. ಇಷ್ಟು ಅಗಾಧ ಸೌಕರ್ಯಗಳು ಸಿದ್ಧಪಡಿಸಿದ ಸ್ಥಿತಿಯಲ್ಲಿ ಸಿಕ್ಕಾಗ ಮತ್ತು ಮಾರುಕಟ್ಟೆಯಲ್ಲಿ ಓಡುವ ಕುದುರೆಯಾಗಿರುವ ಬ್ರ್ಯಾಂಡ್ ದೊರೆತಾಗ ಟಾಟಾಗೆ ಮಿನರಲ್ ವಾಟರ್ ಕ್ಷೇತ್ರದಲ್ಲಿ ನುಗ್ಗಲು ಆನೆಬಲ ಬಂದಂತಾಗುತ್ತದೆ ಎಂಬುದು ಹೌದು.
ಬಿಸ್ಲೇರಿಗೂ ಇದು ಸಕಾಲ?
ಪ್ಯಾಕೇಜ್ಡ್ ಮಿನರಲ್ ವಾಟರ್‌ನ ಮಾರ್ಕೆಟಿಂಗ್ ಸ್ವರೂಪ ಈಗ ಬದಲಾಗಿ ಹೋಗಿದೆ. ಯಾವುದೇ ಬ್ರ್ಯಾಂಡ್ ವ್ಯಾಲ್ಯೂಗಿಂತ ಹೆಚ್ಚಾಗಿ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಬಹಳ ಮುಖ್ಯ ಎನಿಸಿದೆ. ಜನರು ಬಿಸ್ಲೇರಿ ಕೊಡಿ ಎಂದು ಕೇಳುತ್ತಾರಾದರೂ ಬಿಸ್ಲೇರಿ ಬ್ರ್ಯಾಂಡ್‌ನ ಬಾಟಲ್ ಕೊಡಿ ಎಂದು ಕೇಳೋದಿಲ್ಲ. ಇದೊಂದು ರೀತಿಯಲ್ಲಿ ಔಷಧ ಅಂಗಡಿಯಲ್ಲಿ ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಮಾರುವ ರೀತಿ. ಜನರು ಪ್ಯಾರಾಸಿಟಮಾಲ್ ಕೇಳಿದರೆ ಮೊದಲೆಲ್ಲಾ ಕಾಲ್‌ಪೋಲ್ ಕೊಡುತ್ತಿದ್ದರು. ಈಗ ಡೋಲೋ ಕೊಡುತ್ತಾರೆ. ಅದೇ ರೀತಿ ವಿವಿಧ ಅಂಗಡಿಯಲ್ಲಿ ನೀವು ನೀರಿನ ಬಾಟಲ್ ಕೇಳಿದರೆ ಬಿಸ್ಲೇರಿ ಬಾಟಲ್ ಬಿಟ್ಟು ಬೇರೆ ಯಾವುದೇ ಕೊಟ್ಟರೂ ಜನರು ಸ್ವೀಕರಿಸುತ್ತಾರೆ. ಅಂತಿಮವಾಗಿ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಇಲ್ಲಿ ಮುಖ್ಯ.
ಬಿಸ್ಲೇರಿ ಕಂಪನಿಯ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್ ಹಿಂದಿನಿಂದಲೂ ಬಲವಾಗಿಯೇ ಬೆಳೆದುಬಂದಿದೆ. ಆದರೆ, ಮುಂದೆಯೂ ಇದನ್ನು ಇದೇ ರೀತಿ ಮುಂದುವರಿಸಲು ರಮೇಶ್ ಚೌಹಾಣ್‌ಗೆ ಸಾಧ್ಯವಾಗದೇ ಹೋಗುತ್ತಿರಬಹುದು. ಅದಕ್ಕೆ ಅವರು ಕಂಪನಿಯನ್ನು ಉತ್ತಮ ಸ್ಥಿತಿಯಲ್ಲಿದ್ದಾಗಲೇ ಮಾರಾಟ ಮಾಡುತ್ತಿರಬಹುದು.
ಪಾರ್ಲೆ ಹಿನ್ನೆಲೆಯ ರಮೇಶ್ ಚೌಹಾಣ್
ರಮೇಶ್ ಚೌಹಾಣ್ ಸಾಮಾನ್ಯ ಉದ್ಯಮಿಯಲ್ಲ. ಮುಂಬೈನ ಪ್ರಸಿದ್ಧ ಚೌಹಾಣ್ ಕುಟುಂಬದ ಸದಸ್ಯರು. ವಿಶ್ವದ ಅತ್ಯುತ್ತಮ ಬಿಸ್ಕತ್ ಬ್ರ್ಯಾಂಡ್ ಎನಿಸಿದ ಪಾರ್ಲೆ-ಜಿ ಸ್ಥಾಪಿಸಿದ ಕುಟುಂಬಕ್ಕೆ ಸೇರಿದವರು. ಮುಂಬೈನ ವಿಲೆ ಪಾರ್ಲೆ ಎಂಬ ಪ್ರದೇಶದ ಇವರು 1929ರಲ್ಲಿ ತಮ್ಮ ವಾಸಸ್ಥಳ ಸಮೀಪವೇ ಬಿಸ್ಕರ್ ಕಂಪನಿ ಆರಂಭಿಸಿ ಪಾರ್ಲೆ ಪ್ರಾಡಕ್ಟ್ಸ್ ಎಂದು ಹೆಸರಿಡುತ್ತಾರೆ.
ವಿಜಯ್ ಚೌಹಾಣ್, ಪ್ರಕಾಶ್ ಚೌಹಾಣ್ ಮತ್ತು ರಮೇಶ್ ಚೌಹಾಣ್ ಅವರು ಈ ಕುಟುಂಬದ ಸದಸ್ಯರು. ಮುಂದೆ ಪಾರ್ಲೆ ಕಂಪನಿಯ ವಿವಿಧ ವ್ಯವಹಾರಗಳು ಕುಟುಂಬ ಸದಸ್ಯರಲ್ಲಿ ಹಂಚಿಹೋಗುತ್ತವೆ. ಪಾರ್ಲೆ ಜಿ, 20-20, ಮೊನಾಕೋ, ಕ್ರಾಕ್ ಜ್ಯಾಕ್ ಇತ್ಯಾದಿ ಬಿಸ್ಕತ್‌ಗಳು, ಮ್ಯಾಂಗೋ ಬೈಟ್, ಪಾಪಿನ್ಸ್ ಮೊದಲಾದ ಉತ್ಪನ್ನಗಳು ಪಾರ್ಲೆ ಪ್ರಾಡಕ್ಟ್ಸ್ ಅಡಿಗೆ ಬಂದು ವಿಜಯ್ ಚೌಹಾಣ್ ಮತ್ತವರ ಕುಟುಂಬದ ಒಡೆತನಕ್ಕೆ ಸೇರುತ್ತವೆ.
ಫ್ರೂಟಿ, ಆ್ಯಪಿ ಮೊದಲಾದ ಬ್ರ್ಯಾಂಡ್‌ಗಳ ಜ್ಯೂಸ್‌ಗಳ ವ್ಯವಹಾರ ಇರುವ ಪಾರ್ಲೆ ಆಗ್ರೋ ಪ್ರಕಾಶ್ ಚೌಹಾಣ್ ಮಾಲೀಕತ್ವಕ್ಕೆ ಹೋಗುತ್ತದೆ. ಇನ್ನು, ಪಾರ್ಲೆ ಬಿಸ್ಲೇರಿಯು ರಮೇಶ್ ಚೌಹಾಣ್ ಕುಟುಂಬದ ಒಡೆತನಕ್ಕೆ ಸಿಗುತ್ತದೆ.
ರಮೇಶ್ ಚೌಹಾಣ್ ಬಿಸ್ಲೇರಿ ಮಾತ್ರವಲ್ಲ, ಎಪ್ಪತ್ತರ ದಶಕದಲ್ಲಿ ಮಾಜಾ ಎಂಬ ಹಣ್ಣಿನ ಜ್ಯೂಸ್ ಪ್ಯಾಕೇಟ್ ವ್ಯವಹಾರ ಆರಂಬಿಸುತ್ತಾರೆ. ಲಿಮ್ಕಾ, ಗೋಲ್ಡ್ ಸ್ಪಾಟ್ ಎಂಬ ಸಾಫ್ಟ್ ಡ್ರಿಂಕ್ಸ್ ಆರಂಭಿಸುತ್ತಾರೆ. ಥಮ್ಸ್ ಅಪ್ ಎಂಬ ಕೋಲಾ ಪಾನೀಯ ಹೊರತರುತ್ತಾರೆ. ಇವೆಲ್ಲವೂ ಗಟ್ಟಿ ಬ್ರ್ಯಾಂಡ್‌ಗಳಾಗಿ ರೂಪುಗೊಳ್ಳುತ್ತವೆ. ಬಿಸ್ಲೇರಿ ಬಿಟ್ಟು ಉಳಿದ ಸಾಫ್ಟ್ ಡ್ರಿಂಕ್‌ಗಳನ್ನು ಅವರು 1993ರಲ್ಲಿ ಕೋಕ ಕೋಲಾಗೆ ಮಾರುತ್ತಾರೆ. ಆಗಿನ ಕಾಲಕ್ಕೆ 400 ಕೋಟಿ ರೂಪಾಯಿಗೆ ಆ ಡೀಲಿಂಗ್ ನಡೆಯುತ್ತದೆ.
ಬಿಸ್ಲೇರಿ ಬ್ರ್ಯಾಂಡ್ ಇಟಲಿಯದ್ದು
ಮಾಜಾ, ಥಮ್ಸ್ ಅಪ್ ಇತ್ಯಾದಿಯನ್ನು ರಮೇಶ್ ಚೌಹಾಣ್ ಅವರೇ ಬ್ರ್ಯಾಂಡ್ ಕಟ್ಟಿ ಬೆಳೆಸಿದ್ದು ಹೌದಾದರೂ ಬಿಸ್ಲೇರಿಯು ಅವರ ಒರಿಜಿನಲ್ ಕಂಪನಿಯಲ್ಲ. 20ನೇ ಶತಮಾನದ ಆರಂಭದಲ್ಲಿ ಇಟಲಿಯ ಫೆಲೈಸ್ ಬಿಸ್ಲೇರಿ ಎಂಬುವವರು ಆರಂಭಿಸಿದ ಮಿನರಲ್ ವಾಟರ್ ಬ್ರ್ಯಾಂಡ್ ಅದು. 1965ರಲ್ಲಿ ಇಟಲಿಯ ವೈದ್ಯ ಸೆಸಾರಿ ರೊಸ್ಸಿ ಮತ್ತು ಭಾರತೀಯ ಉದ್ಯಮಿ ಖುಷ್ರೂ ಸುಂಟೂಕ್ ಅವರು ಬಿಸ್ಲೇರಿ ಬ್ರ್ಯಾಂಡ್ ಅಡಿಯಲ್ಲಿ ಪ್ಯಾಕೇಜ್ಡ್ ವಾಟರ್ ವ್ಯವಹಾರವನ್ನು ಭಾರತದಲ್ಲಿ ಆರಂಭಿಸುತ್ತಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ನೀರಿನ ಘಟಕ ಸ್ಥಾಪಿಸುತ್ತಾರೆ. ಮುಂಬೈನ ಲಕ್ಸುರಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೊದಲಿಗೆ ಇದನ್ನು ಮಾರಲಾಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ ನೆಲೆಯೂರಲು ಸಾಧ್ಯವಾಗದೇ ಇದ್ದರಿಂದ ಭಾರತದಿಂದ ಕಾಲ್ತೆಯಲು ಕಂಪನಿ ನಿರ್ಧರಿಸುತ್ತದೆ.
ಆಗ ಪಾರ್ಲೆ ಗ್ರೂಪ್‌ನಲ್ಲಿದ್ದ ರಮೇಶ್ ಚೌಹಾಣ್ ಅವರು 1969ರಲ್ಲಿ ಬಿಸ್ಲೇರಿಯನ್ನು ಕೊಳ್ಳುತ್ತಾರೆ. ದುಃಸ್ಥಿತಿಯಲ್ಲಿದ್ದ ಬಿಸ್ಲೇರಿಯ ದಾಹ ನೀಗಿಸಿ ಭರ್ಜರಿಯಾಗಿ ಬೆಳವಣಿಗೆ ಸಾಧಿಸಲು ಸಾಧ್ಯವಾಗಿಸಿದ್ದು ರಮೇಶ್ ಚೌಹಾಣ್ ಅವರ ಅಪ್ರತಿಮ ವ್ಯಾವಹಾರಿಕ ಚತುರತೆಯೇ.
ಬಿಸ್ಲೇರಿ ಬಳಿಕ ರಮೇಶ್ ಚೌಹಾಣ್ ಮಾಝಾ, ಥಮ್ಸ್ ಅಪ್, ಲಿಮ್ಕಾ ಮೊದಲಾದ ಬ್ರ್ಯಾಂಡ್‌ಗಳನ್ನು ಕಟ್ಟಿ ಎತ್ತರಕ್ಕೆ ಕೊಂಡೊಯ್ದರು. ಅದಾದ ಬಳಿಕ ರಮೇಶ್ ಚೌಹಾಣ್ ಅವರಿಂದ ಗಟ್ಟಿಯಾದ ಬ್ರ್ಯಾಂಡ್ ಕಟ್ಟಲು ಸಾಧ್ಯವಾಗಲಿಲ್ಲ. ಬಿಸ್ಲೇರಿಯನ್ನು ಉಳಿಸಿಕೊಂಡು ಹೋಗಿದ್ದೇ ಅವರ ಇತ್ತೀಚಿನ ಸಾಧನೆ ಎಂಬಂತಾಗಿದೆ.


Click it and Unblock the Notifications