BMTC Pass rate hike: ಬಸ್ ಟಿಕೆಟ್ ಆಯ್ತು, ಮೆಟ್ರೋ ಟಿಕೆಟ್ ಆಯ್ತು ಇದೀಗ ಪಾಸ್ ಬೆಲೆ ಕೂಡ ಏರಿಕೆಯಾಗಿದೆ.ಇನ್ನೂ ವರ್ಷದ ಒಂದುತಿಂಗಳೇ ಮುಗಿದಿಲ್ಲ ಆಗಲೇ ಇಷ್ಟೋಂದು ಬೆಲೆ ಏರಿಕೆಯ ಶಾಕ್‌ನ್ನು ಪ್ರಯಾಣಿಕರಿಗೆ ಸಾರಿಗೆ ಇಲಾಖೆ ನೀಡುತ್ತಿದೆ. ಪದೇ ಪದೇ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಸಾರಿಗೆ ಇಲಾಖೆಯು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಿಲ್ಲ.ಯಾಕೆಂದರೆ ಇದೆಲ್ಲಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರದ ಹೊಸ ವರ್ಷದ ಉಡುಗೊರೆ.
ಹೌದು, ಈಗಲೇ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಿರುವ ಬೆನ್ನಲ್ಲೇ ಈಗ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದ್ದು, ಇಂದಿನಿಂದ ಬಿಎಂಟಿಸಿ ಪಾಸ್‌ಗಳ ಹೊಸ ದರ ಏರಿಕೆ ಅನ್ವಯವಾಗುತ್ತದೆ. ಈಗಲೇ ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಸಹ ಹೊರಡಿಸಲಾಗಿದೆ.

ಇಲ್ಲಿದೆ ಬಸ್ ಪಾಸ್ ಪ್ರಯಾಣದ ದರ ಹೆಚ್ಚಳದ ಪಟ್ಟಿ
- ಡೈಲಿ ಪಾಸ್ ದರ: ಹಳೆಯ ಬಸ್ ಪಾಸ್ ದರ 70 ರೂಪಾಯಿ ಇದ್ದಿದ್ದು ಈಗ 80 ರೂಪಾಯಿ ಆಗಿದೆ.
- ವಾರದ ಪಾಸ್ ದರ: 300 ರೂ ಇದ್ದ ಬಿಎಂಟಿಸಿ ವಾರದ ಪಾಸ್ ದರ ಈಗ 350ರೂಗೆ ಏರಿಕೆಯಾಗಿದೆ.
- ಹಿರಿಯ ನಾಗರಿಕೆ ಮಾಸಿಕ ಪಾಸ್: 945ರೂ ಇದ್ದ ಪಾಸ್ ಈಗ 1080ರೂ ಆಗಿದೆ.
- ಸಾಮಾನ್ಯ ಮಾಸಿಕ ಪಾಸ್: 1050ರೂ ಇದ್ದದು ಈಗ 1200ರೂಗೆ ಏರಿಕೆಯಾಗಿದೆ.
- ನೈಸ್ ರೋಡ್ ಮಾಸಿಕ ಪಾಸ್ : 2200ರೂ ಇದ್ದ ನೈಸ್ ರೋಡ್ ಮಾಸಿಕ ಪಾಸ್ ದರ ಈಗ 2350 ರೂಗೆ ಏರಿಕೆಯಾಗಿದೆ.
ಮತ್ತೆ ಬೆಲೆ ಏರಿಕೆ ಶಾಕ್! ಬಸ್ ಆಯ್ತು, ಈಗ ಮೆಟ್ರೋ ಟಿಕೆಟ್ ದರ ಏರಿಕೆ.. ಎಷ್ಟು?
ಒಪ್ಪಂದದ ಮೇಲೆ ಪಡೆಯುವ ಬಸ್‌ಗಳ ಮೇಲೂ ದರ ಏರಿಕೆಯ ಬಿಸಿ
ಬಸ್‌ಗಳನ್ನು ಒಪ್ಪಂದದ ಮೇಲೆ ಪಡೆಯುವ ದರವನ್ನು ಸಾರಿಗೆ ಇಲಾಖೆ ಏರಿಕೆ ಮಾಡಿದೆ.ಗಾಯದ ಮೇಲೆ ಮತ್ತೋಂದು ಬರೆ ಎಳೆದಿದೆ. ಇನ್ನೂ ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಈ ದರವನ್ನು ಕೆಎಸ್‌ಆರ್‌ಟಿಸಿ ಶೇಕಡಾ.15ರಷ್ಟು ಹೆಚ್ಚಳ ಮಾಡಿದೆ.
16 ಬಗೆಯ ಬಸ್‌ಗಳ ಬಾಡಿಗೆ ದರ ಹೆಚ್ಚಳ
ಇನ್ನೂ ಪ್ರತೀ ಕಿ.ಮೀ ದರದ ಮೇಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದ್ದು,ಸಾಮಾನ್ಯ ಸಾರಿಗೆ, ಅಶ್ವಮೇಧ, ಮಿಡಿ ಬಸ್, ಪಲಕ್ಕಿ ಸೇರಿದಂತೆ 16 ಬಗೆಯ ಬಸ್‌ಗಳ ಬಾಡಿಗೆ ದರವನ್ನು ಸಹ ಏರಿಕೆ ಮಾಡಲಾಗಿದೆ. ಇನ್ನು ಈಗಾಗಲೇ ಬುಕ್ಕಿಂಗ್ ಆಗಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸುವಂತೆ ಕೆಎಸ್‌ಆರ್‌ಟಿಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಸಾರಿಗೆ ಇಲಾಖೆ ಬೆಲೆ ಏರಿಕೆಗೆ ಕೊಟ್ಟ ಕಾರಣಗಳೇನು?
- ಕೋವಿಡ್ ಸಂದರ್ಭದಲ್ಲಿ ಸಂಪೂರ್ಣ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.ಕೋವಿಡ್ ಸಂದರ್ಭದಲ್ಲಿ ಸರ್ಕಾರವು ನಿವ್ವಳ ವೇತನ ಪಾವತಿಗೆ ಅನುದಾನ ನೀಡಿದೆ. ಇದರಿಂದ ಒಟ್ಟು ಮೂಲ ವೇತನ ಹಾಗೂ ನಿವ್ವಳ ವೇತನದ ವ್ಯತ್ಯಾಸದ ಮೊತ್ತವು ಕ್ರೋಢೀಕರಿಸಲಾಗಿದೆ.
- ಕಳೆದ ಐದು ವರ್ಷಗಳಿಂದ ಟಿಕೆಟ್ ದರ ಪರಿಷ್ಕರಣೆ ಮಾಡದಿರುವುದು (ಬಿ.ಎಂ.ಟಿ.ಸಿ ಯಲ್ಲಿ 2014 ರಿಂದ ಟಿಕೆಟ್ ದರ ಪರಿಷ್ಕರಣೆ ಆಗಿಲ್ಲ.)
- ಡೀಸೆಲ್ ದರ ಹೆಚ್ಚಾಗಿದೆ. (ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಡಿಸೆಲ್ ವೆಚ್ಚ : ರೂ.9.16 ಕೋಟಿ ಪ್ರಸ್ತುತ ಪ್ರತಿದಿನದ ಸರಾಸರಿ ಡಿಸೆಲ್ ವೆಚ್ಚ : ರೂ.13.21 ಕೋಟಿ)
- ಕಳೆದ 12 ವರ್ಷಗಳಿಂದ ವಿದ್ಯಾರ್ಥಿ ಪಾಸ್ ದರ ಹೆಚ್ಚಳ ಮಾಡಲಾಗಿದೆ.
- 2020-2023 ಅವಧಿಯಲ್ಲಿ 15% ವೇತನ ಪರಿಷ್ಕರಣೆಯಿಂದ ಸಿಬ್ಬಂದಿ ವೆಚ್ಚ ಹೆಚ್ಚಳವಾಗಿದೆ.
- ಪ್ರಯಾಣಿಕರ ಟಿಕೆಟ್ ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಸಿಬ್ಬಂದಿ ವೆಚ್ಚ ರೂ.12.85 ಕೋಟಿ ಪ್ರಸ್ತುತ ಪ್ರತಿದಿನದ ಸರಾಸರಿ ಸಿಬ್ಬಂದಿ ವೆಚ್ಚ: ರೂ.18.36 ಕೋಟಿ ಆಗಿರುವುದು.
- 2023 ಮಾರ್ಚ್ ನಲ್ಲಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡಿರುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
- ನಿವೃತ್ತಿ ಹೊಂದಿದ 11694 ಸಿಬ್ಬಂದಿಗಳಿಗೆ 2020 ರಿಂದ ಬಾಕಿ ಉಳಿದಿದ್ದ ಗಳಿಕೆ ರಜೆ ನಗದೀಕರಣ ಹಾಗೂ ಉಪಧನ ಹಿಂಬಾಕಿ ಮೊತ್ತ ರೂ.224.05 ಕೋಟಿ ಪಾವತಿಸಲಾಗಿದೆ.
- ಶಕ್ತಿ ಯೋಜನೆಯ ಉಚಿತ ಸಂಚಾರಕ್ಕೆ ಅವಕಾಶದಿಂದಲ್ಲೂ ಸಾರಿಗೆ ಇಲಾಖೆಗೆ ಸಂಕಷ್ಟ ಬಂದಿದೆ.
- ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ,ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಜಾಸ್ತಿ ಇದೆ.


Click it and Unblock the Notifications