ಅಂತೂ ಬೆಂಗಳೂರಿನಲ್ಲಿ ಮೇ 4ರಿಂದ (ಸೋಮವಾರ) ಕೆಲವು ವ್ಯಾಪಾರ- ವ್ಯವಹಾರಗಳಿಗೆ ಕೊರೊನಾ ಲಾಕ್ ಡೌನ್ ನಿಂದ ವಿನಾಯಿತಿ ದೊರೆಯಲಿದೆ. ಐದು ವಾರಗಳ ಲಾಕ್ ಡೌನ್ ನಂತರ ಬೆಂಗಳೂರು ವ್ಯಾಪಾರ- ವಹಿವಾಟು ಉಸಿರಾಟ ಆರಂಭಿಸಲಿದೆ. ಆದರೆ ಜನ ಹಾಗೂ ವಾಹನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಇನ್ನು ವರ್ಕ್ ಫ್ರಮ್ ಹೋಮ್ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ.
ಆದರೆ, ರಸ್ತೆಗಳಲ್ಲಿನ ಬ್ಯಾರಿಕೇಡ್ ಗಳು ಹಾಗೇ ಮುಂದುವರಿಯುತ್ತವೆ. ಲಾಕ್ ಡೌನ್ ಅನ್ನು ಪೂರ್ಣವಾಗಿ ತೆರವು ಮಾಡಿದ ಮೇಲೇ ಈ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಬೆಂಗಳೂರು ನಗರ ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ. ಜತೆಗೆ ವಾಹನಗಳು ಹಾಗೂ ಜನರ ಪರಿಶೀಲನೆ ಮುಂದುವರಿಯಲಿದೆ.
2 ಸಾವಿರ ರುಪಾಯಿ ತನಕ ದಂಡ
ಕೇಂದ್ರ ಗುರುತಿಸಿರುವಂತೆ ಕರ್ನಾಟಕದಲ್ಲಿ ಮೂರು ಜಿಲ್ಲೆಗಳು 'ರೆಡ್ ಝೋನ್'ನಲ್ಲಿವೆ. ಅದರಲ್ಲಿ ಬೆಂಗಳೂರು ಸಹ ಇದೆ. ಆದರೆ ರಾಜ್ಯ ಸರ್ಕಾರಕ್ಕೆ ವರ್ಗೀಕರಣ ಮಾಡುವುದಕ್ಕೆ ಅಧಿಕಾರ ನೀಡಳಾಗಿದೆ. ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಲ್ಲಿ 2 ಸಾವಿರ ರುಪಾಯಿ ತನಕ ದಂಡ ವಿಧಿಸಬಹುದು. ಕರ್ನಾಟಕದಲ್ಲಿ 123 ಕಂಟೇನ್ ಮೆಂಟ್ ಝೋನ್ ಗಳಿವೆ. ಅದರಲ್ಲಿ ಬೆಂಗಳೂರಲ್ಲಿ 23 ಝೋನ್ ಇದ್ದು, ಈವರೆಗೆ ದಾಖಲಾದ 149 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 70 ಪ್ರಕರಣ ಸಕ್ರಿಯವಾಗಿವೆ. ಭಾನುವಾರ ಹದಿಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಲ್ಲಿ ನಾಲ್ಕು ಪತ್ತೆಯಾಗಿವೆ.
ವರ್ಕ್ ಫ್ರಮ್ ಹೋಮ್ ಮುಂದುವರಿಕೆ
ಕೆಲಸಕ್ಕೆ ಈ ತಕ್ಷಣದಿಂದಲೇ ಹಿಂತಿರುಗಬೇಕು ಅನ್ನೋ ತುರ್ತಿನಲ್ಲಿ ನಾವಿಲ್ಲ. ಮೊದಲನೇ ಹಂತದಲ್ಲಿ 5 ಪರ್ಸೆಂಟ್ ಗಿಂತ ಕಡಿಮೆ ಮಂದಿ ಕೆಲಸಕ್ಕಾಗಿ ಕಚೇರಿಗೆ ಹಿಂತಿರುಗಬಹುದು ಎಂದು ಇನ್ಫೋಸಿಸ್ ಚೀಫ್ ಆಪರೇಟಿಂಗ್ ಆಫೀಸರ್ ಬಿ. ಪ್ರವೀಣ್ ರಾವ್ ಹೇಳಿದ್ದಾರೆ. ಹಂತಹಂತವಾಗಿ ಸಿಬ್ಬಂದಿ ಉದ್ಯೋಗಕ್ಕೆ ಮರಳಲಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ. ಕೇರಳದಲ್ಲಿ ಸೀಮಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ ವಿಪ್ರೋ ಕಾರ್ಯ ನಿರ್ವಹಣೆ ಆರಂಭಿಸಿದೆ. ಆದರೆ ಬೆಂಗಳೂರಿನಲ್ಲಿ ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರಿಸುವುದಕ್ಕೆ ತೀರ್ಮಾನ ಮಾಡಿದೆ.
ಎಚ್ ಎಎಲ್ ನಿಂದ ಕಾರ್ಯ ನಿರ್ವಹಣೆ ಶುರು
ಸಾರ್ವಜನಿಕ ಸ್ವಾಮ್ಯದ ಎಚ್ ಎಎಲ್ ಕಳೆದ ಮಂಗಳವಾರದಿಂದ ಶೇಕಡಾ ನೂರರಷ್ಟು ಕಾರ್ಯ ನಿರ್ವಹಣೆಯನ್ನು ಎರಡು ಪಾಳಿಯಲ್ಲಿ ಆರಂಭಿಸಿದೆ. ಸದ್ಯಕ್ಕೆ ಬಿಎಂಟಿಸಿ ತುರ್ತು ಸೇವೆಗಳನ್ನು ಮಾತ್ರ ಒದಗಿಸುತ್ತದೆ. ಆದ್ದರಿಂದ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಇನ್ನು ಉಬರ್ ಮೆಡಿಕ್ ಮತ್ತು ಉಬರ್ ಎಸೆನ್ಷಿಯಲ್ ಸೇವೆಯನ್ನು ರೆಡ್ ಝೋನ್ ಗಳಿರುವ ಬೆಂಗಳೂರು, ಮುಂಬೈ ಮತ್ತಿತರ ನಗರಗಳಲ್ಲಿ ಒದಗಿಸುತ್ತಿವೆ. ಕರ್ನಾಟಕ ಹೈ ಕೋರ್ಟ್ ನಲ್ಲಿ ಸೀಮಿತ ಸಂಖ್ಯೆಯ ಪೀಠಗಳು ಕಾರ್ಯ ನಿರ್ವಹಿಸಲಿವೆ. ಇನ್ನು ನಗರದಲ್ಲಿ ಇರುವ ಇತರ ಕೋರ್ಟ್ ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
ಮದ್ಯ ಮಾರಾಟಕ್ಕೆ ಅನುಮತಿ
ಮಾಲ್ ಗಳು, ಸಿನಿಮಾ ಮಂದಿರಗಳು, ಧಾರ್ಮಿಕ ಸ್ಥಳಗಳು, ಕ್ಷೌರದಂಗಡಿ ಕೂಡ ತೆರೆಯುವಂತಿಲ್ಲ. ಆದರೆ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಮದ್ಯದ ಮಳಿಗೆಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿದೆ. ಏಕೆಂದರೆ ಅಬಕಾರಿ ಇಲಾಖೆಯು ರಾಜ್ಯ ಸರ್ಕಾರದ ಪಾಲಿಗೆ ದೊಡ್ಡ ಆದಾಯ ತಂದುಕೊಡುವಂಥ ಮೂಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಯಿಂದ 22,700 ಕೋಟಿ ರುಪಾಯಿ ಆದಾಯ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ ಕೊರೊನಾ ಲಾಕ್ ಡೌನ್ ಕಾರಣಕ್ಕೆ ಈಗಾಗಲೇ 2000 ಕೋಟಿ ರುಪಾಯಿ ನಷ್ಟವಾಗಿದೆ.


Click it and Unblock the Notifications